* ಮಧ್ಯವರ್ತಿಗಳ ಹಾವಳಿಗೆ ರೈತರು ತತ್ತರ
* ಮತ್ತೆ ನಾಟಿ ಮಾಡುವ ಸಮಯ ಬಂದರೂ ಭತ್ತ ಯಾರೂ ಕೇಳುತ್ತಿಲ್ಲ
* ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದರೂ ದಕ್ಕದ ಲಾಭ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.21): ಮುಂಗಾರು ಹಂಗಾಮು ಬಿತ್ತನೆಗೆ ಸಮಯ ಬಂದರೂ ಬತ್ತವನ್ನು ಕೇಳುವವರೇ ಇಲ್ಲ. ಸಾಲು ಸಾಲು ಭತ್ತದ ರಾಶಿಗಳು ಈಗ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದುದ್ದಕ್ಕೂ ಕಾಣುತ್ತಿವೆ. ಹೀಗಾಗಿ, ಮುಂಗಾರು ಭತ್ತ ಬಿತ್ತನೆ ಮಾಡುವುದಕ್ಕೆ ರೈತರು ಹಿಂದೇಟು ಹಾಕುವಂತೆ ಆಗಿದೆ.
ಹೌದು, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲೂ ಸುಮಾರು 8 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಬೇಸಿಗೆಯ ದ ಶೇ. 50ರಷ್ಟು ಮಾರಾಟವೇ ಆಗಿಲ್ಲ. ಕೊಳ್ಳುವುದಕ್ಕೂ ಯಾರು ಮುಂದೆ ಬರುತ್ತಿಲ್ಲ. ಇನ್ನು ತೆರೆದಿದ್ದ ಬೆಂಬಲ ಬೆಲೆ ಕೇಂದ್ರದಲ್ಲಿ ನೂರೆಂಟು ಷರತ್ತು ಇದ್ದಿದ್ದರಿಂದ ಮಾರಾಟ ಮಾಡಲು ರೈತರಿಗೆ ಆಗಲೇ ಇಲ್ಲ.
ತಗ್ಗದ ಅಕ್ಕಿ ದರ:
ಮಾರುಕಟ್ಟೆಯಲ್ಲಿ ಈಗಲೂ ಅಕ್ಕಿಯ ರೇಟು ಒಂಚೂರು ತಗ್ಗಿಲ್ಲ. ಈಗಲೂ ಕೆಜಿಗೆ 40ರಿಂದ 50ರ ವರೆಗೆ ಇದೆ. ಆದರೆ, ಭತ್ತ ಮಾತ್ರ ಕಳೆದೊಂದು ವರ್ಷದಿಂದ ಕೇಳುವವರೇ ಇಲ್ಲದಂತೆ ಆಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಯಾರು ಕೇಳುತ್ತಿಲ್ಲ. ನಮ್ಮ ಪಾಡು ದೇವರಿಗೆ ಪ್ರೀತಿ ಎನ್ನುತ್ತಾರೆ ರೈತರು.
ರೈತರಿಗೆ ಗುಡ್‌ನ್ಯೂಸ್: ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ!
ಮಾರುಕಟ್ಟೆಯಲ್ಲಿ ದರ ಕುಸಿದಿರುವುದಷ್ಟೇ ಅಲ್ಲ, ಯಾರೂ ಖರೀದಿ ಮಾಡುತ್ತಿಲ್ಲ ಎಂದರೆ ನಾವೇನು ಮಾಡಬೇಕು? ಈಗ ಹೊಲದಲ್ಲಿಯೇ ರಾಶಿ ಮಾಡಿದ್ದು, ಮುಂಗಾರು ನಾಟಿ ಮಾಡುವ ಹಂಗಾಮು ಬಂದರೂ ಇನ್ನು ಮಾರಾಟವಾಗಿಲ್ಲ. ನೀರು ಬಂದರೆ, ನಾಟಿ ಮಾಡಿದರೆ, ಹೊಲದಲ್ಲಿ ಇರುವ ಭತ್ತವನ್ನು ಎಲ್ಲಿ ಸಂಗ್ರಹ ಮಾಡಿಟ್ಟುಕೊಳ್ಳುವುದು? ಮಾಡಿದ ಸಾಲ ಹೇಗೆ ತೀರಿಸುವುದು? ಎನ್ನುವುದೇ ರೈತರ ಮುಂದೆ ಇರುವ ಬಹುದೊಡ್ಡ ಸವಾಲು.
ಮೈಮರೆತ ಸರ್ಕಾರ:
ಇಷ್ಟಾದರೂ ಎಚ್ಚೆತ್ತಂತೆ ಕಾಣುತ್ತಿಲ್ಲ. ತೆರೆದಿದ್ದ ಬೆಂಬಲ ಬೆಲೆ ಕೇಂದ್ರದಲ್ಲಿ ರೈತರ ಭತ್ತವನ್ನು ಖರೀದಿ ಮಾಡಲು ನೂರೆಂಟು ಷರತ್ತು ವಿಧಿಸಿ, ರೈತರು ಮಾರಾಟ ಮಾಡದಂತೆ ಮಾಡಿದೆ. ಈಗ ದಿನೇ ದಿನೇ ಮಾರುಕಟ್ಟೆಯಲ್ಲಿ ಬತ್ತದ ದರ ಕುಸಿಯುತ್ತಲೇ ಇದೆ.
ದುರಂತ ಎಂದರೆ, ರಾಜ್ಯದಲ್ಲಿ ರೈತರು ಬೆಳೆದಿರುವ ಭತ್ತವನ್ನು ಕೇಳುವವರೇ ಇಲ್ಲದಂತೆ ಆಗಿದ್ದರೂ ಅನ್ಯ ರಾಜ್ಯದ ಅಕ್ಕಿಯನ್ನು ಖರೀದಿ ಮಾಡಿ, ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುತ್ತಿದೆ. ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ ಎಂದರೆ ಪಡಿತರ ವ್ಯವಸ್ಥೆಯಲ್ಲಿ ಅವುಗಳು ಮಾರಾಟವಾಗುವುದಿಲ್ಲ. ಹೀಗಾಗಿ, ಅವುಗಳನ್ನು ಏನು ಮಾಡುವುದು ಎನ್ನುತ್ತದೆ ಸರ್ಕಾರ. ಅಕ್ಕಿಯನ್ನು ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುತ್ತದೆಯಾದರೂ ಅನ್ಯರಾಜ್ಯದಿಂದ ಖರೀದಿ ಮಾಡಿ ವಿತರಣೆ ಮಾಡುತ್ತಾರೆ. ಇದ್ಯಾವ ಲೆಕ್ಕಾಚಾರ ಎನ್ನುವುದು ರೈತರು ಪ್ರಶ್ನೆ.
ದರ ಕುಸಿತವನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ರೈತರ ಶೋಷಣೆ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಬಳಿಯೇ ಹೋದರೂ ಖರೀದಿಸಲು ಸಿದ್ಧರಾಗುವುದಿಲ್ಲ, ತೀರಾ ಅಗ್ಗದ ದರಕ್ಕೆ ಖರೀದಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ.
ಭತ್ತ 75 ಕೆಜಿ ತೂಕದ ಚೀಲವನ್ನು ಕೇವಲ 1000-1100ಕ್ಕೆ ಕೇಳುತ್ತಿದ್ದಾರೆ. ಆದರೆ, ನಮಗೆ ಕನಿಷ್ಠ 1500-1600ಕ್ಕೆ ಮಾರಾಟವಾದರೆ ಮಾತ್ರ ಮಾಡಿದ ಖರ್ಚು ಹೋಗಿ, ಅಲ್ವಸ್ವಲ್ಪ ಲಾಭ ಬರುತ್ತದೆ. ಇಲ್ಲದಿದ್ದರೆ ಮಾಡಿದ ಖರ್ಚು ಬರುವುದಿಲ್ಲ.
ಅಯ್ಯೋ ನಮ್ಮ ಪಾಡು ಯಾರಿಗೆ ಹೇಳೋಣ ಸಾರ್? ಹೊಲದಲ್ಲಿಯೇ ರಾಶಿ ಮಾಡಿದ್ದೇವೆ. ಯಾರೂ ಕೇಳುತ್ತಲೇ ಇಲ್ಲ. ಈಗ ಮುಂಗಾರು ನಾಟಿ ಮಾಡಬೇಕು. ಇದೆಲ್ಲವನ್ನು ನೋಡಿದರೆ ಈ ವರ್ಷ ನಾಟಿ ಮಾಡುವುದೇ ಬೇಡ ಎನಿಸುತ್ತದೆ ಎಂದು ಅಗಳಿಕೇರಿ ಗ್ರಾಮದ ಪರಸಪ್ಪ ಹಂಚಿನಾಳ ಎಂಬುವರು ತಮ್ಮ ಸಂಕಷ್ಟವನ್ನ ತೋಡಿಕೊಂಡಿದ್ದಾರೆ.