* ಹೆಸರು ಬಿತ್ತಿ ಮೂರು ತಿಂಗಳಾಯ್ತು, ನಾಲ್ಕಡಿ ಫಸಲಾದ್ರೂ ಹೂವು ಬಿಟ್ಟಿಲ್ಲ, ಕಾಯಿ ಕಟ್ಟಲಿಲ್ಲ
* ಕಲಬುರಗಿ ಜಿಲ್ಲೆಯಾದ್ಯಂತ ನಕಲಿ ಬೀಜದ ಜಾಲ
* ಸಂಕಷ್ಟಕ್ಕೆ ಕಣ್ಣೀರು ಹಾಕುತ್ತಿರುವ ರೈತರು
ಶೇಷಮೂರ್ತಿ ಅವಧಾನಿ
ಕಲಬುರಗಿ(ಸೆ.23): ಹಣದ ಬೆಳೆ ಎಂದು ಹೆಸರು ಬಿತ್ತಿದ್ವಿ, ಬಿತ್ತಿ 3 ತಿಂಗಳಾಯ್ತು, ಫಸಲೇನೋ ನಾಲ್ಕಡಿ ಬಂತು, ಹೂ ಬಿಟ್ಟಿಲ್ಲ, ಕಾಯಿ ಕಟ್ಟಿಲ್ಲ ಎಂದು ಕಲಬುರಗಿ(Kalaburagi) ಹೆಸರು ಬಿತ್ತಿದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಈ ಬಾರಿ 60 ರಿಂದ 70 ಸಾವಿರ ಹೆಕ್ಟೇರ್‌ನಲ್ಲಿ ಹೆಸರು ಬಿತ್ತಲ್ಪಟ್ಟಿದೆ. ಅಲ್ಪಾವಧಿ ಹಣದ ಬೆಳೆಯಾಗಿ ರೈತರಿಗೆ ಹೆಸರು ಅಚ್ಚುಮೆಚ್ಚು. ಹೀಗಾಗಿ ಹೆಸರು ಬಿತ್ತಿ ಬಹಣ ಮಾಡಿಕೊಂಡ ನಂತರ ಹಿಂಗಾರು ಬೇಸಾಯ ಮಾಡುತ್ತಾರೆ. ಆದರೆ ಈ ಬಾರಿ ರೈತರ ಲೆಕ್ಕಾಚಾರ ಉಲ್ಟಾಹೊಡೆದಿದೆ. ಸವಿರಾರು ರುಪಾಯಿ ಕೊಟ್ಟು ಹೆಸರು ಬೀಜ ಬಿತ್ತಿದರೂ ಅದು ಹೂ ಬಿಟ್ಟಿಲ್ಲ, ಕಾಯಿ ಕಟ್ಟಿಲ್ಲ. ತಾವು ಬಿತ್ತಿದ ಬೀಜ ನಕಲಿ, ಅದಕ್ಕೇ ಫಸಲು ಗೊಡ್ಡಾಗಿದೆ ಎಂದು ರೈತರು(Farmers) ಹೌಹಾರಿದ್ದಾರೆ.
undefined
ಚಿಂಚೋಳಿಯಲ್ಲಿ ರೈತರಿಗೆ ಟೋಪಿ:
ಚಿಂಚೋಳಿಯ ಚಿಮ್ಮನಚೋಡ್ ರೈತ ಸಂಪರ್ಕ ಕೇಂದ್ರದಲ್ಲಿ ಬರುವ ಚಂದನಕೇರಾ ರೈತರು ಹೆಸರು ಬೀಜ ಬಿತ್ತಿದರೂ ಅದು ಫಲ ಕೊಡದ್ದನ್ನು ಕಂಡು ಕಂಗಾಲಾಗಿದ್ದಾರೆ. ಹೆಚ್ಚು ಇಳುವರಿ ಬರುವ ಬೀಜವೆಂದು ಆಗ್ರೋ ಕೇಂದ್ರದವರು ಇವರಿಗೆ ಬಣ್ಣದ ಮಾತು ಹೇಳುತ್ತ ಬೀಜ ಮಾರಿದ್ದಾರೆ. ಇವರು ಬೀಜ ಬಿತ್ತಿ 3 ತಿಂಗಳು ಕಳೆದರೂ ಫಲವೇ ಬಿಟ್ಟಿಲ್ಲ. ಹೂವು- ಕಾಯಿ ಆಗದ ಕಾರಣ ರೈತರು ಹೌ ಹಾರಿದ್ದಾರೆ, ಬಾಜ ನಕಲಿ, ಅದಕ್ಕೇ ಗೊಡ್ಡಾಗಿದೆ ಎಂದು ತಮಗೊದಗಿ ಬಂದಿರುವ ಸಂಕಷ್ಟಕ್ಕೆ ಕಣ್ಣೀರು ಹಾಕುತ್ತಿದ್ದಾರೆ.
ಯಾದಗಿರಿ: ನಕಲಿ ಹತ್ತಿಬೀಜ ಮಾರಾಟ, ಮುಂಚೂಣಿಯಲ್ಲಿ ಗುರುಮಠಕಲ್ ?
ರೈತರು ನೀಡಿದ ದೂರಿನ ಮೇರೆಗೆ ರೈತರ ಹೊಲಗದ್ದೆಗಳಿಗೆ ಕೃಷಿ ಅಧಿಕಾರಿಗಳು ಭೇಟಿಯನ್ನೇನೋ ನೀಡಿದ್ದಾರೆ. ಆದರೆ ಮುಂದಿನದೆಲ್ಲವೂ ಶೂನ್ಯ. ಈ ಕುರಿತು ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಪ್ರಕರಣ ವರದಿ ಮಾಡುತ್ತೇವೆಂದು ಅಧಿಕಾರಿಗಳು ಹೇಳಿ ಕೈ ತೊಳೆದುಕೊಂಡಿದ್ದಾರೆ. ಇದೆಲ್ಲವೂ ಆಗಿ 2 ವಾರ ಕಳೆದರೂ ಇಂದಿಗೂ ನಕಲಿ ಬಿತ್ತನೆ ಬೀಜದ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲವೆಂದು ರೈತರು ಗೋಳಾಡುತ್ತಿದ್ದಾರೆ.
ಸರಡಗಿ ರೈತರದ್ದೂ ಗೋಳಾಟ:
ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯಲ್ಲಿಯೂ ರೈತರು ಹೆಸರು ಬೀಜ ಬಿತ್ತಿ ಮೋಸ ಹೋಗಿದ್ದಾರೆ. ಸಿದ್ದಪ್ಪ ಕಂಟಿಕಾರ್ ಸೇರಿದಂತೆ ರೈತರು ಹಲವರು 100 ಎಕರೆಯಷ್ಟುಹೆಸರು ಬೀಜ ಬಿತಿದ್ದರೂ ಹೂವು- ಕಾಯಿ ಆಗದೆ ಹೌಹಾರಿದ್ದಾರೆ. ಗಂಜ್ ಪ್ರದೇಶದಲ್ಲಿರುವ ಆಗ್ರೋ ಕೇಂದ್ರದ ಮಾಲೀಕರು ನಮಗೆ ನಕಲಿ ಬೀಜ ನೀಡಿ ಮೋಸ ಮಾಡಿದ್ದಾರೆ. ನಾವು ಲಕ್ಷಾಂತರ ರು. ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ. ಆದರೆ, ಬೀಜ ಮಾರಾಟ ಮಳಿಗೆ ಮಾಲೀಕರು ಮಾಡಿದ ಮೋಸದಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಗೋಳಾಡುತ್ತಿದ್ದಾರೆ.
ನಕಲಿ ಬೀಜ ಮಾರಾಟ ಹಗರಣ: ತಪ್ಪಿತಸ್ಥರ ಮೇಲೆ ಮುಲಾಜಿಲ್ಲದೆ ಕ್ರಮ, ಸಚಿವ ಪಾಟೀಲ
ಕಲಬುರಗಿ ಜಿಲ್ಲೆಯಾದ್ಯಂತ ನಕಲಿ ಬೀಜದ ಜಾಲ:
ಜಿಲ್ಲೆಯ ಜೀವರ್ಗಿ, ಅಫಜಲ್ಪುರ, ಚಿಂಚೋಳಿ, ಸೇಡಂ, ಚಿತ್ತಾಪುರ ಸೇರಿ ಹಲವು ತಾಲೂಕುಗಳಲ್ಲಿ ಇತಂಹದ್ದೇ ನಕಲಿ ಬೀಜವನ್ನು ಮಾರಾಟ ಮಾಡಿದ್ದಾರೆ. ಇದರಿಂದ ಸಾವಿರಾರು ಎಕರೆ ಹೆಸರು ಬಿತ್ತನೆಯಾದ ಫಸಲು ಜೋರಾಗಿ ಬಂದರೂ ಕಾಯಿಗಟ್ಟಿಲ್ಲ. ಮೋಸ ಮಾಡಿದ ಆಗ್ರೋ ವರ್ತಕರನ್ನು ಕಂಡು ಹಿಡಿದು ಕಾನೂನು ಕ್ರಮ ಕೈಗೊಳ್ಳುವಂತೆಯೂ ರೈತರು ಆಗ್ರಹಿಸುತ್ತಿದ್ದಾರೆ. ಆದರೆ ರೈತರ ಆಗ್ರಹಕ್ಕೆ ಕೃಷಿ ಅದಿಕಾರಿಗಳು ಏನನ್ನೂ ಹೇಳದೆ ಮೌನವಾಗಿದ್ದಾರೆ.
ನಕಲಿ ಬೀಜ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ. ನಕಲಿ ಬೀಜ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ಹಾನಿಗೊಳಗಾದ ರೈತರ ಪ್ರತಿ ಎಕರೆಗೆ 20 ಸಾವಿರ ಪರಿಹಾರ ನೀಡಬೇಕು, ನಕಲಿ ಬೀಜ ಮಾರುವ ದಂಧೆಗಿಳಿದಿರುವ ಆಗ್ರೋ ಕೇಂದ್ರಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬೀಜ ಮಾರಾಟಗಾರರೇ ಮುಂದಾಗಿ ರೈತರಿಗೆ ಮಾಡಿದ ಮಹಾಮೋಸ ಇದಾಗಿದೆ, ಇಂತಹ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಕಲಬುರಗಿ ರೈತ ಮುಖಂಡರಾದ ಸಿದ್ದಪ್ಪ ಪೂಜಾರಿ ಕಂಟಿಕಾರ್, ಶಿವಾನಂದ ಕಿಳ್ಳಿ, ಮಲ್ಲಿಕಾರ್ಜುನ ಕಿಳ್ಳಿ ಹೇಳಿದ್ದಾರೆ.