* ಅತಿವೃಷ್ಟಿಯಿಂದ ನಲುಗಿದ್ದ ಬೆಳಗಾವಿ ರೈತರಿಗೆ ಅಕಾಲಿಕ ಮಳೆಯ ಕಾಟ
* ಸಿಡಿಲು ಬಡಿದು ಓರ್ವ ರೈತ ಮಹಿಳೆ, ಎರಡು ಎಮ್ಮೆಗಳು ಸಾವು
* ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರ ಒತ್ತಾಯ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಏ.26): ಕಳೆದ ಕೆಲ ದಿನಗಳಿಂದ ಬೆಳಗಾವಿ(Belagavi) ನಗರ ಸೇರಿ ಜಿಲ್ಲೆಯಾದ್ಯಂತ ಸಂಜೆ ಮತ್ತು ರಾತ್ರಿ ವೇಳೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಬೆಳಗಾವಿ ಜಿಲ್ಲೆಯ ರೈತರು(Farmers) ಇದೀಗ ಅಕಾಲಿಕ ಮಳೆಗೆ(Rain) ರೋಸಿ ಹೋಗಿದ್ದಾರೆ. ಬೆಳಗಾವಿ ತಾಲೂಕಿನ ಯಳ್ಳೂರು, ಧಾಮಣೆ, ವಡಗಾವಿ, ಶಹಾಪುರ, ಕಡೋಲಿ ಗ್ರಾಮದ ರೈತರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ.
ಕಳೆದ ಮೂರು ವರ್ಷದಿಂದ ನಿರಂತರ ಮಳೆಯಾಗಿ ಭತ್ತದ ಬೆಳೆ ನಾಶವಾಗಿತ್ತು. ಇದೀಗ ತರಕಾರಿ ಬೆಳೆಯನ್ನಾದ್ರೂ ಬೆಳೆದು ಜೀವನ ನಡೆಸಬೇಕೆಂದುಕೊಂಡಿದ್ದ ಅನ್ನದಾತನಿಗೆ ಅಕಾಲಿಕ ಮಳೆ ಸಂಕಷ್ಟ ತಂದೊಡ್ಡಿದೆ. ಕಳೆದ ಹದಿನೈದು ದಿನಗಳಿಂದ ನಿತ್ಯ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದು ಇದರಿಂದ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರಕ್ಕೆ ಹೊಂದಿಕೊಂಡಿರುವ ಯಳ್ಳೂರು ಭಾಗದ ಸುತ್ತಮುತ್ತಲಿನ ರೈತರು ನೀರಾವರಿ ಜಮೀನಿನಲ್ಲಿ ಬೇಸಿಗೆ ವೇಳೆ ತರಕಾರಿ(Vegetable) ಸೇರಿ ವಿವಿಧ ಬೆಳೆಗಳನ್ನ ಬೆಳೆದು ಜೀವನ ಕಟ್ಟಿಕೊಳ್ತಾರೆ. ಅದರಂತೆ ಈ ಬಾರಿಯೂ ಸವತೆಕಾಯಿ, ಬದನೆಕಾಯಿ, ಚನ್ನಂಗಿ, ಜೋಳ, ಮೆಕ್ಕೆಜೋಳ ಸೇರಿ ತರಕಾರಿ ಬೆಳೆ ಹೆಚ್ಚಾಗಿ ಬೆಳೆದಿದ್ದರು.
Davanagere: ಅಕಾಲಿಕ ಮಳೆ ಅವಾಂತರ: ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತವಾಗಿ ಸಂಚಾರಕ್ಕೆ ಪರದಾಟ
ಆದರೆ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಗೆ ಎಲ್ಲಾ ಬೆಳೆಯೂ ಸಂಪೂರ್ಣ ನೆಲಕಚ್ಚಿದೆ. ಸವತೆಕಾಯಿ ಬಳ್ಳಿಯೂ ಹಾಳಾಗುವುದರ ಜತೆಗೆ ಸವತೆಕಾಯಿ ಕೂಡ ಹಾಳಾಗಿ ಬೆಳೆದ ಬೆಳೆಯನ್ನು ರೈತರು ತಿಪ್ಪೆಗೆ ಎಸೆಯುವಂತಾಗಿದೆ. ಕೇವಲ ಸವತೆಕಾಯಿ ಅಷ್ಟೇ ಅಲ್ಲ ಬೇಸಿಗೆ ವೇಳೆ ಹೆಚ್ಚಾಗಿ ಈ ಭಾಗದಲ್ಲಿ ಚನ್ನಂಗಿ ಬೆಳೆ ಬೆಳೆಯುತ್ತಾರೆ. ಆದರೆ ಅಕಾಲಿಕ ಮಳೆಯಿಂದ ಬೆಳೆದು ನಿಂತಿದ್ದ ಚನ್ನಂಗಿ ಬೆಳೆ ಸಂಪೂರ್ಣವಾಗಿ ಹಾಳಾಗಿದೆ.
ಇತ್ತ ಜೋಳವೂ ಸಹ ಮಳೆಯಿಂದಾಗಿ ಕಪ್ಪು ಬಣ್ಣಕ್ಕೆ ತಿರುಗಿದ್ದು ಉಪಯೋಗಕ್ಕೆ ಬಾರದ ಸ್ಥಿತಿಗೆ ಬಂದು ತಲುಪಿದೆ. ಅಕಾಲಿಕ ಮಳೆಯಿಂದಾಗಿ ಬೆಳಗಾವಿ ತಾಲೂಕಿನಾದ್ಯಂತ ಸುಮಾರು 800 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಜೋಳ, ಮೆಕ್ಕೆಜೋಳ, ತರಕಾರಿ ಬೆಳೆ ಹಾಳಾಗಿದ್ದರೂ ಯಾವೊಬ್ಬ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಭರವಸೆಯೂ ನೀಡುತ್ತಿಲ್ಲ ಎಂದು ರೈತ ಮಹಿಳೆ ಕಲ್ಲವ್ವ ಅಳಲು ತೋಡಿಕೊಳ್ಳುತ್ತಾಳೆ.
ಬಳ್ಳಾರಿಯಲ್ಲಿ ಅಕಾಲಿಕ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ!
ಸಾವಿರಾರು ರೂಪಾಯಿ ಸಾಲಸೋಲ ಮಾಡಿ ಬೆಳೆದ ಬೆಳೆ ಹಾಳಾದಾಗ ಸರ್ಕಾರ ಸೂಕ್ತ ಪರಿಹಾರ ನೀಡುತ್ತಿಲ್ಲ. ಇನ್ನಾದರೂ ರೈತರ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಕೊಡಲು ಕ್ರಮ ಕೈಗೊಳ್ಳಲಿ ಅಂತಾ ರೈತ ಮುಖಂಡ ರಾಜು ಮರ್ವೆ ಒತ್ತಾಯಿಸಿದ್ದಾರೆ.
ಸಿಡಿಲು ಬಡಿದು ರೈತ ಮಹಿಳೆ ಸಾವು, ಎರಡು ಎಮ್ಮೆಗಳು ಬಲಿ
ಇನ್ನು ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಹಿಳೆ ಸಾವನ್ನಪ್ಪಿದ್ದಾರೆ. 38 ವರ್ಷದ ಮಲ್ಲಮ್ಮ ಕಲ್ಮೇಶ ವಟವಟಿ ಗ್ರಾಮದ ಹೊರವಲಯದಲ್ಲಿರುವ ತಮ್ಮ ಹೊಲದಿಂದ ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ವೇಳೆ ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಸಿಡಿಲು(Lightning Strike) ಬಡಿದು ರೈತ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಕುಲಗೋಡ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ ಸವದತ್ತಿ ತಾಲೂಕಿನ ಹಿರೇಬುದನೂರು ಗ್ರಾಮದಲ್ಲಿ ಸಿಡಿಲು ಬಡಿದು ರೈತ ಲಕ್ಷ್ಮಣ್ ನಾಗತೆವ್ವಗೋಳ ಎಂಬುವರಿಗೆ ಸೇರಿದ ಎರಡು ಎಮ್ಮೆಗಳು ಸಾವನ್ನಪ್ಪಿವೆ.