* ಶೇ.3ಕ್ಕೆ ತಲುಪಿದ ಕೊರೋನಾ ಸೋಂಕು ಪಾಟಿಸಿವಿಟಿ ದರ
* 100ರಲ್ಲಿ ಮೂವರಿಗೆ ಸೋಂಕು
* 63 ಮಂದಿಗೆ ಕೊರೋನಾ
ಬೆಂಗಳೂರು(ಏ.26): ರಾಜಧಾನಿಯಲ್ಲಿ(Bengaluru) ಕೊರೋನಾ(Coronavirus) ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.3ಕ್ಕೆ ಹೆಚ್ಚಳವಾಗಿದ್ದು, ಸೋಂಕು ಪರೀಕ್ಷೆಗೊಳಪಟ್ಟ 100 ಮಂದಿಯಲ್ಲಿ ಮೂವರಿಗೆ ಸೋಂಕು ದೃಢಪಡುತ್ತಿದೆ. ನಗರದಲ್ಲಿ ಸೋಮವಾರ 63 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 59 ಮಂದಿ ಗುಣಮುಖರಾಗಿದ್ದಾರೆ.
ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1,610 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 2,130 ನಡೆದಿದ್ದು, ಪಾಸಿಟಿವಿಟಿ ದರ(Positivity Rate) ಶೇ.3ರಷ್ಟು ದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು 6 ಏರಿಕೆಯಾಗಿವೆ. (ಭಾನುವಾರ 57 ಕೇಸ್, ಶೂನ್ಯ ಸಾವು) ಸದ್ಯ ಸಕ್ರಿಯ ಸೋಂಕಿತರ ಪೈಕಿ 7 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ವೆಂಟಿಲೇಟರ್ ಒಬ್ಬರು, ಆಕ್ಸಿಜನ್ ಹಾಸಿಗೆ ಮತ್ತು ಸಾಮಾನ್ಯ ಹಾಸಿಗೆಗಳಲ್ಲಿ ತಲಾ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 1600 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ 4ನೇ ಅಲೆ ರೂಲ್ಸ್, ಮತ್ತೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ
ಕಳೆದ ಮೂರು ದಿನಗಳಿಂದ ಶೇ.2 ಆಸುಪಾಸಿನಲ್ಲಿದ್ದ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಸದ್ಯ 3ಕ್ಕೆ ಹೆಚ್ಚಳವಾಗಿದೆ. ರಾಜ್ಯದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.98 ರಷ್ಟುಬೆಂಗಳೂರಿನಲ್ಲಿಯೇ ವರದಿಯಾಗಿವೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.6 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,964 ಇದೆ ಎಂದು ಬಿಬಿಎಂಪಿ(BBMP) ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.
64 ಮಂದಿಗೆ ಸೋಂಕು, 17 ದಿನವೂ ಸಾವು ಇಲ್ಲ
ರಾಜ್ಯದಲ್ಲಿ(Karnataka) ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಗಳ ಏರಿಳಿತ ಮುಂದುವರೆದಿದೆ. ಸೋಮವಾರ 64 ಮಂದಿಗೆ ಸೋಂಕು ತಗುಲಿದ್ದು, 69 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1,671 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 4637 ನಡೆದಿದ್ದು, ಪಾಸಿಟಿವಿಟಿ ದರ ಶೇ.1.4 ದಾಖಲಾಗಿದೆ.
ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ನಾಲ್ಕು ಸಾವಿರ ಇಳಿಕೆಯಾಗಿವೆ. ಆದರೂ, ಹೊಸ ಪ್ರಕರಣಗಳು ನಾಲ್ಕು ಏರಿಕೆಯಾಗಿದೆ. (ಭಾನುವಾರ 60 ಪ್ರಕರಣ, ಸಾವು ಶೂನ್ಯ) ಕಳೆದ ಶುಕ್ರವಾರ 139ಕ್ಕೆ ಹೆಚ್ಚಿದ್ದ ಹೊಸ ಪ್ರಕರಣಗಳು, ಭಾನುವಾರ ಅರ್ಧಕ್ಕರ್ಧ ತಗ್ಗಿದ್ದವು. ಈಗ ಮತ್ತೆ ಏರಿಕೆ ಹಾದಿ ಹಿಡಿದಿವೆ. ಸೋಂಕು ಪರೀಕ್ಷೆಗಳು ಹೆಚ್ಚಳವಾಗದಿದ್ದರೂ, ಹೊಸ ಪ್ರಕರಣಗಳು ಹೆಚ್ಚಳವಾಗಿರುವುದು ಒಂದಿಷ್ಟುಆತಂಕ ಮೂಡಿಸಿದೆ. ಕಳೆದ 17 ದಿನಗಳಿಂದ ಕೊರೋನಾ ಸೋಂಕಿತರ ಸಾವು ದಾಖಲಾಗಿಲ್ಲ.
ಕೋವಿಡ್ 4ನೇ ಅಲೆ ಭೀತಿ: ಕರ್ನಾಟಕದಲ್ಲಿ ಮತ್ತೆ ಟಫ್ ರೂಲ್ಸ್?, ಸಿಎಂ ಹೇಳಿದ್ದಿಷ್ಟು
ಬೆಂಗಳೂರು 64, ದಕ್ಷಿಣ ಕನ್ನಡ ಒಬ್ಬರಿಗೆ ಸೋಂಕು ತಗುಲಿದೆ. 28 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಒಟ್ಟಾರೆ ರಾಜ್ಯದಲ್ಲಿ ಈವರೆಗೆ 39.46 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.04 ಲಕ್ಷ ಮಂದಿ ಗುಣಮುಖರಾಗಿದ್ದು, 40,057 ಮಂದಿ ಸಾವಿಗೀಡಾಗಿದ್ದಾರೆ.
2541 ಕೋವಿಡ್ ಕೇಸು, 30 ಸಾವು, ಸಕ್ರಿಯ ಸೋಂಕು 16522ಕ್ಕೆ ಏರಿಕೆ
ನವದೆಹಲಿ: ಭಾನುವಾರಕ್ಕಿಂತ ಕೋವಿಡ್(Covid-19) ಪ್ರಕರಣಗಳಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ಹೊಸದಾಗಿ 2,541 ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಇದೇ ಅವಧಿಯಲ್ಲಿ 30 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಪ್ರಕರಣಗಳು 4.3 ಕೋಟಿಗೆ, ಒಟ್ಟು ಸಾವು 5.22 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ಕಳೆದ 24 ಗಂಟೆಗಳಲ್ಲಿ 693 ಸಕ್ರಿಯ ಸೋಂಕಿತರ ಹೆಚ್ಚಳದೊಂದಿಗೆ ಒಟ್ಟು ಸಕ್ರಿಯ ಪ್ರಕರಣಗಳು 16,522ಕ್ಕೆ ಏರಿಕೆಯಾಗಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರ ಶೇ.0.84ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರ ಶೇ.0.54ರಷ್ಟಿದೆ. ದೇಶದಲ್ಲಿ ಈವರೆಗೆ 187.71 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.