ನರಗುಂದ: ಬೆಣ್ಣಿಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ಮುಂಗಾರು ಬೆಳೆ, ಸಂಕಷ್ಟದಲ್ಲಿ ರೈತರು

By Kannadaprabha News  |  First Published Aug 10, 2020, 12:57 PM IST

ಹಳ್ಳದ ಮೇಲ್ಭಾಗದ ಪ್ರದೇಶಗಳಲ್ಲಿ ನಿರಂತರ ಸುರಿಯುತ್ತಿರುವ ಮಳೆ| ನೀರಿನಲ್ಲಿ ಕೊಚ್ಚಿಹೋದ ಹೊಲದ ಬದು| ಪ್ರಸಕ್ತ ವರ್ಷವೂ ಹಳ್ಳದ ಮೇಲ್ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಉಕ್ಕಿ ಹರಿದ ಬೆಣ್ಣೆಹಳ್ಳ| ಈರುಳ್ಳಿ, ಹೆಸರು, ಬಿ.ಟಿ. ಹತ್ತಿ, ಸೂರ್ಯಕಾಂತಿ, ಗೋವಿನಜೋಳ ಮುಂತಾದ ಬೆಳೆಗಳು ಕೊಚ್ಚಿಕೊಂಡು ಹೋಗಿವೆ|


ಎಸ್‌.ಜಿ. ತೆಗ್ಗಿನಮನಿ

ನರಗುಂದ(ಆ.10):  ಒಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಬೆಣ್ಣಿಹಳ್ಳ ಉಕ್ಕಿ ಹರಿದಿದ್ದು, ಹಳ್ಳದ ದಂಡೆಯಲ್ಲಿ ಬೆಳೆದಿರುವ ಸಾವಿರಾರು ಹೆಕ್ಟೇರ್‌ ಪ್ರದೇಶದ ಮುಂಗಾರು ಬೆಳೆಯನ್ನು ಆಪೋಷನ ಮಾಡಿದೆ. ಮಳೆಗಾಲದಲ್ಲಿ ಮೈದುಂಬಿ ಅಬ್ಬರಿಸುವ ಮೂಲಕ ರೈತರ ಬೆಳೆ ಹಾನಿ ಮಾಡುವಲ್ಲಿ ಬೆಣ್ಣಿಹಳ್ಳ (ತುಪ್ಪರಿ ಹಳ್ಳ) ಪ್ರಮುಖ ಪಾತ್ರ ವಹಿಸುತ್ತದೆ.

Tap to resize

Latest Videos

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಬೆಣ್ಣಿಹಳ್ಳದ ಮೇಲ್ಭಾಗದ ಪ್ರದೇಶಗಳಾದ ಹಾವೇರಿ, ಹುಬ್ಬಳ್ಳಿ, ಧಾರವಾಡಗಳಲ್ಲಿ ಹೆಚ್ಚು ಮಳೆ ಸುರಿದು 5 ದಿವಸ ಈ ಬೆಣ್ಣಿಹಳ್ಳದ ಪ್ರವಾಹ ಬಂದು ಹಳ್ಳದ ತಟಕ್ಕೆ ಹೊಂದಿಕೊಂಡಿರುವ ಬೆಳೆಗಳನ್ನು ನಾಶ ಮಾಡಿ ರೈತರಿಗೆ ಸಂಕಷ್ಟ ತಂದಿತ್ತು. ಅದೆ ರೀತಿ ಪ್ರಸಕ್ತ ವರ್ಷವೂ ಹಳ್ಳದ ಮೇಲ್ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಕಳೆದ ಮೂರು ದಿನಗಳಿಂದ ಬೆಣ್ಣೆಹಳ್ಳ ಉಕ್ಕಿ ಹರಿದಿದೆ. ಪರಿಣಾಮ, ರೈತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಈರುಳ್ಳಿ, ಹೆಸರು, ಬಿ.ಟಿ. ಹತ್ತಿ, ಸೂರ್ಯಕಾಂತಿ, ಗೋವಿನಜೋಳ ಮುಂತಾದ ಬೆಳೆಗಳು ಕೊಚ್ಚಿಕೊಂಡು ಹೋಗಿದೆ.

ಗಂಗಾವತಿ: 15 ದಿನದಲ್ಲಿ ಎರಡು ಬಾರಿ ಮಳೆ ನೀರಿಗೆ ಕೊಚ್ಚಿ ಹೋದ ವಿಜಯನಗರ ಕಾಲುವೆ..!

ಒಡ್ಡುಗಳಿಗೆ ಹಾನಿ:

ಕಳೆದ ಬೇಸಿಗೆಯಲ್ಲಿ ರೈತರು ಎನ್‌ಆರ್‌ಜಿ ಯೋಜನೆಯಲ್ಲಿ ತಮ್ಮ ಜಮೀನುಗಳ ಬದು ನಿರ್ಮಾಣ ಮಾಡಿಕೊಂಡು, ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆಸಿದ್ದರು. ಆದರೆ ಈ ಬೆಣ್ಣಿಹಳ್ಳದ ಪ್ರವಾಹದಿಂದ ರೈತರ ಜಮೀನುಗಳಲ್ಲಿ ನಿರ್ಮಾಣವಾದ ಬದುಗಳು ನೀರಿನ ಪ್ರವಾಹಕ್ಕೆ ಕಿತ್ತುಕೊಂಡು ಹೋಗಿ ಬೆಳೆ ನಾಶವಾಗಿವೆ.

ಅಧಿಕಾರಿಗಳು ಭೇಟಿ:

ಬೆಣ್ಣಿಹಳ್ಳದ ಪ್ರವಾಹಕ್ಕೆ ತುತ್ತಾದ ಮೂಗನೂರ, ಕುರ್ಲಗೇರಿ, ಸುರಕೋಡ, ಬನಹಟ್ಟಿ, ರಡ್ಡೇರ-ನಾಗನೂರ, ಗಂಗಾಪುರ, ಖಾನಾಪುರ, ಹದಲಿ ಗ್ರಾಮಗಳಿಗೆ ಹೊಂದಿಕೊಂಡಿರುವ ಈ ಬೆಣ್ಣಿಹಳ್ಳದ ಪ್ರವಾಹಕ್ಕೆ ಹಾನಿಗೊಂಡ ಬೆಳೆಗಳನ್ನು ತಾಲೂಕು ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಪರಿಶೀಲಿಸಿ ಹಾನಿ ಮಾಡಿಕೊಂಡ ಎಲ್ಲ ರೈತರ ಜಮೀನುಗಳಿಗೆ ಕೃಷಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ಮಾಡಿ ಬೆಳೆ ಹಾನಿಯ ವಿವರವನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ತಾಲೂಕಿನಲ್ಲಿ ಬೆಣ್ಣಿಹಳ್ಳ ಮತ್ತು ಮಲಪ್ರಭಾ ನದಿ ಪಾತ್ರದಲ್ಲಿನ ಜಮೀನುಗಳ ಸಮೀಕ್ಷೆ ಜತೆಗೆ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಅತಿಯಾದ ಮಳೆಯಿಂದ ರೈತರು ಬೆಳೆಯನ್ನು ಹಾನಿ ಮಾಡಿಕೊಂಡಿದ್ದಾರೆ. ಆದ್ದರಿಂದ ಕೃಷಿ ಅಧಿಕಾರಿಗಳು ತಾಲೂಕಿನ ಎಲ್ಲ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ಮಾಡಿ ಎಲ್ಲ ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಸಲು ಅಧಿಕಾರಿಗಳು ಮುಂದಾಗಬೇಕು ಎಂದು ಗದಗ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನಾ ಅಧ್ಯಕ್ಷ ಬಸವರಾಜ ಸಾಬಳೆ ಅವರು ಹೇಳಿದ್ದಾರೆ.
 

click me!