ವರದಿ : ರಾಜೇಂದ್ರ ವೈದ್ಯ.
ಮಾಲೂರು (ಸೆ.22): ಟೊಮೆಟೋ ಬೆಲೆ ಕುಸಿತದಿಂದ ಕಂಗಾಲಾಗಿರುವ ತಾಲೂಕಿನ ರೈತರು ತಾವು ಬೆಳೆದಿರುವ ಟೊಮೆಟೋ ಬೆಳೆಯನ್ನು ತೋಟದಲ್ಲಿಯೇ ನಾಶ ಪಡಿಸುತ್ತಿದ್ದಾರೆ.
undefined
ಪ್ರತಿ ಕಿಲೋಗೆ 40 ರಿಂದ 50 ರುಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಕೇವಲ 2 ರುಪಾಯಿಗೆ ಕುಸಿದಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಲಾಭದ ನಿರೀಕ್ಷೆಯಲ್ಲಿ ಬೆಳೆ ಬೆಳೆದ ರೈತ ಕೊನೆಗೆ ದಿಕ್ಕು ತೋಚದೆ ತಲೆ ಮೇಲೆ ಕೈಹೊತ್ತು ಕೂತಿದ್ದಾನೆ.
ಬಯಲುಸೀಮೆ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಇದ್ದರೂ 1500 ರಿಂದ 1800 ಅಡಿಗಳಿಂದ ನೀರೆತ್ತಿ ಸಮೃದ್ಧ ಬೆಳೆ ತೆಗೆಯುವ ರೈತರಿಗೆ ಕೊನೆಗೆ ಅಸಲೂ ಸಿಗದೆ ಒದ್ದಾಡುವಂತಾಗಿದೆ.
ಅತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ: ಇತ್ತ ರೈತನ ಟೊಮೇಟೊ ದರ ಕುಸಿತ
ಸುಮಾರು 2 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾಟಿಮಾಡಿದ್ದು ಸುಮಾರು 2 ಲಕ್ಷಕ್ಕೂ ಹೆಚ್ಚು ಬಂಡವಾಳ ತೊಡಗಿಸಿದ್ದೆ ಆದರೆ ಇದರಿಂದ ನಮಗೆ ಬಿಡಿಗಾಸು ಸಿಗಲಿಲ್ಲ ಎಂದು ತಾಲೂಕಿನ ಬಾವನಹಳ್ಳಿರೈತ ಮುನಿಯಪ್ಪ ಅಸಹಾಯಕತೆ ವ್ಯಕ್ತಪಡಿಸಿದರು. ಟೊಮೆಟೊ ಹಣ್ಣನ್ನು ರಸ್ತೆಗೆ ಸುರಿದು ಪ್ರತಿಭಟನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ತೋಟದಲ್ಲಿಯೇ ಗಿಡಗಳನ್ನು ಕಿತ್ತು ಹಣ್ಣುಗಳನ್ನು ತೋಟದಲ್ಲಿ ಗೊಬ್ಬರವನ್ನಾಗಿ ಮಾಡುತ್ತಿದ್ದೇನೆ ಎಂದು ನೊಂದು ಮುಡಿದರು.
ಬೇರೆ ರಾಜ್ಯಗಳಲ್ಲೂ ಉತ್ತಮ ಬೆಳೆ
ತಾಲೂಕಿನಾದ್ಯಂತ ಟೊಮೆಟೊ ಬೆಳೆದಿರುವ ರೈತರು ಜಿಲ್ಲಾ ಮಾರುಕಟ್ಟೆಯಾದ ಕೋಲಾರ, ಬೆಂಗಳೂರು, ತಮಿಳುನಾಡಿನ ಹೊಸೂರು ಮಾರುಕಟ್ಟೆಗಳಿಗೆ ಸರಬರಾಜು ಮಾಡುತ್ತಾರೆ. ಈ ಮಾರುಕಟ್ಟೆಗಳಿಂದ ದೇಶದ ವಿವಿಧ ಸ್ಥಳಗಳಿಗೆ ಟೊಮೆಟೊ ಪೂರೈಕೆಯಾಗುತ್ತದೆ. ಪ್ರಮುಖವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್‌ಗಡ, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಇಲ್ಲಿಯ ಟೊಮೆಟೋ ಹೋಗುತ್ತಿತ್ತು. ಪ್ರಸ್ತುತ ಆ ರಾಜ್ಯಗಳಲ್ಲಿಯೇ ಟೊಮೆಟೋ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಇಲ್ಲಿಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ ಎನ್ನುತ್ತಾರೆ ಟೊಮೆಟೊ ವ್ಯಾಪಾರಿ ನಾರಾಯಣಸ್ವಾಮಿ.
ರೈತರ ಸಂಕಷ್ಟಗಳನ್ನು ಪದೇಪದೇ ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತರುತ್ತಿದ್ದರು ಪ್ರಯೋಜನವಾಗುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿದ್ದಾಗ ಬೆಳೆಗಳನ್ನೇ ರಸ್ತೆಗೆ ಸುರಿದು ಪ್ರತಿಭಟನೆ ಮಾಡಿದರೂ ನಮ್ಮ ಕಷ್ಟಗಳಿಗೆ ಯಾರು ಸ್ಪಂದಿಸುವುದಿಲ್ಲ ಎಂದು ತಿಳಿದ ಮೇಲೆ ರೈತರು ನಮ್ಮ ಬೆಳೆಗಳನ್ನು ತಾವೇ ನಾಶ ಮಾಡಿ ಜಮೀನಿಗೆ ಗೊಬ್ಬರ ಮಾಡುತ್ತಿದ್ದಾರೆ. ಆದರೆ ಬೆಳೆ ಬೆಳೆಯಲು ಮಾಡಿದ ಸಾಲ ತೀರಿಸಲಾಗದೆ, ಜೀವನ ನಡೆಸಲೂ ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ.