ಹಾಲಿನ ದರ 40 ರು.ಗೆ ಏರಿಸಿ : ರೈತರಿಂದ ಪ್ರತಿಭಟನೆ

By Kannadaprabha NewsFirst Published Mar 2, 2021, 7:26 AM IST
Highlights

ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಇದೀಗ ಹಾಲಿನ ದರವನ್ನು ಪ್ರತೀ ಲೀಟರ್‌ಗೆ 40 ರು.ಗೆ ಏರಿಸಲು ರೈತರು ಆಗ್ರಹಿಸಿದ್ದಾರೆ. 

 ಬೆಂಗಳೂರು (ಮಾ.02):  ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್‌ ಹಾಲಿಗೆ ಕನಿಷ್ಠ 40 ರು.ಗೆ ನಿಗದಿ ಪಡಿಸಬೇಕು ಎಂದು ಹಾಲು ಒಕ್ಕೂಟಗಳಿಗೆ ‘ಕರ್ನಾಟಕ ರೈತ ಸೇನೆ’ ಒತ್ತಾಯಿಸಿದೆ.

ಸೋಮವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರೈತ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಾಲು ಉತ್ಪಾದಕರು, ಬೆಲೆ ಏರಿಕೆಯಿಂದ ಮೇವಿನ ದರ, ಹಿಂಡಿ, ಬೂಸಾ ಮತ್ತು ನಿರ್ವಹಣೆ ವೆಚ್ಚವೂ ಜಾಸ್ತಿಯಾಗಿದೆ. ಹೀಗಾಗಿ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಕನಿಷ್ಠ 40 ರು.ಗಳಿಗೆ ಹೆಚ್ಚಳ ಮಾಡಬೇಕು ಒತ್ತಾಯಿಸಿದರು.

ಹಾಲು ಮಾರೋಕೆ 30 ಕೋಟಿ ಕೊಟ್ಟು ಹೆಲಿಕಾಪ್ಟರ್ ಖರೀದಿಸಿದ ರೈತ..!

ರೈತ ಸೇನೆ ರಾಜ್ಯಾಧ್ಯಕ್ಷ ಎಂ.ಆರ್‌.ನಾರಾಯಣಗೌಡ ಮಾತನಾಡಿ, ಪ್ರಸ್ತುತ ಹಾಲು ಸಹಕಾರ ಒಕ್ಕೂಟಗಳು ಉತ್ಪಾದಕರಿಂದ ಒಂದು ಲೀಟರ್‌ ಹಾಲಿಗೆ 26 ರು. ನೀಡುತ್ತಿವೆ. ಆದರೆ ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಹೈನುಗಾರಿಕೆ ನಡೆಸುವುದೇ ದುಸ್ತರವಾಗಿದೆ. ಗ್ರಾಹಕರಿಗೆ ದರ ಹೆಚ್ಚಿಸಬೇಕು ಎಂಬುದು ನಮ್ಮ ಬೇಡಿಕೆಯಲ್ಲ.

ಸರ್ಕಾರ ಉತ್ಪಾದಕರಿಗೆ ಹೆಚ್ಚಿನ ದರ ನೀಡಬೇಕು. ಇಲ್ಲದಿದ್ದರೆ ಹಿಂಡಿ, ಬೂಸಾ, ಮೇವಿಗೆ ಶೇ.50ರಷ್ಟುಸಬ್ಸಿಡಿ ನೀಡಬೇಕು. ಬೇರೆ ರಾಜ್ಯಗಳಲ್ಲಿ ಉತ್ಪಾದಕರಿಂದ ಖರೀದಿಸುವ ಹಾಲಿಗೆ ಹೆಚ್ಚಿನ ದರ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದ ಹೈನುಗಾರರಿಗೂ ದರ ನೀಡದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

click me!