ಬಿತ್ತನೆ ಮುಗಿದರೂ ಸುರಿ​ಯದ ಮಳೆ: ಆತಂಕದಲ್ಲಿ ಅನ್ನದಾತ

By Kannadaprabha News  |  First Published Jul 14, 2021, 1:03 PM IST

* ಬೆಳೆ ಒಣಗುವ ಆತಂಕ
* 37900 ಹೆಕ್ಟೇರ್‌ ಪ್ರದೇ​ಶ​ದಲ್ಲಿ ಬಿತ್ತ​ನೆ
* ಬೆಳೆ​ಗೆ​ಳಿಗೆ ತೇವಾಂಶದ ಕೊರ​ತೆ
 


ಹಾನಗಲ್ಲ(ಜು.14): ಬಹುತೇಕ ಪೂರ್ಣಗೊಂಡಿದ್ದರೂ ತೇವಾಂಶದ ಕೊರತೆಯಿಂದ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಆತಂಕ ಎದುರಾಗಿದ್ದು, ರೈತರು ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ದೃಶ್ಯ ಹಾನಗಲ್ಲ ತಾಲೂಕಿನಲ್ಲಿದೆ.

ಹಾನಗಲ್ಲ ತಾಲೂಕಿನಲ್ಲಿ ಒಟ್ಟು 47,663 ಹೆಕ್ಟೇರ್‌ ಕೃಷಿ ಭೂಮಿ ಇದೆ. 37900 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಭತ್ತದ ನಾಡಾದ ಹಾನಗಲ್ಲ ತಾಲೂಕು ಈಗ ಮಳೆಯ ವೈಪರೀತ್ಯಗಳಿಂದಾಗಿ ಕಡಿಮೆ ಮಳೆಯ ಬೆಳೆಗಳತ್ತ ವಾಲಿದ್ದರೂ, ಕಳೆದ ವರ್ಷದ ಭಾರೀ ಮಳೆ ರೈತರನ್ನು ಗೊಂದಲಕ್ಕೆ ಸಿಲುಕಿಸಿದೆ. ಆದರೂ ಗೋವಿನ ಜೋಳವನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆಯುಲು ಮುಂದಾಗಿರುವ ರೈತರು 21385 ಹೆಕ್ಟೇರ ಕ್ಷೇತ್ರದಲ್ಲಿ ಗೋವಿನ ಜೋಳ ಬಿತ್ತನೆ ಮಾಡಿದ್ದಾರೆ. 8525 ಹೆಕ್ಟೇರ್‌ನಲ್ಲಿ ಕೂರಿಗೆ ಮೂಲಕ ಭತ್ತ ಬಿತ್ತನೆ, 2775 ಹೆಕ್ಟೇರ್‌ ಭೂಮಿಯಲ್ಲಿ ಸೋಯಾ ಅವರೆ, 2425 ಹೆಕ್ಟೇರ್‌ನಲ್ಲಿ ಹತ್ತಿ, 665 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡಿದ್ದಾರೆ. 2100 ಹೆಕ್ಟೇರ್‌ ಕ್ಷೇತ್ರದಲ್ಲಿ ಕಬ್ಬು ಬೆಳೆ ಬೆಳೆಯಲಾಗುತ್ತಿದೆ. ಈಗಾಗಲೇ ಅಂದಾಜು 45 ದಿನಗಳ ಬೆಳೆಗಳಾಗಿವೆ.

Tap to resize

Latest Videos

ಕೃಷಿ ಇಲಾಖೆ ಪ್ರಸ್ತುತ ವರ್ಷ 2500 ಕ್ವಿಂಟಲ್‌ ಭತ್ತದ ಬಿತ್ತನೆ ಬೀಜ, 470 ಕ್ವಿಂಟಲ್‌ ಗೋವಿನ ಜೋಳ, 105 ಕ್ವಿಂಟಲ್‌ ಶೇಂಗಾ, 2172 ಕ್ವಿಂಟಲ್‌ ಸೋಯಾ ಅವರೆ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಿಸಿದೆ. ಬಿತ್ತನೆ ಬೀಜ, ಗೊಬ್ಬರದ ಕೊರತೆ ಕಾಣದಿದ್ದರೂ ಪ್ರಾಕೃತಿಕವಾಗಿ ಮಳೆ ಅಭಾವವೇ ರೈತರನ್ನು ಹೆಚ್ಚು ಆತಂಕಕ್ಕೀಡು ಮಾಡಿದೆ.

ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆ ಇರುವ ಕಡೆಗಳಲ್ಲಿ, ಅದರಲ್ಲೂ ವರದಾ ನದಿ ತೀರ, ಧರ್ಮಾ ನದಿ ತೀರದ ಪ್ರದೇಶಗಳಲ್ಲಿ ಹಾಗೂ ಅಲ್ಲಲ್ಲಿ ಕೊಳವೆ ಭಾವಿಗಳನ್ನು ಅವಲಂಬಿಸಿ ಕೆಲವೆಡೆ ಭತ್ತದ ನಾಟಿಗೆ ಮುಂದಾಗಿರುವ ರೈತರು ಅಂದಾಜು 6000 ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಮಾಡುವ ಸಿದ್ಧತೆಗಳು ನಡೆದಿವೆ.

ಕೊಪ್ಪಳ: ಇಳಿಯದ ಅಕ್ಕಿ ದರ, ಭತ್ತ ಕೇಳುವವರೇ ಇಲ್ಲ, ಕಂಗಾಲಾದ ಅನ್ನದಾತ..!

ಕಳೆದ ವರ್ಷ ಈ ಸಂದರ್ಭದಲ್ಲಿ ಭತ್ತ ಹಾಗೂ ಗೋವಿನ ಜೋಳಕ್ಕೆ ಬಹಳಷ್ಟು ರೋಗ ಬಾಧೆ ಕಾಣಿಸಿಕೊಂಡಿತ್ತು. ಆದರೆ, ಈ ಬಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಗೋವಿನ ಜೋಳಕ್ಕೆ ಲದ್ದಿ ಹುಳುವಿನ ಬಾಧೆ ಇದೆ. ಆದರೆ, ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಲದ್ದಿ ಹುಳು ಕಾಣಿಸಿಕೊಂಡಿದ್ದರ ಪರಿಣಾಮ ಈ ಬಾರಿ ಮುಂಜಾಗ್ರತಾ ಕ್ರಮ​ವಾಗಿ ಔಷಧಿ ಸಿಂಪರಣೆಗೆ ಮುಂದಾಗಿರುವುದರಿಂದ ಲದ್ದಿ ಹುಳದ ಬಾಧೆ ಅಷ್ಟಾಗಿ ಕಾಣಿಸಕೊಳ್ಳುತ್ತಿಲ್ಲ.

ಕಳೆದ ನಾಲ್ಕಾರು ವರ್ಷಗಳಿಂದ ಅತೀವೃಷ್ಟಿ ಹಾಗೂ ಅನಾವೃಷ್ಟಿಗಳ ಕಾರಣದಿಂದ ಬೆಳೆ ಕೈಗೆ ಸಿಗದೆ ಆತಂಕದಲ್ಲೆ ರೈತರು ಕೃಷಿಯಲ್ಲಿ ತೊಡ​ಗಿ​ದ್ದಾ​ರೆ. ಪ್ರಸುತ ವರ್ಷ ಸರಿಯಾಗಿ ಬೆಳೆ ಬರಬೇಕೆಂದರೆ ಅದು ಕೇವಲ ಮಳೆಯನ್ನೆ ಆಶ್ರಯಿಸಿದೆ. ಈ ವರೆಗೆ ಇರುವ ಬೆಳೆಯಲ್ಲಿ ಏನೂ ತೊಂದರೆ ಇಲ್ಲದ ಕಾರಣ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಈಗಾಗಲೇ 45 ದಿನಗಳ ಬೆಳೆ ಇದ್ದು, ಎಡೆ ಹೊಡೆಯುವುದು, ದಿಂಡು ಏರಿಸುವ ಕೆಲಸ ಪೂರ್ಣಗೊಳ್ಳುತ್ತಿದೆ. ಆದರೆ ತೇವಾಂಶದ ಕೊರತೆಯಿದ್ದರೂ ಎರಡ್ಮೂರು ದಿನಗಳಿಂದ ಮೋಡದ ವಾತಾವರಣ ಹಾಗೂ ಅಲ್ಪ ಸ್ವಲ್ಪ ಮಳೆ ಬೀಳುತ್ತಿರುವುದರಿಂದ ಮಳೆಗಾಲ ಆಶಾದಾಯಕವಾಗಿ ಕಾಣುತ್ತಿದೆ. ರೈತರು ಕೂಡ ತೇವಾಂಶದ ಸ್ಥಿತಿಯನ್ನು ಆಧರಿಸಿ ಯೂರಿಯಾ ಕೊಡಬೇಕು ಎಂದು ಹಾನಗಲ್ಲ ಸಹಾಯಕ ಕೃಷಿ ನಿರ್ದೆಶಕ ದೇವೇಂದ್ರಪ್ಪ ಕಡ್ಲೇರ್‌ ತಿಳಿಸಿದ್ದಾರೆ. 

ಈ ಬಾರಿ ರೈತರಿಗೆ ಸಕಾಲಿಕವಾಗಿ ಮಳೆ ಬಂದಿರುವುದರಿಂದ ಉತ್ತಮ ಬಿತ್ತನೆ ನಡೆದಿದೆ. ವಾಡಿಕೆ ಮಳೆ 881 ಮಿಮೀ ಆಗಬೇಕಿತ್ತು. 513 ಮಿಮೀ ಮಳೆಯಾಗಿದೆ. ಮೇ ಹಾಗೂ ಜೂನ್‌ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಆದರೆ, ತೀರಾ ಅವಶ್ಯವಿರುವ ಜುಲೈ ತಿಂಗಳಿನಲ್ಲಿ ಮಳೆ ನಿರಾಶಾದಾಯಕವಾಗಿದೆ. ಉತ್ತಮ ಮಳೆ ನಿರೀಕ್ಷೆಯಲ್ಲಿ ಕೃಷಿಕರಿದ್ದಾರೆ ಎಂದು ಹಾನಗಲ್ಲ ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಹೇಳಿದ್ದಾರೆ. 
 

click me!