ಕೂಲಿಯಾಳುಗಳ ಕೊರತೆ ನೀಗಿಸಿದ ಸುಲಭ ಸಾಧನಕ್ಕೆ ರೈತರ ಮೆಚ್ಚುಗೆ| ಹೊಲದಲ್ಲಿನ ಕಳೆ ತೆಗೆಯಲು ಕೂಲಿಯಾಳುಗಳ ಕೊರತೆ| ಬಾಡಿಗೆ ಎತ್ತುಗಳನ್ನು ಪಡೆದು, ಕಷಿ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ ಎಡೆ ಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಸಾಧ್ಯ| ರೈತರ ಇಂತಹ ಕಷ್ಟಗಳಿಗೆ ಸೈಕಲ್ ಎಡೆ ಕುಂಟೆ ಪರಿಹಾರ|
ದೋಟಿಹಾಳ(ನ.25): ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ದುಡಿಯುವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯಲು ಹೋದರೆ ಸುಮಾರು 275 ಕೂಲಿ ದೊರೆಯುತ್ತಿದ್ದು, ಹೊಲದಲ್ಲಿನ ಕಳೆ ತೆಗೆಯಲು ಕೂಲಿಯಾಳುಗಳ ತೊಂದರೆ ಎದುರಾಗಿದೆ.
ಹಿಂಗಾರು ಹಂಗಾಮಿನ ಬೆಳೆಗಳ ಕಳೆ, ಕಸ ತೆಗೆಯಲು ಕೂಲಿಯಾಳುಗಳ ಕೊರತೆ ಹಿನ್ನೆಲೆ ರೈತರು ಸೈಕಲ್ ಗಾಲಿ ಎಡೆ ಕುಂಟೆಗೆ ಮೊರೆ ಹೋಗುತ್ತಿದ್ದಾರೆ. ಇದು ಸರಳ ಮತ್ತು ಸುಲಭ ವಿಧಾನ ಕೂಡ ಹೌದು. ಹಿಂಗಾರಿನ ಬೆಳೆಗಳಾದ ಕಡಲೆ, ಜೋಳ, ಗೋದಿ ಇತ್ಯಾದಿ ಬೆಳೆಗಳಲ್ಲಿ ಕಸ ತೆಗೆಯಲು ಕೂಲಿಯಾಳು ಕೊರತೆ ಎದುರಾಗಿದೆ. ಪ್ರತಿ ಕೂಲಿಯಾಳುವಿಗೆ 150 ರಿಂದ 200 ಕೂಲಿ ಕೊಡುವುದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.
ಸರಿಯಾದ ಸಮಯಕ್ಕೆ ಕೂಲಿಯಾಳುಗಳು ಸಹ ಲಭ್ಯವಾಗುವುದಿಲ್ಲ. ಈ ಹಿನ್ನೆಲೆ ಸರ್ಕಾರವು ನೂತನ ತಂತ್ರಜ್ಞಾನವನ್ನು ಬಳಸಿ ಸೈಕಲ್ ಎಡೆ ಕುಂಟೆಯನ್ನು ಹೊರತಂದಿದ್ದು, ಈ ಸೈಕಲ್ ಎಡೆಕುಂಟೆಗಳು ಕೃಷಿ ಇಲಾಖೆಯಲ್ಲಿ ಲಭ್ಯವಿವೆ. ಇದಕ್ಕೆ ಬೇಡಿಕೆ ಬಂದಿದೆ. ಇದನ್ನು ಬಳಸಿ ಹೊಲದಲ್ಲಿನ ಬೆಳೆಗಳ ನಡುವೆ ಇರುವ ಕಳೆ, ಕಸವನ್ನು ತೆಗೆಯಬಹುದು. ಈ ಕುಂಟೆ ಹಗುರವಾಗಿದ್ದು, ಒಬ್ಬರೆ ಇದನ್ನು ನಿರ್ವಹಿಸಲು ಸಾಧ್ಯವಿದೆ. ಸರಳ, ಸುಲಭವಾಗಿ ಇದರಿಂದ ಕಳೆ ತೆಗೆಯಬಹುದು.
ಗಂಗಾವತಿ: ತುಂಗಭದ್ರಾ ನದಿಯಲ್ಲಿ ಪುಷ್ಕರ, ತೀರ್ಥಸ್ನಾನ
ಎತ್ತುಗಳನ್ನು ಬಳಸಿ ಎಡೆ ಕುಂಟೆ ಹೊಡೆಯಲು ಮೂರ್ನಾಲ್ಕು ಕೃಷಿ ಕೂಲಿಕಾರ್ಮಿಕರು ಬೇಕು. ಇದಕ್ಕೆ ದುಬಾರಿ ಖರ್ಚು ಭರಿಸುವುದು ಅನಿವಾರ್ಯ. ಕೂಲಿ ದರ ಗಗನಕ್ಕೇರಿದೆ. ಮತ್ತೊಂದೆಡೆ ಕೃಷಿ ಚಟುವಟಿಕೆಗೆ ಕೂಲಿ ಕಾರ್ಮಿಕರು ಹುಡುಕುವುದು ಹರಸಾಹಸ ಎನಿಸಿದೆ. ಬಾಡಿಗೆ ಎತ್ತುಗಳನ್ನು ಪಡೆದು, ಕಷಿ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ ಎಡೆ ಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಸಾಧ್ಯವಾಗಿದೆ. ರೈತರ ಇಂತಹ ಕಷ್ಟಗಳಿಗೆ ಸೈಕಲ್ ಎಡೆ ಕುಂಟೆ ಪರಿಹಾರವಾಗಿದೆ.
ಇತ್ತೀಚೆಗೆ ಕೃಷಿ ಇಲಾಖೆಯಲ್ಲಿ ಸೈಕಲ್ ಎಡೆಕುಂಟೆಯನ್ನು ಖರೀದಿ ಮಾಡಿದ್ದೇನೆ. ಇದನ್ನು ಒಬ್ಬರೇ ಮುಂದೆ ದಬ್ಬಿಕೊಂಡು ಹೋಗಬಹುದು. ಬಳಸಲು ಈ ಮಾದರಿ ತೀರಾ ಸುಲಭವಾಗಿದೆ. ಈ ಭಾಗದಲ್ಲಿ ಕೃಷಿ ಚಟುವಟಿಕೆಯ ವೆಚ್ಚವೂ ದುಬಾರಿಯಾಗಿದೆ. ದುಬಾರಿ ವೆಚ್ಚದಿಂದ ಪಾರಾಗಲು ಇಂತಹ ಹೊಸ ಪ್ರಯೋಗಗಳೇ ರೈತರ ಕೈಹಿಡಿದಿವೆ. ಸೈಕಲ್ ಎಡೆಕುಂಟೆ ಬಳಸಿದರೆ, ಎರಡ್ಮೂರು ತಾಸಿನಲ್ಲಿ ಒಂದು ಎಕರೆ ಹೊಲದಲ್ಲಿ ಎಡೆ ಹೊಡೆಯಬಹುದು ಎಂದು ಕಡೇಕೊಪ್ಪ ಗ್ರಾಮದ ರೈತ ನಿಂಗಪ್ಪ ಜಿಗೇರಿ ಹೇಳಿದ್ದಾರೆ.