* ಹತ್ತಾರು ಊರುಗಳಿಗೆ ಹಾಗು ಗ್ರಾಮಕ್ಕೆ ಅನುಕೂಲವಾಗಲು ತನ್ನ ಜಮೀನನ್ನು ರಸ್ತೆಗೆ ಬಿಟ್ಟುಕೊಟ್ಟು
* 40 ವರ್ಷದ ಹಿಂದೆ ರಸ್ತೆಗೆ ಭೂಮಿ ನೀಡಿದ್ದರೂ ಪರಿಹಾರ ನೀಡದ ಹಿನ್ನೆಲೆ
* ವೇಮಗಲ್ ಹೋಬಳಿಯ ವಳೇರಹಳ್ಳಿಯಲ್ಲಿ ಘಟನೆ
ಕೋಲಾರ(ಏ.25): ಹತ್ತಾರು ಊರುಗಳಿಗೆ ಹಾಗು ಗ್ರಾಮಕ್ಕೆ ಅನುಕೂಲವಾಗಲಿ ಎಂದು ತನ್ನ ಜಮೀನನ್ನು ರಸ್ತೆಗೆ ಬಿಟ್ಟುಕೊಟ್ಟು ಆ ಜಮೀನಿಗೆ ಪರಿಹಾರಕ್ಕಾಗಿ 40 ವರ್ಷಗಳಿಂದ ಕಾನೂನು ಹೋರಾಟ ಮಾಡಿದರೂ ಪರಿಹಾರ ಸಿಗದ ಕಾರಣ ರೈತನೊಬ್ಬ ಜೆಸಿಬಿ ಮೂಲಕ ರಸ್ತೆಯನ್ನೇ ಅಗೆದು ಪ್ರತಿಭಟಿಸಿದ ಘಟನೆ ವೇಮಗಲ್ ಹೋಬಳಿಯ ವಳೇರಹಳ್ಳಿಯಲ್ಲಿ ನಡೆದಿದೆ.
ವಿಷಯ ತಿಳಿದ ಸಂಸದ ಮುನಿಸ್ವಾಮಿ ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಹಾಗು ಜಮೀನಿನ ವಾರಸುದಾರ ಆಂಜನಪ್ಪನ ಜೊತೆಗೆ ಮಾತನಾಡಿ ಸರ್ಕಾರದಿಂದ ಪರಿಹಾರ ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು. ಬಳಿಕ ರಸ್ತೆಯನ್ನು ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ವಳೇರಹಳ್ಳಿ ಗ್ರಾಮದ ಆಂಜನಪ್ಪ ಎಂಬುವವವರಿಗೆ ಸೇರಿದ ಜಮೀನಿನಲ್ಲಿ 40 ವರ್ಷಗಳ ಹಿಂದೆ ಗ್ರಾಮಸ್ಥರ ಒತ್ತಾಯದ ಮೇರೆಗೆ ರಸ್ತೆಗಾಗಿ ಜಮೀನನ್ನು ಬಿಟ್ಟುಕೊಡಲಾಗಿತ್ತು. ನಂತರ ಆ ಜಮೀನಿಗೆ ಪರಿಹಾರ ಪಡೆಯಲು ಕಾನೂನು ರೀತಿಯಲ್ಲಿ ದಾಖಲೆಗಳನ್ನು ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡಿದರೂ ಪರಿಹಾರ ಸಿಕ್ಕಿರಲಿಲ್ಲ.
ಇದರ ವಿರುದ್ಧ ಆಂಜನಪ್ಪ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಸುಮಾರು 40 ವರ್ಷಗಳಿಂದ ಪರಿಹಾರಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದರೂ ನ್ಯಾಯಾಲಯದಲ್ಲಿಯೂ ಪ್ರಕರಣ ಇತ್ಯರ್ಥವಾಗದೆ ಇಲಾಖೆಯಲ್ಲಿಯೂ ಪರಿಹಾರ ಸಿಗದೆ ಹತಾಶರಾದ ಅವರು ಶನಿವಾರ ಸಂಜೆ ಜೆಸಿಬಿಯಿಂದ ರಸ್ತೆಯನ್ನು ಅಗೆದು ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದರು.