ಅಕಾಲಿಕ ಮಳೆ: ಧರೆಗುರುಳಿದ ಬಾಳೆ, ಕಂಗಾಲಾದ ರೈತ..!

By Kannadaprabha NewsFirst Published Apr 23, 2020, 7:59 AM IST
Highlights

ಅಕಾಲಿಕ ಮಳೆಗೆ ನೆಲಕ್ಕುರುಳಿದ ಬಾಳೆ ಗಿಡಗಳು| ಲಕ್ಷಾಂತರ ರುಪಾಯಿಗಳ ನಷ್ಟ| ಆಶನಾಳ್ ಗ್ರಾಮದಲ್ಲಿ ಸುಮಾರು ಮೂರುವರೆ ಎಕರೆ ಪ್ರದೇಶದಲ್ಲಿ ನಾಲ್ಕು ಸಾವಿರ ಬಾಳೆಗಿಡಗಳನ್ನು ಬೆಳೆದಿದ್ದ ರೈತ ವೀರಭದ್ರಪ್ಪ ಇದೀಗ ಭಾರಿ ಹೊಡೆತ ಅನುಭವಿಸಿದ್ದಾರೆ|

ಯಾದಗಿರಿ(ಏ.23): ತಿಂಗಳೊಪ್ಪತ್ತಿನಲ್ಲಿ ಬಾಳು ಹಸನಾಗಿಸಬೇಕಾಗಿದ್ದ ಸಾವಿರಾರು ಬಾಳೆ ಗಿಡಗಳು ಅಕಾಲಿಕ ಮಳೆ, ಬಿರುಗಾಳಿಗೆ ಧರೆಗುರುಳಿವೆ. ಲಾಕ್ ಡೌನ್ ಮುಗಿದ ನಂತರ ಇನ್ನೇನು ಬಾಳೆಗೊನೆಗಳು ಮಾರಾಟವಾಗಿ ಲಕ್ಷಾಂತರ ರುಪಾಯಿಗಳ ಜೇಬಿಗಿಳಿಸುವ ಕನಸು ಕಂಡಿದ್ದ ಯಾದಗಿರಿ ಸಮೀಪದ ಆಶನಾಳ್ ಗ್ರಾಮದ ರೈತ ವೀರಭದ್ರಪ್ಪನವರ ಬಾಳಿಗೆ ಬರಸಿಡಿಲು ಬಡಿದಂತಾಗಿದೆ.

ಆಶನಾಳ್ ಗ್ರಾಮದಲ್ಲಿ ಸುಮಾರು ಮೂರುವರೆ ಎಕರೆ ಪ್ರದೇಶದಲ್ಲಿ ನಾಲ್ಕು ಸಾವಿರ ಬಾಳೆಗಿಡಗಳನ್ನು ಬೆಳೆದಿದ್ದ ರೈತ ವೀರಭದ್ರಪ್ಪ ಇದೀಗ ಭಾರಿ ಹೊಡೆತ ಅನುಭವಿಸಿದ್ದಾರೆ. ಒಂದೂವರೆರಿಂದ ಎರಡು ಲಕ್ಷ ರುಪಾಯಿಗಳಷ್ಟು ಖರ್ಚು ಮಾಡಿ ಬಾಳೆಗಿಡ ಪ್ರಯೋಗ ನಡೆಸಿದ್ದ ವೀರಭದ್ರಪ್ಪ ಈ ಭಾಗದಲ್ಲಿ ಯಶಸ್ಸು ಸಿಗಬಹುದೆಂದು ಭಾರಿ ನಿರೀಕ್ಷೆಯನ್ನೂ ಹೊಂದಿದ್ದರು.

ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಾಳೆ, ಮಾವು: ಸಂಕಷ್ಟದಲ್ಲಿ ರೈತ..!

ಸುಮಾರು 30-40 ಕೆಜಿ ಭಾರದ ಗೊನೆ ಹೊತ್ತ, ಸಾವಿರಕ್ಕೂ ಸಮೀಪದ ಗಿಡಗಳು ಕೊಯ್ದು ಮಾರಾಟ ಮಾಡಬೇಕೆಂದು ನಿರ್ಧರಿಸಿದ್ದರು. ಹೀಗಾಗಿ, ಹುಬ್ಬಳ್ಳಿ, ಬೆಂಗಳೂರು, ಹೈದರಾಬಾದ್ ಮುಂತಾದೆಡೆ ಮಾರುಕಟ್ಟೆಯವರೊಡನೆ ವ್ಯವಹಾರ ಕುದುರಿಸಿದ್ದಾಗ, ಲಾಕ್ ಡೌನ್ ಎಫೆಕ್ಟ್ ಅಡ್ಡಲಾಗಿತ್ತು. ಹದಿನೈದು ಇಪ್ಪತ್ತು ದಿನಗಳಾದ ಮೇಲೆ ಕಟಾವು ಮಾಡಿ ಮಾರಾಟ ಮಾಡಿದರಾಯ್ತು ಎಂದು ವೀರಭದ್ರಪ್ಪ ಲೆಕ್ಕ ಹಾಕಿದ್ದಾಗ, ಮೊನ್ನೆ ಸೋಮವಾರ ರಾತ್ರಿ ಸುರಿದ ಅಕಾಲಿಕ ಮಳೆ ಹಾಗೂ ಬೀಸಿದ ಬಿರುಗಾಳಿಗೆ ಸಾವಿರಾರು ಗಿಡಗಳು ಧರೆಗುರುಳಿವೆ.

2 ಸಾವಿರದಷ್ಟು ಬಾಳೆಗಿಡಗಳು ನೆಲಕ್ಕುರುಳಿವೆ. ಒಂದು ಗೊನೆಗೆ 120 ಕಾಯಿಗಳಂತೆ 30-40ಕೆ.ಜಿ. ಫಲ ಹೊಂದಿದ್ದು, ಸುಮಾರು ಎರಡುನೂರು ಕ್ವಿಂಟಾಲ್‌ನಷ್ಟು, ಅಂದರೆ ಅಂದಾಜು 2.50 ಲಕ್ಷ ರು.ಗಳಿಂದ ಮೂರು ಲಕ್ಷ ರುಪಾಯಿಗಳವರೆಗೆ ನಷ್ಟವಾಗಿದೆ. ಪ್ರತಿ ಕ್ವಿಂಟಾಲ್‌ಗೆ 1200 ರು.ಗಳಿಂದ 1400 ರು.ಗಳ ನಿರೀಕ್ಷೆಯಿತ್ತು.

ಮಂಗಳವಾರ ಬೆಳಿಗ್ಗೆ ತೋಟಕ್ಕೆ ಬಂದ ಅವರಿಗೆ ಅಲ್ಲಾದ ಹಾನಿ ಆಘಾತ ಮೂಡಿಸಿದೆ. ಹತ್ತು ಹದಿನೈದು ದಿನಗಳಲ್ಲಿ ಲಕ್ಷಾಂತರ ರುಪಾಯಿಗಳ ಆದಾಯ ನಿರೀಕ್ಷೆಯಲ್ಲಿದ್ದ ಅವರಿಗೆ ಬೆಳೆಗೆ ಮಾಡಿದ ಖರ್ಚೂ ಸಹ ಬಾರದಿರುವುದು ಆತಂಕ ಮೂಡಿಸಿದೆ. ಒಮ್ಮೆ ಬರ, ಮತ್ತೊಮ್ಮೆ ನೆರೆ, ಈಗ ಕೊರೋನಾ ಆತಂಕದಿಂದಾದ ಲಾಕ್ ಡೌನ್ ರೈತರ ಬಾಳನ್ನು ಮತ್ತಷ್ಟೂ ಗಂಭೀರ ಸ್ಥಿತಿಗೆ ತಂದಿಟ್ಟಿದ್ದು, ಸರ್ಕಾರ ಸಂಕಷ್ಟದಲ್ಲಿರುವ ಇಂತಹ ರೈತರ ನೆರವಿಗೆ ಬರಬೇಕಾಗಿದೆ.

ಸಾವಿರಕ್ಕೂ ಸಮೀಪ ಗಿಡಗಳು ನೆಲಕ್ಕುರುಳಿವೆ. ಇನ್ನೇನು ಹದಿನೈದು ದಿನಗಳನ್ನು ಕಳೆದರೆ ಬೆಳೆ ಮಾರಾಟವಾಗುತ್ತಿತ್ತು. ಲಾಕ್ ಡೌನ್‌ನಿಂದಾಗಿ ತಡವಾಗಿದೆ. ಮುಂದೆ ಒಳ್ಳೆ ಬೆಲೆ ನಿರೀಕ್ಷಿಸಿ, ವ್ಯಾಪಾರಸ್ಥರೊಂದಿಗೆ ಮಾತನಾಡಿದ್ದೆ. ಆದರೆ, ಸೊಮವಾರದ ಮಳೆ, ಬಿರುಗಾಳಿ ಎಲ್ಲವನ್ನೂ ಹಾಳು ಮಾಡಿದೆ ಎಂದು ಆಶನಾಳ್ ಗ್ರಾಮದ ಬಾಳೆ ಬೆಳೆಗಾರ ವೀರಭದ್ರಪ್ಪ ಹೇಳಿದ್ದಾರೆ.
 

click me!