1 ರೂ. ಗೆ ಕೆಜಿ ಬದನೆಕಾಯಿ: ರೈತರ ಬದುಕು ಬರ್ಬಾದ್‌..!

By Kannadaprabha News  |  First Published May 12, 2021, 8:34 AM IST

* ಪುಕ್ಕಟೆ ಹಂಚಿ ಹೋದ ಕನಕಾಪುರದ ಕೃಷಿಕ 
* ಉತ್ತಮ ಬೆಲೆ ಸಿಗುವ ಕನಸಿನಲ್ಲಿ ಅರ್ಧ ಎಕರೆ ಬದನೆ ಬೆಳೆದಿದ್ದೆ ರೈತ
* ಲಾಕ್‌ಡೌನ್‌ನಿಂದ ಸಂತೆ ಮಾರುಕಟ್ಟೆಗಳು ಬಂದ್‌ 


ನಾರಾಯಣ ಹೆಗಡೆ

ಹಾವೇರಿ(ಮೇ.12): ಬೇಸಿಗೆ ಸೀಸನ್‌ನಲ್ಲಿ ತರಕಾರಿ ಬೆಳೆ ಕೈಗೆ ಬಂದರೆ ಉತ್ತಮ ಬೆಲೆ ಸಿಗುತ್ತದೆ ಎಂದು ಬದನೆ (ಮುಳಗಾಯಿ) ಬೆಳೆದ್ದಿದ ರೈತನೊಬ್ಬ ಮಾರುಕಟ್ಟೆಗೆ ತಂದಾಗ ಬೆಲೆ ಸಿಗದೇ ಬೇಸತ್ತು ಪುಕ್ಕಟೆ ಹಂಚಿಹೋದ ಘಟನೆ ಸೋಮವಾರ ನಗರದಲ್ಲಿ ನಡೆದಿದೆ. ಹಾವೇರಿ ಮಾರುಕಟ್ಟೆಯಲ್ಲಿ 1 ಕೇಜಿ ಬದನೆ ಬೆಲೆ 1!

Tap to resize

Latest Videos

ತಾಲೂಕಿನ ಕನಕಾಪುರ ಗ್ರಾಮದ ಫಕ್ಕೀರಗೌಡ ಗಾಜಿಗೌಡ್ರ ಎಂಬವರು ಅರ್ಧ ಎಕರೆ ಜಾಗದಲ್ಲಿ ಮುಳಗಾಯಿ ಬೆಳೆದಿದ್ದು ಉತ್ತಮ ಫಸಲು ಬಂದಿದೆ. ವಾರದಲ್ಲಿ ಎರಡು ಬಾರಿ ಕೊಯ್ಲು ಮಾಡುತ್ತಿದ್ದಾರೆ. ಸೋಮವಾರ ಮಾರುಕಟ್ಟೆಗೆ 5 ಕ್ರೇಟ್‌ (ಸುಮಾರು 100 ಕೆಜಿ) ಬದನೆಕಾಯಿ ತಂದಿದ್ದರು. ತರಕಾರಿ ಹರಾಜು ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಒಂದು ಕ್ರೇಟ್‌ (20 ಕೆಜಿ) ಬದನೆಯನ್ನು 20ಕ್ಕೆ ಕೇಳಿದ್ದಾರೆ. ಮುನ್ನಾದಿನ ರಾತ್ರಿಯೆಲ್ಲ ಕೊಯ್ದು ಕಷ್ಟಪಟ್ಟು ಹಾವೇರಿ ಎಪಿಎಂಸಿಗೆ ತರಲೆಂದೇ ನೂರಾರು ರು. ಖರ್ಚು ಮಾಡಿದ್ದ ಗಾಜಿಗೌಡ್ರರಿಗೆ ದರ ಕೇಳಿ ತೀವ್ರ ಆಘಾತವಾಗಿದೆ. ರುಪಾಯಿಗೆ 1 ಕೆಜಿ ಮಾರಲು ಮನಸ್ಸು ಬರಲಿಲ್ಲ. ಅದಕ್ಕಾಗಿ ತರಕಾರಿ ಖರೀದಿಗೆಂದು ಬಂದವರಿಗೆ ಪುಕ್ಕಟೆಯಾಗಿ ಕೊಟ್ಟು ಹೋಗಿದ್ದಾರೆ.

ಗಾಜಿಗೌಡ್ರ ಅರ್ಧ ಎಕರೆಯಲ್ಲಿ ಬದನೆ ಬೆಳೆದಿದ್ದಾರೆ. ಬೇಸಿಗೆಯಲ್ಲಿ ತರಕಾರಿಗೆ ಉತ್ತಮ ಬೆಲೆ ಸಿಗುತ್ತದೆ ಎಂದುಕೊಂಡು ಅವರು ಸುಮಾರು 20 ಸಾವಿರ ಖರ್ಚು ಮಾಡಿದ್ದಾರೆ. ಬೀಜ, ಗೊಬ್ಬರ, ನೀರು, ಕೂಲಿಗೆಂದು ಕಿಸೆ ಖಾಲಿ ಮಾಡಿಕೊಂಡಿದ್ದರು. ಒಂದು ವಾರದಿಂದ ಫಸಲು ಬರಲಾರಂಭಿಸಿದೆ. ಕಳೆದ ವಾರ 20 ಕೆಜಿ ತೂಕದ ಬಾಕ್ಸ್‌ಗೆ 170 ದರ ಸಿಕ್ಕಿತ್ತು. ಈ ಸಲ ಬಾಕ್ಸ್‌ಗೆ 20 ದರ ಕೇಳಿ ಆತಂಕಗೊಂಡಿದ್ದಾರೆ. ಕೊಯ್ಲು ಮಾಡಿ, ಮಾರುಕಟ್ಟೆಗೆ ಸಾಗಣೆ ಮಾಡಿದ ಖರ್ಚು ಕೂಡ ಸಿಗದ ಪರಿಸ್ಥಿತಿ ಉದ್ಭವಿಸಿದೆ.

ಕೊರೋನಾದಿಂದ ನಿತ್ಯ 150 ಟನ್‌ ತರಕಾರಿ ಕಸಕ್ಕೆ..! 

ತರಕಾರಿ ಮಾರಾಟಕ್ಕೆ ಬಂದರೆ ಪೊಲೀಸರು ಹೊಡೆಯುತ್ತಾರೆ. ಹಾಗಂತ ಗಿಡದಲ್ಲೇ ಮುಳಗಾಯಿ ಬಿಟ್ಟಲೆ ಬಲಿತು ಪ್ರಯೋಜನಕ್ಕೆ ಬಾರದಂತಾಗುತ್ತದೆ. ಆದ್ದರಿಂದ ವಾರದಲ್ಲಿ ಎರಡು ಬಾರಿ ಕೊಯ್ಲು ಮಾಡಬೇಕಾಗುತ್ತದೆ. ವಾರದಲ್ಲಿ ಎರಡು ಬಾರಿಯಂತೆ 10ರಿಂದ 15 ಬಾಕ್ಸ್‌ ಮುಳಗಾಯಿ ಸಿಗುತ್ತದೆ. ಹೀಗೆ ಒಂದು ತಿಂಗಳ ಕಾಲ ನಿರಂತರ ಆದಾಯ ಸಿಗುತ್ತಿತ್ತು. ಆದರೆ, ಕೊರೋನಾ ಲಾಕ್‌ಡೌನ್‌ನಿಂದ ಸಂತೆ ಮಾರುಕಟ್ಟೆಗಳು ಬಂದ್‌ ಆಗಿವೆ. ಹೊರ ಜಿಲ್ಲೆಗಳಿಗೆ ಸಾಗಣೆಯೂ ಕಷ್ಟವಾಗಿದೆ. ಮದುವೆ ಇನ್ನಿತರ ಸಮಾರಂಭವೂ ಇಲ್ಲದ್ದರಿಂದ ಬೇಡಿಕೆಯಿಲ್ಲದೇ ಬದನೆ ಬೆಳೆದ ರೈತರ ಬದುಕು ಬರ್ಬಾದ್‌ ಆಗುತ್ತಿದೆ.

ಉತ್ತಮ ಬೆಲೆ ಸಿಗುವ ಕನಸಿನಲ್ಲಿ ಅರ್ಧ ಎಕರೆ ಬದನೆ ಬೆಳೆದಿದ್ದೆ. ಉತ್ತಮ ಫಸಲು ಬಂದಿದೆ. ಸೋಮವಾರ 5 ಬಾಕ್ಸ್‌ ಮುಳಗಾಯಿ ಮಾರಾಟಕ್ಕೆ ತಂದಿದ್ದೆ. ಬಾಕ್ಸ್‌ಗೆ 20 ಕೇಳಿದರು. ಅದಕ್ಕಾಗಿ ಬೇಸತ್ತು ಪುಗಸಟ್ಟೆ ಕೊಟ್ಟೆ. ಎರಡು ದಿನದಲ್ಲಿ ಮತ್ತೆ ಅದಕ್ಕಿಂತ ಹೆಚ್ಚೇ ಕೊಯ್ಲು ಬರಲಿದೆ. ಯಾವುದಾದರೂ ಮಠಕ್ಕೆ ಕೊಟ್ಟು ಬರಲು ನಿರ್ಧರಿಸಿದ್ದೇನೆ ಎಂದು ಮುಳಗಾಯಿ ಬೆಳೆದ ರೈತ ಫಕ್ಕೀರಗೌಡ ಗಾಜಿಗೌಡ್ರ ತಿಳಿಸಿದ್ದಾರೆ.  

click me!