ಕೊರೋನಾದಿಂದ ನಿತ್ಯ 150 ಟನ್‌ ತರಕಾರಿ ಕಸಕ್ಕೆ..!

ಕಲಾಸಿಪಾಳ್ಯ ಮಾರುಕಟ್ಟೆ ನಗರದಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಆನೇಕಲ್‌ ಸಮೀಪದ ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರ| ಅಷ್ಟು ದೂರ ತಲುಪುವಷ್ಟರಲ್ಲಿ ಮಾರಾಟಕ್ಕೆ ಅವಕಾಶ ಕೊಟ್ಟ ಸಮಯ ಬಹುತೇಕ ಪೂರ್ಣ| ವಹಿವಾಟಿಗೆ ಉಳಿದ ಸಮಯ ಸಾಕಾಗದೆ ನಿತ್ಯ ಲಕ್ಷಾಂತರ ರು. ನಷ್ಟ| 

Everyday 150 Tonne Vegetable Waste Due to Janata Curfew in Bengaluru grg

ಬೆಂಗಳೂರು(ಮೇ.03): ಮಾರುಕಟ್ಟೆಗಳಲ್ಲಿ ಕೇವಲ 6 ಗಂಟೆಗಳ ಕಾಲ ಮಾತ್ರ ತರಕಾರಿ ಮಾರಾಟಕ್ಕೆ ಅವಕಾಶ ನೀಡಿರುವುದು ಹಾಗೂ ಗ್ರಾಹಕರಿಗೆ ಮಾರುಕಟ್ಟೆಗೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಮಾರುಕಟ್ಟೆಗೆ ಬರುವ ತರಕಾರಿ ಮಾರಾಟವಾಗದೇ ಹಾಗೆಯೇ ಉಳಿಯುತ್ತಿರುವುದರಿಂದ ರೈತರಿಗೆ ಲಕ್ಷಾಂತರ ರು. ನಷ್ಟವಾಗುತ್ತಿದೆ. ದುಬಾರಿ ಬಾಡಿಗೆ ತೆತ್ತು ವಾಹನಗಳಲ್ಲಿ ತರಕಾರಿ ತರುವ ರೈತರಿಗೆ ಸಗಟು ವ್ಯಾಪಾರಿಗಳು ಕೊಳ್ಳುವವರಿಲ್ಲ ಎಂದು ಹೇಳಿ ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಸಿಂಗೇನ ಅಗ್ರಹಾರ ಮಾರುಕಟ್ಟೆಗೆ ಪ್ರತಿನಿತ್ಯ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 300 ಟನ್‌ ನಷ್ಟು ತರಕಾರಿ ಬರುತ್ತಿದ್ದು, ಇದರಲ್ಲಿ ಸುಮಾರು 120-150 ಟನ್‌ ಮಾತ್ರ ಮಾರಾಟವಾಗುತ್ತಿದೆ.

ತರಕಾರಿ ತಿಪ್ಪೆಗೆ ಎಸೆದು, ರಸ್ತೆಗೆ ಚೆಲ್ಲಿ ರೈತ ಆಕ್ರೋಶ

150 ಟನ್‌ ತರಕಾರಿ ಕಸಕ್ಕೆ:

ಆನೇಕಲ್‌ ತಾಲೂಕಿನ ಸಿಂಗೇನ ಅಗ್ರಹಾರ ತರಕಾರಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಮತ್ತು ಖರೀದಿಗೆ ಅತ್ಯಂತ ಕಡಿಮೆ ಸಮಯ ನಿಗದಿಪಡಿಸಿರುವುದರಿಂದ ಸುಮಾರು 150 ಟನ್‌ ತರಕಾರಿ ಮಾರಾಟವಾಗುತ್ತಿದೆ. ಇನ್ನುಳಿದಿದ್ದು ಮರುದಿನ ಮಾರಾಟ ಮಾಡಬೇಕು. ಇಲ್ಲವಾದಲ್ಲಿ ಉಳಿದದ್ದು ಬಿಸಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ವ್ಯಾಪಾರಿಗಳು ಗೋಳಾಡುತ್ತಿದ್ದಾರೆ.

ಸೌಲಭ್ಯವಿಲ್ಲದೇ ರೈತರ ಒದ್ದಾಟ:

ಕಲಾಸಿಪಾಳ್ಯ ಸಗಟು ತರಕಾರಿ ಮಾರುಕಟ್ಟೆಯನ್ನು ಆನೇಕಲ್‌ ತಾಲೂಕಿನ ಸಿಂಗೇನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಇಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಹಾಗೂ ರೈತರಿಗೆ ವ್ಯವಸ್ಥಿತವಾಗಿ ಜಾಗವನ್ನು ನಿರ್ಮಿಸದೆ, ಸರ್ಕಾರ ಏಕಾಏಕಿ ಕೈಗೊಂಡಿರುವ ಕ್ರಮಗಳಿಗೆ ರೈತರು ನಷ್ಟಅನುಭವಿಸತೊಡಗಿದ್ದಾರೆ.

ಸಿಂಗೇನ ಅಗ್ರಹಾರ ಮಾರುಕಟ್ಟೆಯಲ್ಲಿ ರೈತರು ತಂದ ತರಕಾರಿಗಳನ್ನು ಇಟ್ಟುಕೊಳ್ಳಲು ಮೇಲ್ಚಾವಣಿ ವ್ಯವಸ್ಥೆ ಇಲ್ಲ. ತರಕಾರಿಗಳೆಲ್ಲ ಬಿಸಿಲ ಧಗೆಗೆ ಹಾಳಾಗುತ್ತಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಎಪಿಎಂಸಿಯವರು ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಕೆಲ ರೈತರು, ವ್ಯಾಪಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಪಿಎಂಸಿಗಳಲ್ಲೇ ಕೊಳೆಯುತ್ತಿದೆ ತರಕಾರಿ: ಕಂಗಾಲಾದ ರೈತಾಪಿ ವರ್ಗ

ಸಮಯ ವಿಸ್ತರಿಸಿ:

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ತಾವು ಬೆಳೆದ ತರಕಾರಿಗಳನ್ನು ಮುಂಜಾನೆ ತೋಟದಿಂದ ಕೊಯ್ಲು ಮಾಡಿಕೊಂಡು ಹೊರಟರೆ ಅವರು ಮಾರುಕಟ್ಟೆತಲುಪುವಷ್ಟರಲ್ಲಿ ಬೆಳಗ್ಗೆ 9 ಗಂಟೆಯಾಗುತ್ತದೆ. ಉಳಿದ ಎರಡು-ಮೂರು ತಾಸಿನಲ್ಲಿ ಏನು ವ್ಯಾಪಾರ ಮಾಡಲು ಸಾಧ್ಯ? ಕೆಲ ರೈತರು ತಾವು ಬೆಳೆದ ತರಕಾರಿಗಳು ವ್ಯಾಪಾರವಾಗದೆ, ಇಲ್ಲೇ ಬಿಟ್ಟು ಹೋಗಿರುವ ಹಲವು ನಿದರ್ಶನಗಳು ಇವೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಯವನ್ನು ಇನ್ನಷ್ಟುವಿಸ್ತರಿಸಿ, ರೈತರ ಬೆನ್ನಿಗೆ ನಿಲ್ಲಬೇಕು ಎಂದು ಕೋಲಾರ ಜಿಲ್ಲೆಯ ಟಮೋಟೊ ಬೆಳೆಗಾರ ಮುನಿರೆಡ್ಡಿ ಎಂಬುವರು ಆಗ್ರಹಿಸಿದರು.

ಚಿಕ್ಕಬಳ್ಳಾಪುರ ರೈತ ಮುನಿರಾಜು ಮಾತನಾಡಿ, ‘ಈಗಾಗಲೇ ಕೊರೋನಾದಿಂದ ನಾವು ಬಹಳಷ್ಟುನಷ್ಟಅನುಭವಿಸಿದ್ದೇವೆ. ರೈತರ ಉತ್ಪನ್ನಗಳಿಗೂ ಸಮಯ ನಿಗದಿಪಡಿಸಿದರೆ, ಕೂಲಿಕಾರರನ್ನು ಹುಡುಕುವುದು, ಕೊಯ್ಲು ಮಾಡುವುದು, ಸಾರಿಗೆ ವ್ಯವಸ್ಥೆಗಳನ್ನು ಮಾಡಿಕೊಂಡು ಬರುವಷ್ಟರಲ್ಲಿ ಸಮಯ ಮೀರಲಿದೆ. ಹಾಗಿದ್ದರೆ ನಾವು ಎಲ್ಲಿ ಮಾರಬೇಕು?’ ಎಂದು ಪ್ರಶ್ನಿಸಿದರು.

ಬೆಳಗ್ಗೆಯಿಂದ ಸಂಜೆವರೆಗೆ ಅವಕಾಶ ಬೇಕು

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಸೇರಿ ವಿವಿಧ ಜಿಲ್ಲೆಗಳಿಂದ ತರಕಾರಿ ಮಾರುಕಟ್ಟೆಗೆ ಬರುತ್ತವೆ. ರೈತರಿಂದ ಖರೀದಿಸಿ ನಾವು ಇತರೆ ವ್ಯಾಪಾರಿಗಳಿಗೆ ಮಾರಾಟ ಮಾಡುವ ವೇಳೆಗೆ ಸಮಯ ಮುಗಿಯುತ್ತದೆ. ಪ್ರತಿ ದಿನ ಮಾರುಕಟ್ಟೆಗೆ 300 ಟನ್‌ವರೆಗೂ ತರಕಾರಿ ಬರುತ್ತಿದ್ದು, 150 ಟನ್‌ಗಿಂತಲೂ ಕಡಿಮೆ ಮಾತ್ರ ವ್ಯಾಪಾರವಾಗುತ್ತದೆ. ಉಳಿದದ್ದು ಮರುದಿನ ಕಡಿಮೆ ದರಕ್ಕೆ ಮಾರಬೇಕು. ಅದು ಹಾಳಾದರೆ ಬಿಸಾಕಬೇಕು. ಆದ್ದರಿಂದ ಸಗಟು ತರಕಾರಿ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಕಲಾಸಿಪಾಳ್ಯ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ ಅಧ್ಯಕ್ಷ ಆರ್‌.ವಿ.ಗೋಪಿ ಆಗ್ರಹಿಸಿದರು.
 

Latest Videos
Follow Us:
Download App:
  • android
  • ios