ಹಾವೇರಿ: ಬೆಲೆ ಸಿಗದೇ ಸೇವಂತಿ ಹೂವು ಬೆಳೆ ನಾಶಪಡಿಸಿದ ರೈತ

By Kannadaprabha News  |  First Published May 20, 2021, 2:45 PM IST

* ಲಾಕ್‌ಡೌನ್‌ದಿಂದಾಗಿ ಹೂವನ್ನು ಕೇಳುವವರೇ ಇಲ್ಲ: ರೈತನ ಅಳಲು
* ಹಾವೇರಿ ತಾಲೂಕಿನ ನಾಗನೂರು ಗ್ರಾಮದ ರೈತನಿಂದ ಬೆಳೆ ನಾಶ
* ಸರ್ಕಾರ ಬಡ ರೈತರಿಗೆ ನೆರವು ನೀಡಬೇಕು ರೈತನ ಅಗ್ರಹ
 


ಹಾವೇರಿ(ಮೇ.20): ಕೊರೋನಾ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿದ ತಾಲೂಕಿನ ನಾಗನೂರು ಗ್ರಾಮದ ರೈತರೊಬ್ಬರು ಒಂದು ಎಕರೆ ಜಾಗದಲ್ಲಿ ಬೆಳೆಸಿದ್ದ ಸೇವಂತಿ ಹೂವಿನ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸಿದ್ದಾರೆ.

ಹೊಳೆಯಪ್ಪ ಸಿಂಗಾಪುರ ಎಂಬ ರೈತರು ಹುಲುಸಾಗಿ ಬೆಳೆದಿದ್ದ ಹೂವಿನ ಬೆಳೆಯನ್ನು ನೆಲಸಮಗೊಳಿಸಿದ್ದಾರೆ. ಮದುವೆ ಇನ್ನಿತರ ಸಮಾರಂಭಗಳಿಗೆ ಈ ಸಂದರ್ಭದಲ್ಲಿ ಉತ್ತಮ ದರ ಸಿಗುತ್ತದೆ ಎಂದುಕೊಂಡು 1 ಎಕರೆ ಜಾಗದಲ್ಲಿ ಹೂವು ಬೆಳೆಸಿದ್ದರು. ಎರಡು ದಿನಕ್ಕೊಮ್ಮೆ ಒಂದು ಕ್ವಿಂಟಲ್‌ನಷ್ಟು ಹೂವು ಕಟಾವಿಗೆ ಬರುತ್ತಿತ್ತು. ಆದರೆ, ಲಾಕ್‌ಡೌನ್‌ನಿಂದ ಹೂವನ್ನು ಕೇಳುವವರೇ ಇಲ್ಲದಂತಾಗಿದೆ. ಮದುವೆ ಇನ್ನಿತರ ಸಮಾರಂಭಗಳು ಇಲ್ಲದ್ದರಿಂದ ಕೊಳ್ಳುವವರು ಗತಿಯಿಲ್ಲದಂತಾಗಿದೆ. ಇದರಿಂದ ಏನಿಲ್ಲವೆಂದರೂ ಈ ರೈತನಿಗೆ ಕನಿಷ್ಠ 3 ಲಕ್ಷ ನಷ್ಟವಾಗಿದೆ.

Tap to resize

Latest Videos

ಹೊಳೆಯಪ್ಪ ಅವರು ಸುಮಾರು 50 ಸಾವಿರ ಖರ್ಚು ಮಾಡಿ ಹೂವನ್ನು ಬೆಳೆಸಿದ್ದರು. ಯುಗಾದಿ ಅಮಾವಾಸ್ಯೆ ದಿನ ಒಂದು ಕ್ವಿಂಟಲ್‌ಹೂವಿಗೆ 7 ಸಾವಿರ ಸಿಕ್ಕಿತ್ತು. ಈ ಮೊದಲು ಕೆಜಿ ಹೂವಿಗೆ ಕನಿಷ್ಠ ಎಂದರೂ 25 ರಿಂದ 30ಗೆ ಮಾರಾಟವಾಗುತ್ತಿತ್ತು. ಆದರೆ, ಲಾಕ್‌ಡೌನ್‌ ಶುರುವಾದ ಮೇಲೆ ಕ್ವಿಂಟಲ್‌ ಹೂವನ್ನು ಮಾರುಕಟ್ಟೆಗೆ ಒಯ್ದರೆ 100ಗೂ ಕೇಳುತ್ತಿಲ್ಲ. ಹೂವು ಕೀಳುವುದು, ಅದನ್ನು ನಗರಕ್ಕೆ ತರಲು ತಗಲುವ ವೆಚ್ಚವೂ ಹೂವು ಮಾರಾಟದಿಂದ ಬರುತ್ತಿಲ್ಲ. ಇದರಿಂದ ಬೇಸತ್ತು ಹೊಳೆಯಪ್ಪ ಅವರು ಬೆಳೆಯನ್ನೇ ನಾಶಪಡಿಸುವ ನಿರ್ಧಾರ ಕೈಗೊಂಡಿದ್ದಾರೆ.

'ಯಡಿಯೂರಪ್ಪ ಸರ್ಕಾರದ ವಿಶೇಷ ಪ್ಯಾಕೇಜ್‌ ಬಡವರಿಗೆ ವರ'

ಕಳೆದ ವರ್ಷವೂ ಇದೇ ಅವಧಿಯಲ್ಲಿ ಹೂವು ಬೆಳೆದಿದ್ದೆ. ಆಗಲೂ ಲಾಕ್‌ಡೌನ್‌ ಆಗಿ ನಷ್ಟವಾಗಿತ್ತು. ಈ ಸಲವೂ ಅದೇ ರೀತಿ ಸಮಸ್ಯೆಯಾಗಿದೆ. ಸರ್ಕಾರ ಹೂವು ಬೆಳೆಗಾರರಿಗೆ ಸಹಾಯಧನ ಘೋಷಿಸಿದ್ದರೂ ಅದು ನಮ್ಮ ಕೈಸೇರಿಲ್ಲ. ಈ ರೀತಿಯಾದರೆ ರೈತರು ಏನು ಮಾಡಬೇಕು ಎಂದು ಹೊಳೆಯಪ್ಪ ಬೇಸರ ವ್ಯಕ್ತಪಡಿಸಿದರು.

ಕೊರೋನಾ ಬಂದು ಎಲ್ಲರಿಗೂ ಸಮಸ್ಯೆಯಾಗಿದೆ. ಲಾಕ್‌ಡೌನ್‌ನಿಂದ ಹೂವು ಕೇಳುವವರಿಲ್ಲವಾಗಿದ್ದಾರೆ. ಮಾರುಕಟ್ಟೆಗೆ ಒಯ್ದರೆ ಸಾಗಣೆ ಖರ್ಚು ಕೂಡ ಸಿಗುತ್ತಿಲ್ಲ. ಆದ್ದರಿಂದ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ನೆಲಸಮ ಮಾಡಿದ್ದೇನೆ. ಸರ್ಕಾರ ಬಡ ರೈತರಿಗೆ ನೆರವು ನೀಡಬೇಕು ಎಂದು ಹೂವಿನ ಬೆಳೆ ನಾಶಪಡಿಸಿದ ರೈತ ಹೊಳೆಯಪ್ಪ ಸಿಂಗಾಪುರ ತಿಳಿಸಿದ್ದಾರೆ.
 

click me!