ಒಂದೇ ಮನೆಯ ನಾಲ್ವರು ಮೂಗರಿಗೆ 8 ತಿಂಗಳಿಂದ ಮಾಶಾಸನವಿಲ್ಲ: ಒಪ್ಪತ್ತಿನ ಊಟಕ್ಕೂ ಪರದಾಟ

By Kannadaprabha News  |  First Published May 20, 2021, 1:51 PM IST

* ಇವರ ಮೂಕರೋದನ ಕೇಳುವವರೇ ಇಲ್ಲ
* ಇವರಿಗೆ ಸರ್ಕಾರ ಅಥವಾ ಯಾರಾದರೂ ಮುಂದೆ ಬಂದು ಸಹಾಯಹಸ್ತ ನೀಡಬಹುದೇ? 
* ಲಾಕ್‌ಡೌನ್‌ ಸಂದರ್ಭದಲ್ಲಿ ಇವರ ಕುಟುಂಬ ನಿರ್ವಹಣೆ ತುಂಬಾ ದುಸ್ತರ 
 


ಮಹೇಶ ಛಬ್ಬಿ

ಮುಳಗುಂದ(ಮೇ.20): ಮನೆಯಲ್ಲಿ ನಾಲ್ವರು ಮೂಗರು, ಅವರಿಗೆ ತಿನ್ನಲು ಒಪ್ಪತ್ತಿನ ಊಟಕ್ಕೂ ಪರದಾಟ, ತುಂಬುತ್ತಿಲ್ಲ ಹೊಟ್ಟೆ. 8 ತಿಂಗಳಿಂದ ಇವರ ಮಾಶಾಸನ ಬಂದಿಲ್ಲ. ಇವರ ಮೂಕರೋದನ ಕೇಳುವವರೇ ಇಲ್ಲ. ಪಟ್ಟಣದ ಹರಿಣಶಿಕಾರಿ ಕಾಲನಿಯ ಕುಟುಂಬ. ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳಿಬ್ಬರು ಮೂಗರೇ. ಪಟ್ಟಣದ ಲಿಂಗಪ್ಪ ಮಲ್ಲಪ್ಪ ಚವ್ಹಾಣ, ಹೆಂಡತಿ ಚಂದ್ರವ್ವ ಲಿಂಗಪ್ಪ ಚವ್ಹಾಣ, ಮಕ್ಕಳಾದ ಗಂಗಪ್ಪ, ಮಹಾಂತೇಶ ಈ ದುರಾದೃಷ್ಟವಂತರು.

Latest Videos

undefined

ಲಿಂಗಪ್ಪ ಹಾಗೂ ಒಬ್ಬ ಮಗ ಮೂಕರಾದರೂ ಪಟ್ಟಣದ ಹೋಟೆಲ್‌ ಒಂದರಲ್ಲಿ ಪಾತ್ರೆ ತೊಳೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, ಲಾಕ್‌ಡೌನ್‌ದಿಂದ ಕಳೆದ 15 ದಿನಗಳಿಂದ ದುಡಿಯುವ ಕೈಗೆ ಕೆಲಸವಿಲ್ಲ. ತಿನ್ನಲು ಹೊಟ್ಟೆಗೆ ಅನ್ನವಿಲ್ಲ. ತಂದೆ ಅನಾರೋಗ್ಯಕ್ಕೆ ತುತ್ತಾದರೆ ತಾಯಿಯೂ ಮೂಕಿ, ಮಗನೊಬ್ಬನಿಗೆ ಮೂಗತನದ ಜತೆಗೆ ಅಂಗವೈಕಲ್ಯ. ಇನ್ನೊಬ್ಬ ಮಗನಿಗೆ ಬುದ್ಧಿಮಾಂದ್ಯ. ಅಂಗವೈಕಲ್ಯವಿದ್ದರೂ ಹೋಟೆಲ್‌ ಒಂದರಲ್ಲಿ ಕೆಲಸ ಮಾಡಿ ಹೇಗೂ ಬದುಕಿನ ಬಂಡಿ ಎಳೆಯುತ್ತಿದ್ದರು. ಆದರೆ, ಈಗ ಮಾಡಲು ಕೆಲಸವೂ ಇಲ್ಲ.

ಸರ್ಕಾರದ ವಿಶೇಷ ಪ್ಯಾಕೇಜ್‌ ಬಡವರ ಬ್ರೇಕ್‌ಫಾಸ್ಟ್‌ಗೂ ಆಗಲ್ಲ: HK ಪಾಟೀಲ

ಎಂಟು ತಿಂಗಳಿಂದ ಮಾಸಾಶನವಿಲ್ಲ:

ಮೊದಲು ಮನೆಯಲ್ಲಿ ನಾಲ್ಕು ಜನರಿಗೂ ಮಾಸಾಶನ ಬರುತ್ತಿತ್ತು. ಹಾಗೋ ಹೀಗೋ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ, ಈಗ ಎಂಟು ತಿಂಗಳಿಂದ ಮಾಸಾಶನ ಬಾರದೇ ಹಸಿವಿನಲ್ಲಿಯೇ ಜೀವನ ಸವೆಸುವಂತಾಗಿದೆ. ಅವರು ಹೇಳುವ ಮಾತು ಬೇರೆಯವರಿಗೆ ತಿಳಿಯುವುದಿಲ್ಲ. ಇಂತಹ ಒಂದು ಮನಕಲುಕುವ ಪರಿಸ್ಥಿತಿ ಇವರದ್ದಾಗಿದೆ.

ಸಹಾಯಹಸ್ತ ನೀಡಬಹುದೇ?:

ಇಂತಹ ಹಲವಾರು ಕುಟುಂಬಗಳಿದ್ದು, ಇವರಿಗೆ ಸರ್ಕಾರ ಅಥವಾ ಯಾರಾದರೂ ಮುಂದೆ ಬಂದು ಸಹಾಯಹಸ್ತ ನೀಡಬಹುದೇ? ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದೆ ಈ ಕುಟುಂಬ. ಹರಿಣಶಿಕಾರಿ ಕಾಲನಿಯಲ್ಲಿ ಇಂತಹ ಮೂಗರು, ಅಂಗವಿಕಲರು ಸುಮಾರು 20ರಿಂದ 25 ಜನರಿದ್ದಾರೆ. ಅದರಲ್ಲಿ ವಿಶೇಷವಾಗಿ ಈ ಕುಟುಂಬದಲ್ಲಿ ನಾಲ್ವರೂ ಮೂಗರೇ. ಒಬ್ಬ ಮಗ ಮೂಗತನದ ಜತೆಗೆ ಅಂಗವೈಕಲ್ಯತೆ, ಬುದ್ಧಿಮಾಂದ್ಯ ಕೂಡಾ ಹೊಂದಿದ್ದಾನೆ. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಇವರ ಕುಟುಂಬ ನಿರ್ವಹಣೆ ತುಂಬಾ ದುಸ್ತರವಾಗಿದ್ದು, ಸರ್ಕಾರ ಇವರ ಸಹಾಯಕ್ಕೆ ಬರುವಂತೆ ಕೇಳುತ್ತೇನೆ ಎಂದು ಪಪಂ ಮಾಜಿ ಸದಸ್ಯಮಹಾಂತೇಶ ಕಣವಿ ತಿಳಿಸಿದ್ದಾರೆ.
 

click me!