ಯಾದಗಿರಿ: ಪಂಪ್‌ ಆಪರೇಟರ್‌ ಆತ್ಮಹತ್ಯೆ; ಪೊಲೀಸರ ಧಮ್ಕಿ ಕಾರಣ?

Kannadaprabha News   | Asianet News
Published : Mar 27, 2021, 09:32 AM IST
ಯಾದಗಿರಿ: ಪಂಪ್‌ ಆಪರೇಟರ್‌ ಆತ್ಮಹತ್ಯೆ; ಪೊಲೀಸರ ಧಮ್ಕಿ ಕಾರಣ?

ಸಾರಾಂಶ

ಕೆರೆ, ಕಾಲುಗೆ ನಿರ್ಮಾಣಕ್ಕೆಂದು ಜಮೀನು ಕೊಟ್ಟಿದ್ದ ರೈತನ ಮೇಲೆ ಪೊಲೀಸ್‌ ದೌರ್ಜನ್ಯ ಆರೋಪ| ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಬಸಪ್ಪ ಚೆಲುವಾದಿ ಕಲಬುರಗಿ ಆಸ್ಪತ್ರೆಯಲ್ಲಿ ಸಾವು| 

ಯಾದಗಿರಿ(ಮಾ.27): ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಜಾತ್ರೆಯ ರಥೋತ್ಸವ ವೇಳೆ ಪ್ರಾಣಿಬಲಿ ಹಾಗೂ ವ್ಯಕ್ತಿಯೊಬ್ಬ ರಥದ ಚಕ್ರಗಳಡಿ ಸಿಲುಕಿ ಸಾವನ್ನಪ್ಪಿದ ಪ್ರಕರಣದ ಬಿಸಿ ಇನ್ನೂ ಹಸಿಯಾಗಿರುವಾಗಲೇ, ಇದೇ ಅಗ್ನಿ ಗ್ರಾಮದಲ್ಲಿ ಮತ್ತೊಂದು ದುರಂತ ನಡೆದಿದೆ.

ಕೆರೆ-ಕಾಲುವೆ ನಿರ್ಮಾಣಕ್ಕೋಸ್ಕರ ಪಿತ್ರಾರ್ಜಿತವಾಗಿ ಬಂದಿದ್ದ ಆಸ್ತಿಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟ ನಂತರ, ಅಲ್ಲೇ ಹೊರಗುತ್ತಿಗೆ ಅಧಾರದ ಮೇಲೆ ಪಂಪ್‌ ಆಪರೇಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ರೈತನೊಬ್ಬ ವೇತನಕ್ಕಾಗಿ ಅಲೆದಾಡಿ, ಅದು ಸಿಗದೆ ಇದ್ದಾಗ ಕೊನೆಗೆ ವ್ಯವಸ್ಥೆ ವಿರುದ್ಧ ಹತಾಶಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕಾಡಿದ ಬಡತನ, ವೇತನಕ್ಕಾಗಿ ಗುತ್ತಿಗೆದಾರರ ಬಳಿ ಅಲೆದಾಟ, ಕುಟುಂಬದ ನಿರ್ವಹಣೆಗೆ ಅಡಚಣೆ, ಸಂಬಳ ನೀಡುವಲ್ಲಿ ಹಿಂದೇಟು ಹಾಕಿ ದರ್ಪ ಮೆರೆದ ಗುತ್ತಿಗೆದಾರರ ವಿರುದ್ಧ ಸೆಟೆದು ನಿಂತ ಈ ಬಡರೈತನ ಮೇಲೆ ಖಾಕಿ ಅನ್ನೋ ಬ್ರಹ್ಮಾಸ್ತ್ರ ಪ್ರಯೋಗಿಸಿದ ಗುತ್ತಿಗೆದಾರರ ಪ್ರಭಾವ, ರಕ್ಷಕರೇ ಭಕ್ಷಕರಾದಾಗ, ಇದನ್ನೆಲ್ಲ ಸಹಿಸಲಿಕ್ಕಾಗದ ನೊಂದ ರೈತ ಕೊನೆಗೆ ಸಾವಿಗೆ ಶರಣಾಗಿದ್ದಾನೆ.

ಶಹಾಪೂರ: ಸಾಲಬಾಧೆ ತಾಳದೆ ಆತ್ಮಹತ್ಯೆಗೆ ಶರಣಾದ ಅನ್ನದಾತ

ಸುಳ್ಳು ಎಫ್‌ಐಆರ್‌ ದಾಖಲು, ಪ್ರಕರಣಗಳ ತಿರುಚುವಿಕೆ, ಅಮಾಯಕರ ವಿರುದ್ಧ ದೌರ್ಜನ್ಯ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿಂದೇಟು, ಮರಳು ಮಾಫಿಯಾ, ಮಟ್ಕಾ- ಜೂಜಾಟದ ಅಡ್ಡೆಕೋರರಿಗೇ ವರದಾನವೆಂಬ ಅನೇಕ ಆರೋಪಗಳಿಗೆ ಗುರಿಯಾಗಿರುವ ಜಿಲ್ಲೆಯ ಖಾಕಿ ಪಡೆಗೆ, ಈಗ ಅಗ್ನಿ ಗ್ರಾಮದ ರೈತ ಬಸಪ್ಪ ಚೆಲುವಾದಿ ಆತ್ಮಹತ್ಯೆ ಪ್ರಕರಣ ಇಲ್ಲಿನ ಜಿಡ್ಡುಗಟ್ಟಿದ ವ್ಯವಸ್ಥೆಗೆ ಸಾಕ್ಷಿಯಂತಿದೆ.

ಏನೀ ಪ್ರಕರಣ:

8-9 ವರ್ಷಗಳ ಹಿಂದೆ ಕೆರೆ-ಕಾಲುವೆಗಳ ನಿರ್ಮಾಣಕ್ಕೆಂದು ಅಗ್ನಿ ಗ್ರಾಮದ ಬಸಪ್ಪ ಚೆಲುವಾದಿ ಎಂಬ ರೈತನ 26 ಎಕರೆ ಪಿತ್ರಾರ್ಜಿತ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಬಸಪ್ಪ ಸೇರಿದಂತೆ ನಾಲ್ವರಿಗೆ ಇಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಲಾಗಿತ್ತು. ಅದರೆ, ಕಳೆದ ಕೆಲವು ದಿನಗಳಿಂದ ವೇತನ ನೀಡದಿದ್ದಾಗ, ಕುಟುಂಬ ನಿರ್ವಹಣೆಗೆ ಅಡಚಣೆಯಾಗಿ ಬಸಪ್ಪ ಗುತ್ತಿಗೆದಾರರ ಮೊರೆ ಹೋಗಿದ್ದಾನೆ.

ಆದರೆ, ವೇತನ ಕೊಡಬೇಕಾದ ಗುತ್ತಿಗೆದಾರರು ಪೊಲೀಸರಿಗೆ ಈತನ ವಿರುದ್ಧವೇ ಮೌಖಿಕ ದೂರು ನೀಡಿದ್ದಾರೆ. ಗುತ್ತಿಗೆದಾರರ ಪ್ರಭಾವ ಕೆಲಸ ಮಾಡಿದೆ. ಠಾಣೆಗೆ ಕರೆಯಿಸಿ ಪೊಲೀಸ್‌ ಅಧಿಕಾರಿಗಳು ಬಸಪ್ಪನನ್ನೇ ಬೆದರಿಸಿ, ದಂಡಾಸ್ತ್ರ ಪ್ರಯೋಗಿಸಿದ್ದಾರೆ. ನೊಂದ ಬಸಪ್ಪ, ಮಾ.20 ರಂದು ಯಾದಗಿರಿ ಜಿಲ್ಲಾಸ್ಪತ್ರೆಗೆ ಬಂದು ದೂರು (ಎಂಎಲ್ಸಿ) ನೀಡಿದ್ದಾರೆ. ಮಾಧ್ಯಮಗಳೆದುರು ತನಗಾದ ಅನ್ಯಾಯದ ಬಗ್ಗೆ ಗೋಳನ್ನೂ ತೋಡಿಕೊಂಡಿದ್ದ.

ಯಾದಗಿರಿ: ಮಟ್ಕಾ ದಂಧೆಗೆ ಖಾಕಿ ಕಾವಲು ?

ಊರಿಗೆ ವಾಪಸ್ಸಾದ ನಂತರವೂ ತನ್ನ ಮೇಲೆ ದೌರ್ಜನ್ಯ ಮುಂದುವರೆದಿದ್ದನ್ನು ಕಂಡು ನೊಂದ ಬಸಪ್ಪ, ಮಾ.22 ರಂದು ವಿಷ ಸೇವಿಸಿದ್ದಾನೆ. ಹುಣಸಗಿ ಸರ್ಕಾರಿ ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಾ.25 ರಂದು ಬಸಪ್ಪ ಮೃತಪಟ್ಟಿದ್ದಾನೆ.

ಸಂಧಾನ ವಿಫಲ

ಬಸಪ್ಪ ಆತ್ಮಹತ್ಯೆ ಪ್ರಕರಣ ಹಾಗೂ ಇದಕ್ಕೆ ಕಾರಣರಾದವರ ವಿರುದ್ಧ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡ, ನ್ಯಾಯವಾದಿ ಹನುಮಂತ ಯಲಸಂಗಿ ಪ್ರತಿಭಟಿಸಿದ್ದಾರೆ. ಗುತ್ತಿಗೆದಾರ ಭೂಪಾಲ, ಎಂಜಿನೀಯರ್‌ ಪ್ರಮೋದ್‌, ಚೀಫ್‌ ಎಂಜಿನೀಯರ್‌ ಹನುಮಂತರೆಡ್ಡಿ ಹಾಗೂ ಕೆಂಭಾವಿ ಪಿಎಸೈ ಸುದರ್ಶನರೆಡ್ಡಿ ವಿರುದ್ಧ ದೂರು (0042/2021) ದಾಖಲಾಗಿದೆ. ಪತ್ನಿ ರೇಣುಕಾ ನೀಡಿದ್ದಾರೆ. ಆದರೆ, ಪಿಎಸೈ ಸುದರ್ಶನರೆಡ್ಡಿ ಹೆಸರು ಕೈಬಿಡುವಂತೆ ಖಾಕಿ ಪಡೆಯ ಹಿರಿಯ ಅಧಿಕಾರಿಗಳ ದಂಡು ದಲಿತ ಮುಖಂಡರ ಮನವೊಲೈಸುವ ಯತ್ನ ನಡೆಸಿದ್ದಾರೆ. ಗುರುವಾರ ಮಧ್ಯರಾತ್ರಿವರೆಗೂ ಕಲಬುರಗಿಯಲ್ಲಿ ಈ ಪ್ರಯತ್ನ ನಡೆದಿತ್ತು ಎನ್ನಲಾಗಿದೆ. ಕೊನೆಗೆ, ಪಟ್ಟು ಬಿಡದ ಮುಖಂಡರು, ಪಿಎಸೈ ದಬ್ಬಾಳಿಕೆಯಿಂದ ಬಸಪ್ಪ ನೊಂದಿದ್ದ ಎಂದು ಸ್ಪಷ್ಟಪಡಿಸಿದರು.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!