ಆತುರದ ನಿರ್ಧಾರಗಳು ಅನಾಹುತ ತರುತ್ತವೆ. ಆದ್ದರಿಂದ ಸಮಾಜವನ್ನು ತಿದ್ದುವ ಮಾತುಗಳನ್ನು ಪೇಜಾವರ ಶ್ರೀಗಳು ಆಡಿದರೆ ತಪ್ಪಿಲ್ಲ| ಪೇಜಾವರ ಶ್ರೀ ಕಾಳಜಿಯಿಂದ ಮಾತನಾಡಿದ್ದಾರೆ, ಅವರ ಕಾಳಜಿಗೆ ಬೆಂಬಲ ಇದೆ: ಈಶಪ್ರಿಯ ಶ್ರೀ|
ಉಡುಪಿ(ಮಾ.27): ಬ್ರಾಹ್ಮಣ ಯುವತಿಯರು ವಿವಾಹದ ವಿಚಾರದಲ್ಲಿ ದಾರಿ ತಪ್ಪುತ್ತಿರುವುದನ್ನು ತಡೆಯಬೇಕು ಎಂಬ ಪೇಜಾವರ ಶ್ರೀ ಹೇಳಿಕೆಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪೇಜಾವರ ಶ್ರೀಗಳ ಹೇಳಿಕೆಗೆ ಬುದ್ಧಿಜೀವಿಗಳಿಂದ ಸಾಕಷ್ಟು ಟೀಕೆ ಕೇಳಿ ಬಂದಿವೆ, ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯ. ಆದರೆ ನಮ್ಮ ಮಕ್ಕಳು ಹಿರಿಯರ ಕಣ್ಗಾವಲಿನಿಂದ ತಪ್ಪುತ್ತಿದ್ದಾರೆ. ಅದರ ಬಗ್ಗೆ ಕಾಳಜಿಯಿಂದ ಪೇಜಾವರ ಶ್ರೀಗಳು ಮಾತನಾಡಿದ್ದಾರೆ. ಅವರ ಕಾಳಜಿಯನ್ನು ನಾವು ಬೆಂಬಲಿಸುತ್ತೇವೆ ಎಂದರು.
ಬ್ರಾಹ್ಮಣ ಹೆಣ್ಮಕ್ಕಳು ಅನ್ಯ ಜಾತಿ ವಿವಾಹವಾಗುವುದನ್ನು ತಪ್ಪಿಸಿ : ಪೇಜಾವರ ಶ್ರೀ
ಶಿಕ್ಷಣ ಮೌಲ್ಯ ಕಳೆದುಕೊಳ್ಳುತ್ತಿದೆ, ಯುವ ಜನಾಂಗ ದಾರಿ ತಪ್ಪುತ್ತಿದೆ, ಕಡೆಗಾಲದಲ್ಲಿ ತಮಗೆ ಯಾರು ಗತಿ ಇಲ್ಲವೆಂದು ಪೋಷಕರು ಪರದಾಡುತ್ತಿದ್ದಾರೆ, ಅತ್ತ ಹೆತ್ತವರನ್ನು ಬಿಟ್ಟು ಹೋದ ಮಕ್ಕಳೂ ಕೊನೆಗೆ ಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆತುರದ ನಿರ್ಧಾರಗಳು ಅನಾಹುತ ತರುತ್ತವೆ. ಆದ್ದರಿಂದ ಸಮಾಜವನ್ನು ತಿದ್ದುವ ಮಾತುಗಳನ್ನು ಪೇಜಾವರ ಶ್ರೀಗಳು ಆಡಿದರೆ ತಪ್ಪಿಲ್ಲ ಎಂದರು. ಆದರೆ, ಕೆಲವರು ತಾವು ಪ್ರಚಾರದಲ್ಲಿರಬೇಕೆಂದು ಪೇಜಾವರ ಶ್ರೀಗಳ ವಿರುದ್ಧ ಮಾತನಾಡುತ್ತಿದ್ದಾರೆ, ಅವರ ಬಗ್ಗೆ ತಮಗೆ ಸಿಟ್ಟಿಲ್ಲ, ಕನಿಕರ ಇದೆ ಎಂದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.