ಯಾದಗಿರಿ: ಡಿಸಿ, ಎಸ್ಪಿಯೆದುರೇ ಆತ್ಮಹತ್ಯೆಗೆ ರೈತ ಯತ್ನ..!

Published : Jan 06, 2024, 08:49 PM IST
ಯಾದಗಿರಿ: ಡಿಸಿ, ಎಸ್ಪಿಯೆದುರೇ ಆತ್ಮಹತ್ಯೆಗೆ ರೈತ ಯತ್ನ..!

ಸಾರಾಂಶ

ಧರಣಿ ಕೈಬಿಡುವಂತೆ ಪ್ರತಿಭಟನಾಕಾರರ ಮನವೊಲೈಸಲು ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಹಾಗೂ ಎಸ್ಪಿ ಜಿ. ಸಂಗೀತಾ ಮತ್ತಿತರ ಅಧಿಕಾರಿಗಳೆದುರೇ ಮದ್ದರಕಿ ಗ್ರಾಮದ ರೈತ ಹಣುಮಂತ ಪೂಜಾರಿ, ಕ್ರಿಮಿನಾಶಕ ಕುಡಿಯಲು ಮುಂದಾದಾಗ, ಅಲ್ಲಿದ್ದ ರೈತ ಮುಖಂಡರು ಹಾಗೂ ಪೊಲೀಸ್‌ ಅಧಿಕಾರಿಗಳು ಅದನ್ನು ತಡೆದು ಕ್ರಿಮಿನಾಶಕ ಕಸಿದುಕೊಂಡು, ಮುಂದಾಗುವ ಅವಘಡ ತಪ್ಪಿಸಿದರು.

ಯಾದಗಿರಿ(ಜ.06):  ನಾರಾಯಣಪುರ ಜಲಾಶಯದ ಮೂಲಕ ಎಡದಂಡೆ ಕಾಲುವೆಗಳಿಗೆ ನೀರು ಬಿಡುವ ಮೂಲಕ, ಮೆಣಸಿನಕಾಯಿ ಬೆಳೆಗಳನ್ನು ಸಂರಕ್ಷಿಸುವಂತೆ ಆಗ್ರಹಿಸಿ, ಜಿಲ್ಲೆಯ ಶಹಾಪುರ ಸಮೀಪದ ಭೀಮರಾಯನ ಗುಡಿಯಲ್ಲಿನ ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್ನೆಲ್‌) ಮುಖ್ಯ ಅಭಿಯಂತರರ ಕಚೇರಿಯೆದುರು ಕಳೆದ 20 ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಕೆಲಕಾಲ ಆತಂಕದ ವಾತಾವರಣಕ್ಕೆ ಸಾಕ್ಷಿಯಾಗಿತ್ತು.

ಧರಣಿ ಕೈಬಿಡುವಂತೆ ಪ್ರತಿಭಟನಾಕಾರರ ಮನವೊಲೈಸಲು ಶುಕ್ರವಾರ ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಹಾಗೂ ಎಸ್ಪಿ ಜಿ. ಸಂಗೀತಾ ಮತ್ತಿತರ ಅಧಿಕಾರಿಗಳೆದುರೇ ಮದ್ದರಕಿ ಗ್ರಾಮದ ರೈತ ಹಣುಮಂತ ಪೂಜಾರಿ, ಕ್ರಿಮಿನಾಶಕ ಕುಡಿಯಲು ಮುಂದಾದಾಗ, ಅಲ್ಲಿದ್ದ ರೈತ ಮುಖಂಡರು ಹಾಗೂ ಪೊಲೀಸ್‌ ಅಧಿಕಾರಿಗಳು ಅದನ್ನು ತಡೆದು ಕ್ರಿಮಿನಾಶಕ ಕಸಿದುಕೊಂಡು, ಮುಂದಾಗುವ ಅವಘಡ ತಪ್ಪಿಸಿದರು.

ಯಾದಗಿರಿ: ನೂರಾರು ವರ್ಷ ಹಳೆಯ ಖಬರಸ್ಥಾನ ಧ್ವಂಸ! ಹೂಳ್ಬೇಡಿ ಎಂದು ಎಚ್ಚರಿಕೆ!

ಸುಮಾರು 30 ಎಕರೆಯಷ್ಟು ಪ್ರದೇಶದಲ್ಲಿ 40 ಲಕ್ಷ ರು.ಗಳ ವೆಚ್ಚ ಮಾಡಿ ಮೆಣಸಿನಕಾಯಿ ಬೆಳೆದಿರುವ ಮದ್ದರಕಿಯ ಹನುಮಂತ, ಬೆಳೆ ಒಣಗಿದಾಗ ನಾವು ಬದುಕಿದ್ದರೇನು ಪ್ರಯೋಜನ ಎಂದು ತಾಳ್ಮೆ ಕಳೆದುಕೊಂಡು ಡಿಸಿ, ಎಸ್ಪಿಯೆದುರೇ ಕ್ರಿಮಿನಾಶಕ ಸೇವನೆಗೆ ಮುಂದಾಗಿದ್ದಾಗ, ಅಲ್ಲಿದ್ದ ರೈತ ಮುಖಂಡರು ಹಾಗೂ ಪೊಲೀಸರು ಅದನ್ನು ತಡೆದು, ಸಮಾಧಾನ ಪಡಿಸಿದರು.

ಶಹಾಪುರ ಶಾಖಾ ಕಾಲುವೆ, ಜೇವರ್ಗಿ ಶಾಖಾ ಕಾಲುವೆ ಹಾಗೂ ಮುಡಬೂಳ ಶಾಖಾ ಕಾಲುವೆಗಳ ಭಾಗದಲ್ಲಿ ಬಿತ್ತನೆ ಮಾಡಿರುವ ಮೆಣಸಿನಕಾಯಿ ಬೆಳೆ ಹೂ ಬಿಟ್ಟಿದ್ದು, ಇದಕ್ಕೆ ಇನ್ನೂ 15 ದಿನಗಳ ಕಾಲ ನೀರು ಹರಿಸಿದರೆ ಒಳ್ಳೆಯ ಫಸಲು ಬರುತ್ತದೆ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಾವಿರಾರು ರೈತರಿಂದ ರಾಜ್ಯ ಹೆದ್ದಾರಿ ತಡೆ, ಕೆಬಿಜೆಎನ್ನೆಲ್‌ ಕಚೇರಿಗೆ ಬೀಗಮುದ್ರೆ, ದನಕರುಗಳನ್ನು ಕಚೇರಿ ಆವರಣದಲ್ಲಿ ಕಟ್ಟುವುದು ಸೇರಿದಂತೆ, ರಸ್ತೆ ಬದಿಯಲ್ಲೇ ಕುಣಿ ತೋಡಿ ಅದರಲ್ಲಿ ರೈತರು ಕೂಡುವ ಮೂಲಕ ಧರಣಿಗೆ ಮತ್ತಷ್ಟೂ ಚುರುಕು ಮೂಡಿತ್ತು.

ದಿನದಿಂದ ದಿನಕ್ಕೆ ರೈತರ ಪ್ರತಿಭಟನೆ ಕಾವೇರುತ್ತಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಶರಣ ಬಸಪ್ಪಗೌಡ ದರ್ಶನಾಪುರ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಅಜೇಯಸಿಂಗ್‌ ಅವರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿದ್ದರೂ, ನೀರು ಹರಿಯದಿರುವುದು ರೈತರ ಆಕ್ರೋಶ ಹೆಚ್ಚಿಸಿದೆ.

ಈ ಮಧ್ಯೆ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಅವರು ಜಿಲ್ಲಾಧಿಕಾರಿಗಳು ಹಾಗೂ ಕೆಬಿಜೆಎನ್ನೆಲ್‌ ಅಧಿಕಾರಿಗಳ ಜೊತೆ ನಡೆಸಿದ ವೀಡಿಯೋ ಕಾನ್ಫೆರೆನ್ಸ್‌ನಲ್ಲಿ ನೀರು ಬಿಡದಿರಲು ನಿರ್ಧಾರ ತಾಳಿದ್ದು, ರೈತರ ರೊಚ್ಚಿಗೇಳಿಸಿದೆ. ಮೆಣಸಿನಕಾಯಿ ಬೆಳೆ ಬಗ್ಗೆ ತೋಟಗಾರಿಕೆ ಇಲಾಖೆ ನೀಡಿರುವ ಮಾಹಿತಿ ನೀರು ಬಿಡದಿರಲು ಸಭೆಯಲ್ಲಿನ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳದ್ದು ಅಸ್ಪಷ್ಟ ಮಾಹಿತಿ ಅನ್ನೋದು ರೈತರ ವಾದ.

ಯಾದಗಿರಿ‌: ಅನ್ನಭಾಗ್ಯ ಅಕ್ಕಿ ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!

ಕುಡಿಯುವ ನೀರು ಹಾಗೂ ಮತ್ತಿತರೆಗೆ ಹೊರತುಪಡಿಸಿ, ಈ ಬೆಳೆಗೆ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಿದೆ. ಖಾಸಗಿ ಕಾರ್ಖಾನೆಗಳಿಗೆ ಜಲಾಶಯದ ನೀರು ಬಿಡುವ ಸರ್ಕಾರ, ರೈತರ ಬೆಳೆಗಳಿಗೆ ನೀರು ಬಿಡುವಲ್ಲಿ ಹಿಂದೇಟು ಹಾಕುತ್ತಿದೆ ಎಂದು ರೈತ ಮುಖಂಡ ಮಹೇಶ ಸುಬೇದಾರ್ ಹೇಳಿದರು.

ನೀರು ಬರುತ್ತದೆಂಬ ವಿಶ್ವಾಸದ ಮೇಲೆ 40 ಲಕ್ಷ ರು.ಗಳ ಖರ್ಚು ಮಾಡಿ, 30 ಎಕರೆಯಲ್ಲಿ ಮೆಣಸಿಕಾಯಿ ಬೆಳೆದಿದ್ದೇನೆ. ಈಗ ನೋಡಿದರೆ ನೀರು ಹರಿಸದ ಕಾರಣ ಬೆಳೆ ಒಣಗುತ್ತಿದೆ ಎಂದು ಆತ್ಮಹತ್ಯೆಗೆ ಯತ್ನಿಸಿದ ರೈತ ಹನುಮಂತ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್