ದಾವಣಗೆರೆ (ಡಿ.19): ಹೊನ್ನೂರು ಕೆರೆ (Lake) ಕೋಡಿಯನ್ನು ಒಂದೂವರೆ ವರ್ಷದ ಹಿಂದೆ 3-4 ಅಡಿ ಎತ್ತರಿಸಿದ್ದರಿಂದ ನೂರಾರು ಎಕರೆ ಜಮೀನು, ತೋಟಗಳು, ನಿವೇಶನಗಳು ಜಲಾವೃತವಾಗಿ ತೊಂದರೆಯಾಗುತ್ತಿದೆ. ಇದರಿಂದ ನೂರಾರು ರೈತರು (Farmers) ಜೀವನ ನಡೆಸುವುದೇ ಕಷ್ಟವಾಗಿದ್ದು, ವಿಷ ಕುಡಿದು ಸಾಯುವ ಪರಿಸ್ಥಿತಿ ಬಂದೊಂದಗಿದೆ ಎಂದು ರೈತ ರೇವಣಸಿದ್ದಪ್ಪ ದಳವಾಯಿ ಅಳಲು ತೋಡಿಕೊಂಡರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹೊನ್ನೂರು ಕೆರೆಯ (Lake) ಕೋಡಿಯನ್ನು 3-4 ಅಡಿ ಎತ್ತರಿಸಿದ್ದರಿಂದ ಕೆರೆ ನೀರು (water) ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿ, ಕೆರೆ ಜಾಗ ಅಲ್ಲದ ನೂರಾರು ಎಕರೆ ಜಮೀನು (Farm Land) ಮುಳುಗಡೆಯಾಗಿ ಬೆಳೆಗಳೆಲ್ಲಾ ಹಾಳಾಗುತ್ತಿದ್ದು, ರೈತ ಕುಟುಂಬಗಳು ತೀವ್ರ ಆರ್ಥಿಕ ನಷ್ಟಕ್ಕೆ ತುತ್ತಾಗಿವೆ ಎಂದರು.
ನಾಲ್ಕೂವರೆ ದಶಕದ ಹಿಂದೆ ಹೊನ್ನೂರು ಕೆರೆ ತುಂಬಿತ್ತು. ಆಗ ಜಮೀನುಗಳಲ್ಲಿ ನೀರು ನಿಂತಿರಲಿಲ್ಲ. ಕಡಿಮೆ ಆಳ ಇದ್ದ ಕಾರಣ ಕೋಡಿ ಬಿದ್ದಾಗ 15-20 ದಿನದೊಳಗೆ ನೀರು ಹಿಂದೆ ಹೋಗುತ್ತಿತ್ತು. ಆದರೆ, ಕಳೆದ 2 ತಿಂಗಳಿನಿಂದ ಸುರಿದ ಭಾರಿ ಮಳೆಯಿಂದಾಗಿ ಕೊಗ್ಗನೂರು ಕೆರೆ, ಆನಗೋಡು ಕೆರೆ, ಸಿದ್ದನೂರು ಕೆರೆಗಳು ಕೋಡಿ ಬಿದ್ದಿದ್ದರಿಂದ ಎಲ್ಲ ಕೆರೆಗಳ ನೀರು ಹೊನ್ನೂರು ಕೆರೆಗೆ ಬಂದು ಸೇರುತ್ತಿದೆ ಎಂದು ತಿಳಿಸಿದರು.
ಕೆರೆಯ (Lake) ಮುಂಭಾಗದಲ್ಲಿ ದಕ್ಷಿಣ ದಿಕ್ಕಿನ ಆನಗೋಡು, ನೇರ್ಲಿಗೆ, ಬುಳ್ಳಾಪುರ, ಕರಿ ಲಕ್ಕೇನ ಹಳ್ಳಿ, ಮಲಶೆಟ್ಟಿ ಹಳ್ಳಿ ಗ್ರಾಮಗಳಲ್ಲಿ ಬೆಳೆದಿರುವ ಭತ್ತ, ಅಡಕೆ, ತೆಂಗು, ತರಕಾರಿ ಬೆಳೆಗಳು ನೀರಿನಲ್ಲಿ ನಿಂತು, ಕೊಳೆತು ಹೋಗಿ ಬೆಳೆಗಾರ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಕೆರೆ ಏರಿಯ ಸಮೀಪದ ಎರಡೂ ತೂಬು ಇದ್ದು, ಅನೇಕ ದಶಕಗಳಿಂದ ಇದ್ದಂತಹ ತೂಬು ಕಲ್ಲು, ಸಿಮೆಂಟ್ ಕಾಂಕ್ರಿಟ್ ಬಳಸಿ, ನೀರು ಹೊರ ಹೋಗದಂತೆ ಬಂದ್ ಮಾಡಲಾಗಿದೆ. ಇದರಿಂದ ಕೆರೆ ಸಮೀಪದ ತೋಟ, ಹೊಲಗಳು ಜಲಾವೃತವಾಗಿ ಬೆಳೆಗಳು ಹಾಳಾಗುತ್ತಿವೆ ಎಂದು ದೂರಿದರು.
ಸಂಬಂಧಿಸಿದವರಿಗೆ ನಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಸದರು (MP), ಮಾಯಕೊಂಡ ಶಾಸಕರು (MLA) , ಜಿಲ್ಲಾಧಿಕಾರಿ, ನೀರಾವರಿ ಇಲಾಖೆ ಅಧಿಕಾರಿಗಳ (Officers) ಗಮನಕ್ಕೆ ತಂದರೂ ಯಾರೊಬ್ಬರೂ ಗಂಭೀರವಾಗಿ ಇದನ್ನು ಪರಿಗಣಿಸಿಲ್ಲ. ಬೇರೆಯವರಿಗೆ ಅನುಕೂಲ ಮಾಡಲು ನಮ್ಮ ಕುತ್ತಿಗೆ ಸಂಕಷ್ಟ ತಂದಿಡಬೇಡಿ. ಈಗ ಎತ್ತರಿಸಲಾಗಿರುವ ಕೋಡಿಯನ್ನು ಮುಂಚೆ ಕಡಿಮೆ ಮಾಡಬೇಕು. ಕೆರೆ ನೀರಿನಿಂದಾಗಿ ತೋಟ, ಹೊಲಗಳು ಆವೃತ ವಾಗದಂತೆ ತಡೆಯಬೇಕು. ಮಲ್ಲ ಶೆಟ್ಟಿ ಹಳ್ಳಿ ಹಾಗೂ ನರಸೀಪುರ ಗ್ರಾಮದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಇದನ್ನು ಅಧಿಕಾರಿ, ಜನ ಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಲಿ ಎಂದರು.
ಗ್ರಾಮದ ರೈತ ಮಹಿಳೆ ರತ್ನಮ್ಮ ಮಾತನಾಡಿ, ಕಳೆದ 3-4 ತಿಂಗಳಿನಿಂದ ಜಮೀನಿನಲ್ಲಿ ನೀರು ನಿಂತು, ನಮಗೆ ಬದುಕೇ ಬೇಡ ಎನಿಸಿದೆ. ಮಕ್ಕಳು (children) ಸೇರಿದಂತೆ ಕುಟುಂಬಸ್ಥರಿಗೆಲ್ಲಾ ವಿಷವುಣಿಸಿ, ಸಾಯಬೇಕೆನಿಸುತ್ತಿದೆ. ಸಿರಿಗೆರೆ ಶ್ರೀಗಳು ಬೇರೆಯವರಿಗೆ ಅನುಕೂಲ ಮಾಡಿಕೊಟ್ಟು, ನಮ್ಮನ್ನು ಸಂಕಷ್ಟಕ್ಕೆ ನೂಕಿದ್ದಾರೆ ಎಂದು ಕಣ್ಣೀರಿಟ್ಟರು.
ಗ್ರಾಮದ ರೈತರಾದ ಜಿ.ಎಂ.ಗಿರೀಶ, ರತ್ನಮ್ಮ, ಎಂ.ಎಸ್.ಬಸವರಾಜಪ್ಪ, ಡೋಲಿ ಚಂದ್ರು, ಹರೀಶ ಬಸಾಪುರ, ಬಸವರಾಜಪ್ಪ, ರಾಘವೇಂದ್ರ, ಸಂಪತ್ ಇದ್ದರು.