ಗುಹೆಯಲ್ಲಿ ಆದಿವಾಸಿಗಳಂತೆ ಜೀವನ ನಡೆಸುತ್ತಿದ್ದ ಮೂಡಿಗೆರೆ ತಾಲೂಕಿನ ಕಲ್ಲಕ್ಕಿಯ ಕುಟುಂಬಕ್ಕೆ ನಿವೇಶನದ ಹಕ್ಕುಪತ್ರವನ್ನು ಜಿಲ್ಲಾಡಳಿತ ವಿತರಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಮೇ.16): ಗುಹೆಯಲ್ಲಿ ಆದಿವಾಸಿಗಳಂತೆ ಜೀವನ ನಡೆಸುತ್ತಿದ್ದ ಮೂಡಿಗೆರೆ ತಾಲೂಕಿನ ಕಲ್ಲಕ್ಕಿಯ ಕುಟುಂಬಕ್ಕೆ ನಿವೇಶನದ ಹಕ್ಕುಪತ್ರವನ್ನು ಶುಕ್ರವಾರ ವಿತರಣೆ ಮಾಡಲಾಗಿದೆ.
ಅನಂತ ಎಂಬುವರು ಪತ್ನಿ ಅನ್ನಪೂರ್ಣ ಹಾಗೂ ಪುತ್ರಿಯೊಂದಿಗೆ ಗುಹೆಯಲ್ಲಿ ವಾಸವಾಗಿದ್ದರು. ಇದು, ದೊಡ್ಡ ಸುದ್ದಿಯಾಗಿತ್ತು. ಕೂಡಲೇ ಜಿಲ್ಲಾಡಳಿತ ಸ್ಪಂದಿಸಿತ್ತು. ಬರೀ ಇಷ್ಟೆ ಅಲ್ಲ ಸ್ವತಃ ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದ್ದರು. ಸದ್ಯ ಈ ಕುಟುಂಬ ಹೊರನಾಡಿನಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ ಆಶ್ರಯ ಪಡೆದುಕೊಂಡಿದೆ. ಇದೇ ಆಶ್ರಮ ಶಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಅನಂತ ಅವರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಸ್ವಂತ ಮನೆ:
ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಮಾವಿನಕೆರೆ ಗ್ರಾಮದ ಸರ್ವೆ ನಂಬರ್ 85ರಲ್ಲಿ 10 ಎಕರೆ ಸರ್ಕಾರಿ ಜಮೀನು ಇದ್ದು, ಇಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಲು ಈ ಜಾಗವನ್ನು ಕಾಯ್ದಿರಿಸಲಾಗಿದೆ. ಇಲ್ಲಿ 398 ನಿವೇಶನಗಳನ್ನು ರಚನೆ ಮಾಡಲಾಗಿದ್ದು, ಈಗಾಗಲೇ 168 ಮಂದಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಇಲ್ಲೇ ಅನಂತ ಅವರಿಗೆ ನಿವೇಶನವನ್ನು ಮಂಜೂರು ಮಾಡಲಾಗಿದೆ.
ಚಿಕ್ಕಮಗಳೂರು: ಗುಹೆಯಲ್ಲಿ ವಾಸ ಮಾಡ್ತಿದ್ದ ಕುಟುಂಬ ನಾಡಿಗೆ
ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅನಂತ ಪತ್ನಿ ಅನ್ನಪೂರ್ಣ ಅವರ ಹೆಸರಿಗೆ ಇಂದಿರಾ ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ನಿವೇಶನವನ್ನು ಮಂಜೂರು ಮಾಡಿ, ಹಕ್ಕುಪತ್ರವನ್ನು ಸಹ ವಿತರಣೆ ಮಾಡಲಾಗಿದೆ. ಮನೆ ನಿರ್ಮಾಣ ಮಾಡಿಕೊಡಲು ತಾಲೂಕು ಆಡಳಿತ ಪ್ಲಾನ್ ಮಾಡಿಕೊಂಡಿದೆ.
ಆಧಾರ್‌ಕಾರ್ಡ್ ಮಾಡಿಕೊಡಲಾಗಿದ್ದು, ರೇಷನ್‌ಕಾರ್ಡ್ ಕೊಟ್ಟು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಸಹ ವಿತರಣೆ ಮಾಡಲಾಗಿದೆ. ಒಟ್ಟಾರೆ, ಗುಹೆಯಲ್ಲಿ ಅಲೆಮಾರಿಯಂತೆ ಬದುಕುತ್ತಿದ್ದ ಅನಂತ ಕುಟುಂಬ ಜನರ ನಡುವೆ ಜೀವನ ಮಾಡುವ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ.
ಈ ಕುಟುಂಬ ಎಲ್ಲರಂತೆ ಜೀವನ ನಡೆಸಬೇಕೆಂಬ ಉದ್ದೇಶದಿಂದ ಅವರನ್ನು ಗುಹೆಯಿಂದ ಹೊರಗೆ ಕರೆದುಕೊಂಡು ಬಂದು ತಾತ್ಕಾಲಿಕವಾಗಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಈಗ ಸೈಟ್ ಹಾಗೂ ಹಕ್ಕುಪತ್ರವನ್ನು ನೀಡಲಾಗಿದ್ದು, ಮನೆಯನ್ನು ಸಹ ಮುಂದಿನ ದಿನಗಳಲ್ಲಿ ಮಂಜೂರು ಮಾಡಲಾಗುವುದು. ಅನಂತ ಅವರಿಗೆ ಇಬ್ಬರು ಮಕ್ಕಳಿದ್ದು, ಅವರಿಗೆ ಹೊರನಾಡಿನಲ್ಲಿರುವ ಆಶ್ರಮ ಶಾಲೆಯಲ್ಲಿ ಶಿಕ್ಷಣ ನೀಡಲಾಗುವುದು - ಡಾ.ಎಚ್.ಎಲ್.ನಾಗರಾಜ್, ಉಪ ವಿಭಾಗಾಧಿಕಾರಿ ಚಿಕ್ಕಮಗಳೂರು