
ಹಾವೇರಿ(ಅ.07): ನಕಲಿ ಮತದಾರರ ಗುರುತಿನ ಚೀಟಿ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ನಗರದ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ದ ಮೇಲೆ ಮಂಗಳವಾರ ಅಧಿಕಾರಿಗಳ ತಂಡ ದಾಳಿ ನಡೆಸಿ, ಕೆಲ ದಾಖಲೆ, ಯಂತ್ರೋಪಕರಣ, ಕಂಪ್ಯೂಟರ್ ಹಾರ್ಡ್‌ಡಿಸ್ಕ್ ವಶಪಡಿಸಿಕೊಂಡಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಹುಕ್ಕೇರಿ ಮಠದ ಎದುರಿನ ಕಾಂಪ್ಲೆಕ್ಸ್‌ನಲ್ಲಿರುವ ಸೇವಾ ಸಿಂಧು ಸಾಮಾನ್ಯ ಸೇವಾ ಕೇಂದ್ರದಲ್ಲಿ ಮತದಾರರ ಗುರುತಿನ ಚೀಟಿಯನ್ನು ನಕಲಿಯಾಗಿ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ ಅವರು ತಹಸೀಲ್ದಾರ್ ಶಂಕರ, ಉಪ ವಿಭಾಗಾಧಿಕಾರಿ ಡಾ. ದಿಲೀಷ್ ಶಶಿ ಹಾಗೂ ಸಿಪಿಐ ಸಂತೋಷ ಪವಾರ ಅವರೊಂದಿಗೆ ದಾಳಿ ನಡೆಸಿ ಕೆಲ ದಾಖಲೆ, ಯಂತ್ರೋಪಕರಣ ವಶಕ್ಕೆ ಪಡೆದಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಮಾಹಿತಿ ನೀಡಿ, ಇದರ ಕುರಿತು ಸಮಗ್ರ ತನಿಖೆ ನಡೆದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ. ಹೆಚ್ಚಿನ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಲಾಗಿದೆ. ನಕಲಿ ಐಡಿ ಕಾರ್ಡ್ ಪತ್ತೆ ಕುರಿತಂತೆ ಚುನಾವಣಾ ಆಯೋಗಕ್ಕೆ ವರದಿ ಮಾಡಲಾಗುವುದು, ಅಂಗಡಿಯವ ನೀಡಿದ ಮಾಹಿತಿಯಂತೆ ಹರಿಯಾಣ ಮೂಲದವರಿಂದ ಖರೀದಿಸಿದ ಸಾಫ್ಟ್‌ವೇರ್‌ನಿಂದ ಮುದ್ರಣ ಮಾಡುತ್ತಿರುವುದಾಗಿ ತಿಳಿಸಿದ್ದಾನೆ ಎಂದರು.
ದಾಳಿ ಕುರಿತು ವಿವರ ನೀಡಿದ ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ನಕಲಿ ಐಡಿ ಕಾರ್ಡ್ ಸೃಷ್ಟಿಸಿದ ಕುರಿತಂತೆ ನನ್ನ ಕಚೇರಿಗೆ ದಾಖಲೆ ಸಹಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ರಚಿಸಲಾಯಿತು. ತಮ್ಮ ಕಾರು ಚಾಲಕ ಅಭಿಷೇಕ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ವಿನಾಯಕ ಮಳವಳ್ಳಿ ಅವರನ್ನು ಮಫ್ತಿಯಲ್ಲಿ ಕಾರ್ಡ್ ಮಾಡಿಸಲು ಕಳುಹಿಸಲಾಯಿತು. ಕಾರು ಚಾಲಕ ಹಣ ನೀಡಿ ನಕಲಿ ಐಡಿ ಕಾರ್ಡ್ ಮಾಡಿಸಿಕೊಂಡು ಬಂದ ತಕ್ಷಣವೇ ದಾಳಿ ಮಾಡಲಾಯಿತು ಎಂದು ವಿವರಿಸಿದರು.
ನಾಮಪತ್ರಕ್ಕೆ 10 ಸೂಚಕರ ಸಹಿ ತಾನೇ ಮಾಡಿದ ಅಭ್ಯರ್ಥಿ, ಕೇಸ್ ಬುಕ್..!
ಅಂಗಡಿಯಲ್ಲಿ ಒಟ್ಟಾರೆ ಮೂರು ನಕಲಿ ಮತದಾರರ ಐಡಿ ಕಾರ್ಡ್ ದೊರೆತಿದೆ. ಇದಲ್ಲದೇ ವಿವಿಧ ಯೋಜನೆಗಳ ಕಾರ್ಡ್‌ಗಳು ಸಹ ಸಿಕ್ಕಿವೆ. ಸೇವಾ ಕೇಂದ್ರದ ಜೀವನ್ ನರಸಿಂಹ ರಜಪೂತ್ ಹಾಗೂ ನವೀನ್ ಬಸವರಾಜ ಉಪ್ಪಾರ ಎಂಬುವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಒಂದು ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್‌ಡಿಸ್ಕ್, ಪ್ರಿಂಟರ್, ಒಂದು ಲ್ಯಾಮಿನೇಷನ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಕೆಲ ದಾಖಲೆ, ಬ್ಯಾಂಕ್ ಪಾಸ್‌ಬುಕ್, ಬೇರೆ ಬೇರೆ ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ತನಿಖೆ ಜತೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಅಧಿಕಾರಿಗಳ ನೇತೃತ್ವದ ತಾಂತ್ರಿಕ ತಂಡ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಸಿಎಸ್‌ಸಿ ಕೇಂದ್ರದ ಜೀವನ್ ನರಸಿಂಹ ರಜಪೂತ ಮಾತನಾಡಿ, ಹರಿಯಾಣ ಮೂಲದ ಪ್ರಿಂಟ್ ಪೋರ್ಟಲ್ ಎಕ್ಸ್ ವೈಝಡ್ ಡಾಟ್ ಕಾಂ ಎಂಬ ಸಾಫ್ಟ್‌ವೇರ್‌ನ್ನು ಆನ್‌ಲೈನ್ ಮೂಲಕ ಖರೀದಿಸಿದ್ದು ಕಾರ್ಡ್ ಮುದ್ರಣ ಮಾಡಿದ್ದೇನೆ. ಯಾರಿಗೂ ಕಾರ್ಡ್ ಕೊಟ್ಟಿಲ್ಲ ಎಂದು ತಿಳಿಸಿದ್ದಾನೆ. ಈ ವೇಳೆ ಉಪವಿಭಾಗಾಧಿಕಾರಿ ಡಾ. ದಿಲೀಷ್ ಶಶಿ, ತಹಸೀಲ್ದಾರ್ ಶಂಕರ, ಸಿಪಿಐ ಸಂತೋಷ ಪವಾರ, ಪ್ರಭಾವತಿ ಇತರರು ಇದ್ದರು.