ಬಳ್ಳಾರಿ ಜಿಲ್ಲೆಯಲ್ಲಿ ಹಬ್ಬಿದ ನಕಲಿ ಕ್ರಿಮಿನಾಶಕ ಜಾಲ? ಆತಂಕದಲ್ಲಿ ಅನ್ನದಾತ

By Kannadaprabha News  |  First Published Jan 22, 2020, 9:46 AM IST

ನಕಲಿ ಕ್ರಿಮಿನಾಶಕ ಮಾರಾಟ ಜಾಲ| ಈಗಾ​ಗಲೇ ಒಬ್ಬರ ವಿರುದ್ಧ ಪ್ರಕ​ರಣ ದಾಖ​ಲು| ದುಬಾರಿ ಹಣ ನೀಡಿ ಕ್ರಿಮಿನಾಶಕ ಖರೀದಿಸುವ ರೈತರಲ್ಲಿ ಭೀತಿ|ನಕಲಿ ಕ್ರಿಮಿನಾಶಕ ಮಾರಾಟದಿಂದ ರೈತರು ನಷ್ಟಕ್ಕೆ ಗುರಿಯಾಗುತ್ತಿದ್ದು, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ|


ಬಳ್ಳಾರಿ[ಜ.22]: ಜಿಲ್ಲೆಯಲ್ಲಿ ನಕಲಿ ಕ್ರಿಮಿನಾಶಕ ಮಾರಾಟ ಜಾಲ ವ್ಯಾಪಿಸಿಕೊಂಡಿರುವ ಗುಮಾನಿಗಳು ಶುರುವಾಗಿದ್ದು ರೈತರು ಆತಂಕಕ್ಕೀಡಾಗಿದ್ದಾರೆ. ನಗರದಲ್ಲಿ ನಕಲಿ ಕ್ರಿಮಿನಾಶಕ ಮಾರಾಟಕ್ಕೆ ಸಂಬಂಧಿಸಿದಂತೆ ಇಲ್ಲಿನ ಗಾಂಧಿನಗರ ಠಾಣೆಯಲ್ಲಿ ವಿ. ನೆಟ್ಟೆಕಲ್ಲಪ್ಪ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಿಲ್ಲೆಯ ಎಲ್ಲೆಡೆ ಇಂತಹ ಅನೇಕರು ನಕಲಿ ಕ್ರಿಮಿನಾಶಕ ಮಾರಾಟದಲ್ಲಿ ನಿರತರಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

ಇದು ದುಬಾರಿ ಹಣ ನೀಡಿ ಕ್ರಿಮಿನಾಶಕ ಖರೀದಿಸುವ ರೈತರಲ್ಲಿ ಭೀತಿ ಮೂಡಿಸಿದೆ. ವಿ. ನೆಟ್ಟಕಲ್ಲಪ್ಪ ಎಂಬುವರು ಕೋರ್ಟಿವಾ ಅಗ್ರಿಸೈನ್ಸ್‌ ಕಂಪನಿಗೆ ಸೇರಿದ ಡೆಲಿಗೇಟ್‌ ಎಂಬ ನಕಲಿ ಕ್ರಿಮಿನಾಶಕವನ್ನು ಮಾರಾಟ ಮಾಡಲು ಮುಂದಾದಾಗ ನಗರದ ಎಸ್ಪಿ ವೃತ್ತದಲ್ಲಿ ಇದೇ ಕಂಪನಿಯ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕರು ತಮ್ಮ ಸಿಬ್ಬಂದಿಯೊಂದಿಗೆ ಹಿಡಿದು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಇದೊಂದು ಪ್ರಕರಣ ಮಾತ್ರ ಬಯಲಿಗೆ ಬಂದಿದೆ. ಆದರೆ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕಳಪೆಯ ಕ್ರಿಮಿನಾಶಕಗಳನ್ನು ಮಾರಾಟ ಮಾಡುವ ದೊಡ್ಡ ಜಾಲವೇ ಕೆಲಸ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದು, ಬೇರೆ ರಾಜ್ಯಗಳಿಂದ ಬರುವ ಕಳಪೆ ಕ್ರಿಮಿನಾಶಕಗಳನ್ನು ರೈತರಿಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಕೃಷಿ ಇಲಾಖೆ ಮೂಲಕ ರೈತರಿಗೆ ಸಾಕಷ್ಟುನಕಲಿ ಜನರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದ್ದಾಗ್ಯೂ ನಕಲಿಗಳ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ.

Tap to resize

Latest Videos

ಯಾರನ್ನು ನಂಬೋದು?

ನಕಲಿ ಕ್ರಿಮಿನಾಶಕ ಮಾರಾಟದಿಂದ ರೈತರು ನಷ್ಟಕ್ಕೆ ಗುರಿಯಾಗುತ್ತಿದ್ದು, ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದರ ನಿಯಂತ್ರಣವಾಗಬೇಕು. ಕ್ರಿಮಿನಾಶಕ ಹಾಗೂ ಬಿತ್ತನೆಬೀಜಗಳು ಕಳಪೆಯಾಗುತ್ತಿವೆ. ಈ ಸಂಬಂಧ ದೂರುಗಳು ಕೃಷಿ ಇಲಾಖೆಗೆ ಬಂದಿವೆ. ಆದರೆ, ಯಾರ ಮೇಲೂ ಕಠಿಣ ಕ್ರಮವಾಗಳಾಗಿಲ್ಲ. ಹೀಗಾಗಿ ನಕಲಿ ವ್ಯಾಪಾರಿಗಳ ಹಾವಳಿ ಮುಂದುವರಿದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಕಲಿ ಹಾಗೂ ಅಸಲಿಗೆ ಯಾವುದೇ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಹೀಗಾಗಿ ಕೂಡಲೇ ಅದನ್ನು ಕಂಡು ಹಿಡಿಯುವುದು ಕಷ್ಟವಾಗಿದೆ. ಅಷ್ಟರ ಮಟ್ಟಿಗೆ ನಕಲಿ ವ್ಯಾಪಾರಿಗಳು ಕಾರ್ಯನಿರ್ವಹಿಸುತ್ತಿರುವುದು ಕೃಷಿ ಇಲಾಖೆಗೆ ನಕಲಿಗಳನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದ ಯಾರನ್ನು ನಂಬೋದು? ಯಾರನ್ನು ಬಿಡೋದು? ಎಂಬ ಗೊಂದಲ್ಲಿದ್ದಾರೆ ರೈತರು. ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಾಡುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಆದರೆ, ಅಂಗಡಿಗಳಲ್ಲಿ ಈ ರೀತಿಯ ಕಳಪೆ ಬೀಜ ಹಾಗೂ ಕ್ರಿಮಿನಾಶಕಗಳು ಕಂಡು ಬಂದಿಲ್ಲ. ಕಳಪೆ ಮಾರಾಟವಿದ್ದರೂ ಅವರು ಹೊರಗಡೆ ತಮ್ಮ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದಾರೆ. ರೈತರು ಕಡಿಮೆ ಮೊತ್ತದಲ್ಲಿ ಕ್ರಿಮಿನಾಶಕ ಸಿಗುತ್ತದೆ ಎಂಬ ಕಾರಣಕ್ಕೆ ಖರೀದಿಸಿ ಮೋಸ ಹೋಗುತ್ತಿದ್ದಾರೆ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ.

ರಸಗೊಬ್ಬರ-ಹತ್ತಿ ಬೀಜವೂ ಕಳಪೆ

ಕ್ರಿಮಿನಾಶಕ ಜೊತೆಗೆ ರಸಗೊಬ್ಬರ ಹಾಗೂ ಹತ್ತಿಬೀಜವೂ ಸಹ ಕಳಪೆಯಾಗಿವೆ ಎಂಬ ದೂರುಗಳು ಕೃಷಿ ಇಲಾಖೆಗೆ ಬಂದಿವೆ. ಈಗಾಗಲೇ ಮೂರು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಏತನ್ಮಧ್ಯೆ, ರೈತರಿಗೆ ಸಾಲ ರೂಪದಲ್ಲಿ ಬಿತ್ತನೆಬೀಜ, ರಸಗೊಬ್ಬರ ನೀಡುವ ಕೆಲವು ಮಾರಾಟಗಾರರು ದುಬಾರಿ ಬಡ್ಡಿ ಹಾಕಿ ವಸೂಲಿ ಮಾಡುತ್ತಾರೆ ಎಂಬ ದೂರುಗಳು ಹೊಸದಲ್ಲ. ಆದರೆ, ಇವರ ವಿರುದ್ಧ ಕ್ರಮಗಳಾಗಿರುವ ಉದಾಹರಣೆಗಳು ಕಂಡು ಬರುವುದಿಲ್ಲ ಎಂದು ರೈತ ಸಂಘದ ಮುಖಂಡರು ಆರೋಪಿಸುತ್ತಾರೆ.

ಈ ಬಗ್ಗೆ ಮಾತನಾಡಿದ ಬಳ್ಳಾರಿ ಕರ್ನಾಟಕ ಪ್ರಾಂತ ರೈತ ಸಂಘದ  ಜಿಲ್ಲಾಧ್ಯಕ್ಷ ವಿ.ಎಸ್‌. ಶಿವಶಂಕರ್‌ ಅವರು, ಕಳಪೆ ಬೀಜ, ರಸಗೊಬ್ಬರದಿಂದ ರೈತರು ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಇಳುವರಿ ಕಡಿಮೆಯಾಗಿ ರೈತರು ಆತ್ಮಹತ್ಯೆಯ ದಾರಿ ಹಿಡಿಯುವಂತಾಗಿದೆ. ಕಳಪೆ ಹತ್ತಿಬೀಜ, ರಸಗೊಬ್ಬರದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಕಳಪೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮಾರಾಟ ನಿರಂತರ ನಡೆಯುತ್ತಿದೆ ಎಂದು ತಿಳಿಸಿದ್ಧಾರೆ. 

click me!