ಸಿದ್ದರಾಮಯ್ಯ ವಿರುದ್ಧ ಪ್ರತಿಭಟಿಸಿದ ಮೂವರು ಕಾಂಗ್ರೆಸಿಗರ ಅಮಾನತು

By Kannadaprabha NewsFirst Published Jan 22, 2020, 9:29 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿದ ಮೂವರು ಕಾಂಗ್ರೆಸಿಗರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಹಲವು ಆಕ್ಷೇಪಗಳು ವ್ಯಕ್ತವಾಗಿವೆ.

ಬೆಂಗಳೂರು  [ಜ.22]:  ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಮೂವರು ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತು ಮಾಡಲಾಗಿದೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆಂಚೇಗೌಡ, ಕಾರ್ಯದರ್ಶಿಗಳಾದ ಬಲರಾಂ ಹಾಗೂ ಆರ್‌. ಮಂಜುನಾಥ್‌ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಮಂಗಳವಾರ ಆದೇಶಿಸಲಾಗಿದೆ. ಬಲರಾಂ ನೇತೃತ್ವದಲ್ಲಿ ಸೋಮವಾರ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆಯೊಂದನ್ನು ನಡೆಸಲಾಗಿತ್ತು. 

ರಾಜ್ಯದಲ್ಲಿ ತೀವ್ರವಾದ ಕೈ ಕಾರ್ಯಾಧ್ಯಕ್ಷ ಕಲಹ..

ಕಾರ್ಯಾಧ್ಯಕ್ಷರ ನೇಮಕದ ನೆಪದಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೇಮಕಕ್ಕೆ ಸಿದ್ದರಾಮಯ್ಯ ಅಡ್ಡಗಾಲು ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು. ಈ ಪ್ರತಿಭಟನೆಯ ಬೆನ್ನಲ್ಲೇ ಇದರ ನೇತೃತ್ವ ವಹಿಸಿದ್ದ ಕೆಂಚೇಗೌಡ, ಬಲರಾಂ ಹಾಗೂ ಮಂಜುನಾಥ್‌ ಅವರನ್ನು ಪಕ್ಷದಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಭಿನ್ನಮತ ಸ್ಫೋಟ: ಸಿದ್ದರಾಮಯ್ಯ ನಡೆಗೆ ಸಿಡಿದೆದ್ದ ಮೂಲ ಕಾಂಗ್ರೆಸ್ಸಿಗರು...

ಅಮಾನತಿಗೆ ಆಕ್ಷೇಪ:  ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಪಕ್ಷದ ವಿರುದ್ಧ ಹೇಳಿಕೆ ನೀಡಿದವರ ವಿರುದ್ಧವೂ ಇಂತಹುದೇ ಕ್ರಮ ಏಕೆ ಕೈಗೊಳ್ಳುತ್ತಿಲ್ಲ ಎಂದು ಪಕ್ಷದ ಕೆಲ ಹಿರಿಯ ನಾಯಕರು ಕೆಪಿಸಿಸಿ ನಾಯಕತ್ವವನ್ನು ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ. ಪಕ್ಷದ ವಿರುದ್ಧ ಹೇಳಿಕೆ ನೀಡಿದ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ವಿರುದ್ಧ ಪ್ರತಿಭಟನೆ ನಡೆಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ, ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುವವರ ಅಥವಾ ಅವರನ್ನು ವಿರೋಧಿಸುವವರ ವಿರುದ್ಧ ಮಾತ್ರ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಇದು ಸರಿಯಲ್ಲ ಎಂದು ಅವರು ಕೆಪಿಸಿಸಿ ನಾಯಕತ್ವವನ್ನು ದೂರಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!