Mysuru: ಹೆಚ್ಚಿದ ಅಂಗವಿಕಲರ ನಕಲಿ ಕಾರ್ಡ್‌ ಹಾವಳಿ

By Kannadaprabha News  |  First Published Dec 23, 2022, 5:49 AM IST

ಅಂಗವಿಕಲರ ನಕಲಿ ಕಾರ್ಡ್‌ ಮಾಡಿಕೊಂಡು ದೈಹಿಕವಾಗಿ ಸದೃಢರಾಗಿರುವವರೂ ಸರ್ಕಾರದ ಮಾಸಾಶನ ಪಡೆಯುತ್ತಿದ್ದು, ಇದಕ್ಕೆ ನಮ್ಮ ಇಲಾಖೆ ಅಧಿಕಾರಿಗಳ ಕುಮ್ಮಕ್ಕೂ ಇದೆ ಎಂದು ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದರು.


  ಮೈಸೂರು ( ಡಿ. 23):  ಅಂಗವಿಕಲರ ನಕಲಿ ಕಾರ್ಡ್‌ ಮಾಡಿಕೊಂಡು ದೈಹಿಕವಾಗಿ ಸದೃಢರಾಗಿರುವವರೂ ಸರ್ಕಾರದ ಮಾಸಾಶನ ಪಡೆಯುತ್ತಿದ್ದು, ಇದಕ್ಕೆ ನಮ್ಮ ಇಲಾಖೆ ಅಧಿಕಾರಿಗಳ ಕುಮ್ಮಕ್ಕೂ ಇದೆ ಎಂದು ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದರು.

ಜಿಪಂ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಪಡೆಯುವಲ್ಲಿ ನಡೆಯುತ್ತಿರುವ ಅಕ್ರಮವನ್ನು ತೆರೆದಿಟ್ಟರು.

Latest Videos

undefined

ಎಚ್‌.ಡಿ. ಕೋಟೆ ತಾಲೂಕಿನ ಅಂತರಸಂತೆ ಹೋಬಳಿ ವ್ಯಾಪ್ತಿಯ ವೊಂದರಲ್ಲಿ 190 ಮಂದಿ ಅಕ್ರಮವಾಗಿ ಅಂಗವಿಕಲರ ಕಾರ್ಡ್‌ (Card)  ಹೊಂದಿದ್ದಾರೆ. ಇದನ್ನು ಪ್ರಶ್ನಿಸಿದರೆ ನಿನ್ನ ಕೆಲಸವೇನಿದೆ ಅದನ್ನು ಮಾಡು ಎಂದು ನಮ್ಮ ವಿರುದ್ಧವೇ ತಿರುಗಿ ಬೀಳುತ್ತಾರೆ. ಈ ಬಗ್ಗೆ ಪ್ರಶ್ನಿಸಿದ ತಾಲೂಕು ಕಚೇರಿಯ ಅಧಿಕಾರಿ ಒಬ್ಬರ ಮೇಲೆ ಲೋಕಾಯುಕ್ತಕ್ಕೆ ನಿಮ್ಮ ವಿರುದ್ಧವೇ ದೂರು ನೀಡುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ತಾಲೂಕು ಆಸ್ಪತ್ರೆ ಮತ್ತು ವಾಕ್‌ ಮತ್ತು ಶ್ರವಣ ಸಂಸ್ಥೆಯಿಂದ ಯಾವುದೇ ಅಂಗವಿಫಲ್ಯ ಇಲ್ಲದ ವ್ಯಕ್ತಿಗಳೂ ಕೂಡ ಕಾರ್ಡ್‌ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ (DC)  ಡಾ.ಕೆ.ವಿ. ರಾಜೇಂದ್ರ, ನೀವೆಲ್ಲಾ ಅಧಿಕಾರಿಗಳು ಏನು ಮಾಡುತ್ತಿದ್ದೀರಿ?. ನನಗೆ ದಾಖಲೆ ಕೊಡಿ, ನಾನು ಕೂಡಲೇ ತನಿಖೆಗೆ ಒಳಪಡಿಸುತ್ತೇನೆ. ಬರಿ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ. ದಾಖಲೆ ಬಹಳ ಮುಖ್ಯ. ಒಂದು ವೇಳೆ ನೀವು ಹೇಳಿದ್ದು ಸತ್ಯವಾದರೆ ಅಂಗವಿಕಲರ ಪ್ರಮಾಣ ಪತ್ರ ನೀಡಿದ ವೈದ್ಯರ ವಿರುದ್ಧವೂ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು. ವಾಕ್‌, ಶ್ರವಣ ಸಂಸ್ಥೆಯಿಂದಲೂ ಆ ರೀತಿಯ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದರೆ ಏನು ಹೇಳಬೇಕು ಎಂದರು.

ಕೂಡಲೇ ಎಲ್ಲಾ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಂಗವಿಕಲತೆ ಪ್ರಮಾಣ ನಿರ್ಧರಿಸುವ ವೈದ್ಯರ ಸಭೆ ಕರೆಯಬೇಕು. ನಾನು ಅವರೊಟ್ಟಿಗೆ ಮಾತನಾಡುತ್ತೇನೆ. ಈ ಬಗ್ಗೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ. ಇದು ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

ಈ ವೇಳೆ ನಮ್ಮ ಇಲಾಖೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಕೆ.ಆರ್‌. ಆಸ್ಪತ್ರೆ ಬಳಿ ದೊಡ್ಡ ಜಾಲವೇ ಇದೆ. ಅಲ್ಲಿನ ಕಂಪ್ಯೂಟರ್‌ ಆಪರೇಟರ್‌ ಒಬ್ಬನನ್ನು ತನಿಖೆಗೆ ಒಳಪಡಿಸಿ, ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ ಎಂದು ದೂರಿದರು.

ಶೇ 40ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂಗವಿಕಲತೆ ಹೊಂದಿದ್ದರೆ, ಮತದಾರರ ಪಟ್ಟಿಯಲ್ಲಿ ನಮೂದಿಸಬೇಕು. ಆಗ, ಆಯೋಗದಿಂದ ಮತದಾನಕ್ಕಾಗಿ ಮನೆಗೆ ವಾಹನ ಕಳುಹಿಸುವ ಸೌಲಭ್ಯ ಒದಗಿಸಬಹುದು. ತೃತೀಯ ಲಿಂಗಿಗಳು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಹೇಳಿದರು.

ತಾಲೂಕು ಮಟ್ಟದ ಅಧಿಕಾರಿಗಳು, ಸಿಡಿಪಿಒಗಳು, ಮೇಲ್ವಿಚಾರಕರು ಅಂಗವಿಕಲರ ಕುಂದುಕೊರತೆ ಸಭೆ ನಡೆಸಿ ಪರಿಹರಿಸಬೇಕು. ಇದರಿಂದ, ಅವರು ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪುತ್ತದೆ. ಜ.10ರ ಒಳಗೆ ಸಭೆ ನಡೆಸಿ ವರದಿ ನೀಡಬೇಕು ಎಂದು ಅವರು ಹೇಳಿದರು.

ಅಂಗವಿಕಲರ ವಿಷಯದಲ್ಲಿ ಮಾನವೀಯತೆಯಿಂದ ಕೆಲಸ ಮಾಡಿ ಅವರ ಹಕ್ಕುಗಳನ್ನು ಗೌರವಿಸಬೇಕು. 2 ತಿಂಗಳಿಗೆ ಒಮ್ಮೆಯಾದರೂ ಕಡ್ಡಾಯವಾಗಿ ಸಭೆ ನಡೆಸಬೇಕು. ಶೇ. 5 ರಷ್ಟುಅನುದಾನ ಬಳಕೆ ಆಗುತ್ತಿದೆಯೇ, ಅರ್ಹರಿಗೆ ತಲುಪುತ್ತಿದೆಯೇ ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಉಳಿದಂತೆ ಅಂಗವಿಕಲರಿಗೆ ಗುಂಪು ಮನೆ ನೀಡುವುದು ಮತ್ತು ಸೂಕ್ತ ಸ್ಥಳದಲ್ಲಿ ಅಂಗವಿಕಲರಿಗೆ ಪೆಟ್ಟಿಅಂಗಡಿ ಇಡಲು ವ್ಯವಸ್ಥೆ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಜಿಪಂ ಸಿಇಒ ಬಿ.ಆರ್‌. ಪೂರ್ಣಿಮಾ, ನಗರ ಪಾಲಿಕೆ ಉಪ ಆಯುಕ್ತೆ ರೂಪಾ, ಅಂಗವಿಕಲರ ಕಲ್ಯಾಣಧಿಕಾರಿ ಮಾಲಿನಿ ಇದ್ದರು.

click me!