ಮಡಿಕೇರಿಯ ವಿರಾಜಪೇಟೆಯಲ್ಲಿ ಮಳೆ ಹಿನ್ನೆಲೆ ಶಾಲೆಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರವಾಗಿ ಮಡಿಕೇರಿ ಜಿಲ್ಲಾಡಳಿತ ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಸೂಚಿಸಿದೆ. ಹಾಗೇ ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.
ಮಡಿಕೇರಿ(ಜು.23): ಕರಾವಳಿಯಲ್ಲಿ ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ, ಮಂಗಳೂರು ಭಾಗಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಇದೀಗ ಮಡಿಕೇರಿಯಲ್ಲೂ ರಜೆ ಘೋಷಣೆಯಾಗಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿರಾಜಪೇಟೆ ಭಾಗದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಸುಳ್ಳು ವದಂತಿಗೆ ಕಿವಿಗೊಡದಂತೆ ಜಿಲ್ಲಾಡಳಿತ ಸೂಚಿಸಿದೆ.
ವಿರಾಜಪೇಟೆ ಶಾಲೆಗಳಿಗೆ ರಜೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ. ಆದರೆ ಜಿಲ್ಲೆಗೆ ಅತೀ ಹೆಚ್ಚು ಮಳೆ ಬೀಳುವುದಾಗಿ ರೆಡ್ ಅಲರ್ಟ್ ಮಾತ್ರ ಘೋಷಣೆಯಾಗಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದಿದೆ.
ಸುಳ್ಳು ವದಂತಿ ಹಬ್ಬಿದ್ರೆ ಕ್ರಮ:
ಜನರು ಯಾವುದೇ ಭಯಪಡುವ ಅಗತ್ಯ ಇರುವುದಿಲ್ಲ. ಜಿಲ್ಲೆಯ ಯಾವುದೇ ಭಾಗದಲ್ಲಿ ಭೂಕಂಪನವಾಗಿರುವುದಿಲ್ಲ. ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವುದಿಲ್ಲ. ಜನರು ಯಾವುದೇ ಆತಂಕಗಳಿಗೆ ಒಳಗಾಗದೇ, ಸುಳ್ಳು ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಜಿಲ್ಲಾಡಳಿತ ಮನವಿ ಮಾಡಿದೆ. ಅಲ್ಲದೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ನಿಯಾಮಾನುಸಾರ ಕಾನೂನು ಕ್ರಮ ವಹಿಸಲಾಗುವುದು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಘೋಷಿಸಿದ್ದಾರೆ.