ಕಸದ ಕೊಂಪೆಯಾಗಿದ್ದ ಮಣಿಮುಂಡ ಈಗ ಕ್ಲೀನ್ ಹಳ್ಳಿ!

By Kannadaprabha NewsFirst Published Jul 22, 2019, 3:13 PM IST
Highlights

ಕಸದ ಕೊಂಪೆಯಾಗಿದ್ದ ಮಣಿಮುಂಡ ಈಗ ಕ್ಲೀನ್ ಹಳ್ಳಿ!| ಗಡಿನಾಡು ಕಾಸರಗೋಡಿನ ಪುಟ್ಟ ಹಳ್ಳಿಯಲ್ಲಿ ಸ್ವಚ್ಛತಾ ಜಾಗೃತಿ, ‘ಬ್ರದರ್ಸ್ ಮಣಿಮುಂಡ’ ಸಂಘದ ಸದಸ್ಯರ ಯಶೋಗಾಥೆ

-ಸಂದೀಪ್ ವಾಗ್ಲೆ

ಮಂಗಳೂರು[ಜು.22]: ಆ ಹಳ್ಳಿಯಲ್ಲಿ ಎಲ್ಲಿ ನೋಡಿದರಲ್ಲಿ ರಸ್ತೆಯುದ್ದಕ್ಕೂ ಕಸ ರಾಶಿ ಬಿದ್ದು ನಾರುತ್ತಿತ್ತು. ಈ ಪ್ರಮಾಣ ಎಷ್ಟಿತ್ತೆಂದರೆ ಮಳೆಗಾಲ ಬಂದರೆ ಕಸದಿಂದಾಗಿಯೇ ಕೃತಕ ಪ್ರವಾಹ ಉಂಟಾಗಿ ರಸ್ತೆಗಳೇ ಬ್ಲಾಕ್ ಆಗುತ್ತಿತ್ತು. ನಡೆದಾಡಲು ಅಸಹ್ಯಪಡುವಂತಾಗಿತ್ತು. ಇದೀಗ ಆ ಹಳ್ಳಿಯಲ್ಲಿ ಕಸ ಕಾಣ ಸಿಗುವುದಿಲ್ಲ. ಜನರೂ ಜಾಗೃತರಾಗಿ ತಮ್ಮ ಕಸವನ್ನು ತಾವೇ ವಿಲೇವಾರಿ ಮಾಡುತ್ತಿದ್ದಾರೆ. ಒಂದೊಮ್ಮೆ ಕಸವೇ ತಾಂಡವವಾಡುತ್ತಿದ್ದ ಇಡೀ ಹಳ್ಳಿ ಈಗ ಫುಲ್ ಕ್ಲೀನ್!

ಗಡಿನಾಡು ಕಾಸರಗೋಡಿನ ಉಪ್ಪಳದ ಮಣಿಮುಂಡ ಎಂಬ ಪುಟ್ಟ ಹಳ್ಳಿಯ ಯಶೋಗಾಥೆ ಇದು. ತನ್ನಷ್ಟಕ್ಕೆ ಏಕಾಏಕಿ ಈ ಬದಲಾವಣೆ ಆದದ್ದಲ್ಲ. ಅಲ್ಲಿನ ‘ಬ್ರದರ್ಸ್ ಮಣಿಮುಂಡ’ ಎಂಬ ಸಂಘಟನೆಯ ಕಾಳಜಿಯಿಂದ ಇಡೀ ಹಳ್ಳಿಯ ಚಿತ್ರಣವೇ ಬದಲಾಗಿದೆ. ಅಲ್ಲೀಗ ತ್ಯಾಜ್ಯ ಕಾಣಸಿಗುವುದಿಲ್ಲ. ಬೇಕಾಬಿಟ್ಟಿ ಕಸ ಬಿಸಾಡುತ್ತಿದ್ದ ಜನರೂ ಈಗ ಜಾಗೃತರಾಗಿ ಸ್ವಚ್ಛ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ. ಮೇಲಾಗಿ ಸಂಘದ ಸದಸ್ಯರು ಇಡೀ ಹಳ್ಳಿಯ ಒಂದೇ ಒಂದು ಮನೆಯನ್ನೂ ಬಿಡದೆ ಸ್ವಚ್ಛತಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ವಚ್ಛ ಭಾರತ್ ಆಶಯಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಭಾರೀ ತ್ಯಾಜ್ಯ ತೆರವಿನೊಂದಿಗೆ ಜಾಗೃತಿ:

ಉಪ್ಪಳ ರೈಲ್ವೆ ನಿಲ್ದಾಣ ಬಳಿ ಜೂನ್ ತಿಂಗಳಲ್ಲಿ ಭಾರೀ ತ್ಯಾಜ್ಯ ಸಂಗ್ರವಾಗಿದ್ದರೂ ಯಾರೂ ತೆರವುಗೊಳಿಸಲು ಮುಂದಾಗಿರಲಿಲ್ಲ. ಇದನ್ನು ನೋಡಿದ ಬ್ರದರ್ಸ್ ಮಣಿಮುಂಡ ತಂಡದ 40 ಸದಸ್ಯರು ತಾವೇ ಮುಂದೆ ನಿಂತು 300 ಗೋಣಿ ಚೀಲಗಳಷ್ಟು ಭಾರೀ ತ್ಯಾಜ್ಯವನ್ನು ತೆರವುಗೊಳಿಸಿದ್ದರು. ಅದಾದ ಬಳಿಕ ಸದಸ್ಯರು ತಮ್ಮೊಳಗೆ ಮಾತುಕತೆ ನಡೆಸಿ ಇಡೀ ಹಳ್ಳಿಯ ರಸ್ತೆಯ ಇಕ್ಕೆಲದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯಗಳನ್ನು ಹಂತ ಹಂತವಾಗಿ ತೆರವುಗೊಳಿಸಿದರು. ಪರಿಶೀಲನೆ ನಡೆಸಿದಾಗ ಮನೆಯವರೇ ಕಸ ತಂದು ಸುರಿಯುತ್ತಿದ್ದು ಕಂಡುಬಂತು. ಇದೇ ಕಸ ದೊಡ್ಡದಾಗಿ ಬೆಳೆಯುತ್ತ ಹೋಗಿ ಮಳೆಗಾಲದಲ್ಲಿ ಕೃತಕ ಪ್ರವಾಹಕ್ಕೆ ಕಾರಣವಾಗುತ್ತಿತ್ತು.

ಜನಜಾಗೃತಿಯಿಂದ ಮಾತ್ರ ಸಾಧ್ಯ ಎಂದು ಮನಗಂಡ ಸಂಘಟನೆಯವರು ಅಲ್ಲಿನ ಆರೋಗ್ಯ ಇಲಾಖೆ, ಹಸಿರು ಸೇನೆ, ನೆಹರೂ ಯುವ ಕೇಂದ್ರವನ್ನು ಸಂಪರ್ಕಿಸಿ ಅವರ ಸಹಕಾರ ಪಡೆದು ನಿರಂತರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮನೆ ಮನೆ ಜಾಗೃತಿ:

ಮಣಿಮುಂಡ ಹಳ್ಳಿಯಲ್ಲಿ 300 ಮನೆಗಳಿವೆ. ಕಳೆದೊಂದು ತಿಂಗಳಲ್ಲಿ ಒಂದೇ ಒಂದು ಮನೆ ಬಿಡದಂತೆ ಅವರಿಗೆ ಕಸ ವಿಂಗಡಣೆ, ಹಸಿ ಕಸವನ್ನು ಗೊಬ್ಬರವಾಗಿಸಿ ಕೃಷಿಗೆ ಉಪಯೋಗಿಸುವ ಅರಿವು ಮೂಡಿಸಿ ಪ್ರಾತ್ಯಕ್ಷಿಕೆಯನ್ನೂ ಮಾಡಿ ತೋರಿಸಿದ್ದರಿಂದ ಇಂದು ಹೆಚ್ಚಿನ ಮನೆಯವರು ಅನುಸರಿಸುತ್ತಿದ್ದಾರೆ. ಹಸಿ ಕಸ ಸಂಗ್ರಹಿಸಿ ಕೊಂಡೊಯ್ಯಲು ವ್ಯವಸ್ಥೆ ಮಾಡಿದ್ದಾರೆ. ಪ್ಲಾಸ್ಟಿಕ್ ವಸ್ತುಗಳನ್ನು ಸ್ವಚ್ಛ ಮಾಡಿ ಸಂಗ್ರಹಿಸಡಲು ತಿಳಿಸಲಾಗಿದ್ದು, ಕಾಲಕಾಲಕ್ಕೆ ಅದನ್ನು ಸಂಗ್ರಹಿಸಿ ಗ್ರಾಮ ಪಂಚಾಯ್ತಿಗೆ ನೀಡುತ್ತಿದ್ದಾರೆ. ಈಗಾಗಲೇ ಒಂದು ಮಿನಿ ಟೆಂಪೋದಷ್ಟು ಪ್ಲಾಸ್ಟಿಕ್‌ನ್ನು ಸಂಗ್ರಹಿಸಲಾಗಿದೆ. ಒಂದೇ ತಿಂಗಳಲ್ಲಿ ಇಂಥದ್ದೊಂದು ಸ್ವಚ್ಛತಾ ಕ್ರಾಂತಿ ಈ ಹಳ್ಳಿಯಲ್ಲಿ ಸಾಕಾರವಾಗಿದೆ.

ಶುಕ್ರವಾರ, ಭಾನುವಾರ ಶ್ರಮದಾನ:

ಜನಜಾಗೃತಿಯೊಂದಿಗೆ ಪ್ರತಿ ಶುಕ್ರವಾರ ಮತ್ತು ಭಾನುವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಸಂಘದ ಸದಸ್ಯರನ್ನು ತಂಡಗಳಾಗಿ ವಿಭಾಗಿಸಿ ಅಲ್ಲಲ್ಲಿ ಸ್ವಚ್ಛತಾ ಶ್ರಮದಾನ ನಡೆಸುತ್ತಿದ್ದಾರೆ. ಒಂದೊಮ್ಮೆ ಕಸದ ಕೊಂಪೆಯಾಗಿದ್ದ ಮಣಿಮುಂಡ ಹಳ್ಳಿ ಇಂದು ಕ್ಲೀನ್ ಹಳ್ಳಿಯಾಗಿದೆ. ಈ ಕಾರ್ಯವನ್ನು ಮುಂದೆಯೂ ನಿರಂತರವಾಗಿ ಮಾಡುತ್ತೇವೆ ಎನ್ನುತ್ತಾರೆ ಸಂಘದ ಅಧ್ಯಕ್ಷ ಅಜೀಂ.

click me!