Cyber: ಕಲಬುರಗಿಯಲ್ಲಿ ಭೀಕರ ಸೈಬರ್ ವಂಚನೆ; 'ಡಿಜಿಟಲ್ ಅರೆಸ್ಟ್' ನೆಪದಲ್ಲಿ ವೈದ್ಯನಿಗೆ 1.79 ಕೋಟಿ ರೂ. ಟೋಪಿ!

Published : Aug 31, 2026, 08:29 PM IST
cyber attack

ಸಾರಾಂಶ

ಕಲಬುರಗಿಯ ನಿವೃತ್ತ ವೈದ್ಯರೊಬ್ಬರು 'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ನಕಲಿ ಅಧಿಕಾರಿಗಳ ಸೋಗಿನಲ್ಲಿ ಬಂದ ವಂಚಕರು, ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಬೆದರಿಸಿ ದಂಪತಿಯಿಂದ 1.79 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ. ಬೆಂಗಳೂರಿನಲ್ಲಿದ್ದ ಮಗ ಮನೆಗೆ ಬಂದಾಗ ಈ ಬೃಹತ್ ವಂಚನೆಯ ಜಾಲ ಬಯಲಾಗಿದೆ.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಸೈಬರ್ ಅಪರಾಧಿಗಳ ಜಾಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಭೀತಿಯನ್ನೇ ಬಂಡವಾಳ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ದೋಚುವ ಕೃತ್ಯಗಳು ಮುಂದುವರಿದಿವೆ. ಇದಕ್ಕೆ ತಾಜಾ ನಿದರ್ಶನವೆಂಬಂತೆ, ಕರ್ನಾಟಕದ ಕಲಬುರಗಿ ನಿವಾಸಿಯಾಗಿರುವ 67 ವರ್ಷದ ನಿವೃತ್ತ ವೈದ್ಯರೊಬ್ಬರು "ಡಿಜಿಟಲ್ ಅರೆಸ್ಟ್" ಎಂಬ ಹೈಟೆಕ್ ವಂಚನೆಗೆ ಬಲಿಯಾಗಿ ಬರೋಬ್ಬರಿ 1.79 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

ಘಟನೆಯ ಹಂತ-ಹಂತದ ಹಿನ್ನೆಲೆ!

ಸಂಕಷ್ಟ ತಂದ ಮೊದಲ ಫೋನ್ ಕರೆ; ಜುಲೈ 14 ರಂದು ನಿವೃತ್ತ ವೈದ್ಯರ ಪತ್ನಿಗೆ ಪ್ರಸಿದ್ಧ ಕೊರಿಯರ್ ಕಂಪನಿಯೊಂದರ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ. "ನಿಮ್ಮ ಹೆಸರಿನಲ್ಲಿ ಮುಂಬೈಗೆ ಅಕ್ರಮ ವಸ್ತುಗಳಿರುವ ಪ್ಯಾಕೇಜ್ ಒಂದನ್ನು ರವಾನಿಸಲಾಗುತ್ತಿದೆ ಎಂದು ಹೇಳಿ ಆಕೆಯನ್ನು ಹೆದರಿಸಿದ್ದ. ನಕಲಿ ಸೈಬರ್ ಅಧಿಕಾರಿಯ ಎಂಟ್ರಿ; ತಕ್ಷಣವೇ ಆ ಕರೆಯನ್ನು ಮುಂಬೈನ "ಭಾರತೀಯ ಸೈಬರ್ ಅಪರಾಧ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಎಂದು ತನ್ನನ್ನು ಪರಿಚಯಿಸಿಕೊಂಡ ಅಮನ್ ಕುಮಾರ್ ಶರ್ಮಾ ಎಂಬ ವ್ಯಕ್ತಿಗೆ ವರ್ಗಾಯಿಸಲಾಯಿತು. ಆತ, "ನಿಮ್ಮ ಆಧಾರ್ ಕಾರ್ಡ್ ಬಳಸಿ ನಿಷೇಧಿತ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' (PFI) ಸಂಸ್ಥೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವ ಬ್ಯಾಂಕ್ ಖಾತೆ ತೆರೆಯಲಾಗಿದೆ" ಎಂದು ದಂಪತಿಗಳನ್ನು ಬೆದರಿಸಿದ್ದ.

ಬೆದರಿಕೆ ಮತ್ತು 'ರಾಷ್ಟ್ರೀಯ ಭದ್ರತೆ' ನಾಟಕ; ಪ್ರಕರಣದಿಂದ ಹೆಸರು ತೆರವುಗೊಳಿಸಲು ಅಕ್ರಮ ನಿಧಿಯ ಶೇಕಡಾ 10 ರಷ್ಟು ಅಂದರೆ 20 ಲಕ್ಷ ರೂಪಾಯಿ ನೀಡುವಂತೆ ಮೊದಲಿಗೆ ಬೇಡಿಕೆ ಇಟ್ಟಿದ್ದರು. ತದನಂತರ ವಾಟ್ಸಾಪ್ ವೀಡಿಯೋ ಕರೆಗಳ ಮೂಲಕ ತಾನು ಸಬ್ ಇನ್ಸ್‌ಪೆಕ್ಟರ್ ವಿಶ್ವಾಸ್ ರಾವ್ ಎಂದು ಹೇಳಿಕೊಂಡ ಇನ್ನೊಬ್ಬ ವ್ಯಕ್ತಿ ತನಿಖೆಯ ನಾಟಕವಾಡಿದ್ದ. "ರಾಷ್ಟ್ರೀಯ ಭದ್ರತೆ"ಯ ವಿಷಯವೆಂದು ಬೆದರಿಸಿ, ಈ ವಿಚಾರವನ್ನು ಯಾರಿಗೂ ಬಹಿರಂಗಪಡಿಸದಂತೆ ಎಚ್ಚರಿಕೆ ನೀಡಿದ್ದ.

ಆಸ್ತಿ-ಪಾಸ್ತಿ ಮಾರಿಸಿ 1.79 ಕೋಟಿ ರೂ. ದೋಚಿದ ಖದೀಮರು!

ತನಿಖೆಯ ನೆಪದಲ್ಲಿ ವಂಚಕರು ವೈದ್ಯರು ಮತ್ತು ಅವರ ಪತ್ನಿಯ ಬ್ಯಾಂಕ್ ಖಾತೆಗಳು, ಸ್ಥಿರ ಠೇವಣಿಗಳು (FD), ಉಳಿತಾಯ ಖಾತೆ, ಎಲ್‌ಐಸಿ ಪಾಲಿಸಿಗಳು, ಚಿನ್ನದ ವಿವರ ಹಾಗೂ ಆಸ್ತಿ ಮಾಹಿತಿಯನ್ನೊಳಗೊಂಡ ಸೂಕ್ಷ್ಮ ವಿವರಗಳನ್ನು ಕಲೆಹಾಕಿದ್ದರು. ವಂಚಕರ ಮಾತನ್ನು ನಂಬಿದ ದಂಪತಿಗಳು ತಮ್ಮ ಸ್ಥಿರ ಠೇವಣಿಗಳನ್ನು ಮುಕ್ತಾಯಗೊಳಿಸಿ, ಎಲ್‌ಐಸಿ ಹಣವನ್ನು ಹಿಂತೆಗೆದುಕೊಂಡರು. ಅಷ್ಟೇ ಅಲ್ಲದೆ, ಕೊನೆಗೆ ತಮ್ಮ ಮನೆಯ ಮೇಲೆಯೇ 50 ಲಕ್ಷ ರೂಪಾಯಿ ವೈಯಕ್ತಿಕ ಸಾಲ ಪಡೆದು, ವಿವಿಧ ಖಾತೆಗಳ ಮೂಲಕ ಒಟ್ಟು 1.79 ಕೋಟಿ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದರು.

ಮಗ ಮನೆಗೆ ಬಂದ ಮೇಲೆಯೇ ಬಯಲಾಯ್ತು ವಂಚನೆ!

ಆಗಸ್ಟ್ 21 ರಂದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಇವರ ಮಗ ಕಲಬುರಗಿಯ ಮನೆಗೆ ಭೇಟಿ ನೀಡಿದ್ದ. ಆ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ 'ಡಿಜಿಟಲ್ ಅರೆಸ್ಟ್' ವಂಚನೆಗಳ ಬಗ್ಗೆ ಪೋಷಕರಿಗೆ ವಿವರಿಸಿದಾಗಷ್ಟೇ, ತಾವು ಬೃಹತ್ ಹಗರಣಕ್ಕೆ ಬಲಿಯಾಗಿದ್ದೇವೆ ಎಂಬ ಕಹಿ ಸತ್ಯ ವೈದ್ಯ ದಂಪತಿಗೆ ಅರಿವಾಗಿದೆ.

ದೂರು ಸಲ್ಲಿಸಿದ ವೈದ್ಯ!

ಕೂಡಲೇ ಜಾಗೃತರಾದ ವೈದ್ಯರು ಆಗಸ್ಟ್ 28 ರಂದು ಕಲಬುರಗಿ ಸಿಇಎನ್ (CEN) ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಗುರುತಿನ ಕಳ್ಳತನ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. "ಜಾರಿ ನಿರ್ದೇಶನಾಲಯ (ED) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳ ಹೆಸರಿನಲ್ಲಿ ಈ ಕೃತ್ಯ ನಡೆದಿದ್ದು, ಆರೋಪಿಗಳ ಕರೆ ದಾಖಲೆಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ" ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಕೋಲಾರದಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡಿದ್ದ 341 ಎಕರೆ ಅಬ್ಬಣಿ ಕಿರು ಅರಣ್ಯ ಈಗ ಕಂದಾಯ ಭೂಮಿ, ಒತ್ತುವರಿದಾರರಿಗೆ ಹಬ್ಬ
ಹೇಮಾವತಿ ಎಡದಂಡೆ ನಾಲಾ ವ್ಯಾಪ್ತಿ ವಿತರಣಾ ನಾಲೆ ಅತಿಕ್ರಮಣ, ಕಂದಾಯ ಇಲಾಖೆ ನಿವೃತ್ತ ಶಿರಸ್ತೇದಾರನ ಕೈವಾಡ!