ಪಿಎಂ, ಸಿಎಂಗೆ ಭದ್ರತೆ ನೀಡಿದ್ದ ಸ್ಫೋಟಕ ಪತ್ತೆದಾರಿ ದಾವಣಗೆರೆ ಪೊಲೀಸ್‌ ಶ್ವಾನ ಸೌಮ್ಯ ಇನ್ನಿಲ್ಲ!

By Kannadaprabha News  |  First Published Sep 3, 2023, 11:41 PM IST

ವಿಧ್ವಂಸಕ ಕೃತ್ಯ ತಡೆ, ಸ್ಪೋಟಕ ಪತ್ತೆಯಲ್ಲಿ ಪ್ರವೀಣೆಯಾಗಿದ್ದ, ಗಣ್ಯಾತಿಗಣ್ಯರ ಭದ್ರತಾ ಕಾರ್ಯ ಕೈಗೊಂಡಿದ್ದ ಜಿಲ್ಲಾ ಪೊಲೀಸ್ ಶ್ವಾನದಳದ ಸೌಮ್ಯಾ ಹೆಸರಿನ ನಾಯಿ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಇಲಾಖೆಯಿಂದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. 


ದಾವಣಗೆರೆ (ಸೆ.03): ವಿಧ್ವಂಸಕ ಕೃತ್ಯ ತಡೆ, ಸ್ಪೋಟಕ ಪತ್ತೆಯಲ್ಲಿ ಪ್ರವೀಣೆಯಾಗಿದ್ದ, ಗಣ್ಯಾತಿಗಣ್ಯರ ಭದ್ರತಾ ಕಾರ್ಯ ಕೈಗೊಂಡಿದ್ದ ಜಿಲ್ಲಾ ಪೊಲೀಸ್ ಶ್ವಾನದಳದ ಸೌಮ್ಯಾ ಹೆಸರಿನ ನಾಯಿ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಇಲಾಖೆಯಿಂದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆದ ಡಿವೈಎಸ್ಪಿ ಪ್ರಕಾಶ್ ಸೇರಿ ಅಧಿಕಾರಿ, ಸಿಬ್ಬಂದಿ ತಮ್ಮ ಇಲಾಖೆಯ ಶ್ವಾನ ಸೌಮ್ಯಾ ಅಗಲಿಕೆಗೆ ಕಂಬನಿ ಮಿಡಿದು, ಅಂತಿಮ ಗೌರವ ಸಲ್ಲಿಸಿದರು. 

ಅಗಲಿದ ಶ್ವಾನ ಪಾರ್ಥಿವ ಶರೀರಕ್ಕೆ ಹಾರ ಇಟ್ಟು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಡಿಎಆರ್‌ ಡಿವೈಎಸ್ಪಿ ಪ್ರಕಾಶ್ ಸೇರಿ ಅಧಿಕಾರಿ ಸಿಬ್ಬಂದಿ ಸೆಲ್ಯೂಟ್ ಮೂಲಕ ಅಂತಿಮ ನಮನ ಸಲ್ಲಿಸಿದರು. ಶ್ವಾನ ಸೌಮ್ಯಾ ಸಾಧನೆ ಬಗ್ಗೆ ಡಿಎಆರ್ ಅಧಿಕಾರಿ, ಸಿಬ್ಬಂದಿ ಎಸ್‌ಪಿ ಉಮಾ ಪ್ರಶಾಂತ್ ಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ, ಪೊಲೀಸ್ ಇಲಾಖೆಗೆ ಅನನ್ಯ ಸೇವೆ ಸಲ್ಲಿಸಿದ ಸೌಮ್ಯಾ ಕಳೆದುಕೊಂಡಿದ್ದು ತುಂಬಲಾರದ ನಷ್ಟ ಎಂದರು.

Tap to resize

Latest Videos

ಮಾದರಿ ಕರ್ನಾಟಕ ನಿರ್ಮಾಣವೇ ಕಾಂಗ್ರೆಸ್‌ ಗುರಿ: ಸಚಿವ ಎಂ.ಸಿ.ಸುಧಾಕರ್‌

ಹೆಸರಷ್ಟೇ ಸೌಮ್ಯ, ದುಷ್ಟರಿಗೆ ಸಿಂಹಸ್ವಪ್ನ: ಹೆಸರು ಸೌಮ್ಯವಾಗಿದ್ದರೂ ಬೆಚ್ಚಿ ಬೀಳಿಸುವ ಸಾಧನೆ ಮಾಡಿತ್ತು. ಗ್ರಾಪಂ ಚುನಾವಣೆಯಿಂದ ಪ್ರಧಾನಿ ನರೇಂದ್ರ ಮೋದಿಗೆ ಭದ್ರತಾ ಪರಿಶೀಲನಾ ತಂಡದ ಭಾಗವಾಗಿ ತನ್ನ ಸೇವೆ ನೀಡಿತ್ತು. 8.6.2018ರಂದು ಜನಿಸಿದ್ದ ಲ್ಯಾಬ್ರಡಾರ್ ತಳಿಯ ಶ್ವಾನ 2019ರಲ್ಲಿ ಸೇರ್ಪಡೆಯಾಗಿ ಜಿಲ್ಲಾ ಪೊಲೀಸ್ ಇಲಾಖೆಯ ಆಸ್ತಿಯಾಗಿತ್ತು. ಕೇವಲ ನಾಲ್ಕು ವರ್ಷದ ಅವಧಿ ತನ್ನ ಸೇವೆಯಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಯಾವುದೇ ದೊಡ್ಡ ಕಾರ್ಯಕ್ರಮ, ಗಣ್ಯಾತಿಗಣ್ಯರ ಭೇಟಿ ವೇಳೆ ಸೌಮ್ಯಾ ಹಾಜರಾಗಿ, ಪರಿಶೀಲನೆ ನಡೆಸಿದರೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿಗೆ ಸಮಾಧಾನ. ಅಷ್ಟರಮಟ್ಟಿಗೆ ಪರಿಶೀಲನೆ ಕರಾರುವಕ್ಕು ಸೂಕ್ಷ್ಮವಾಗಿತ್ತು.

ಆದರೆ, ಕಳೆದೊಂದು ವಾರದಿಂದಲೂ ಅನಾರೋಗ್ಯಕ್ಕೆ ತುತ್ತಾಗಿದ್ದ ಸೌಮ್ಯಾ4-5 ದಿನದಿಂದ ಆಹಾರ ತ್ಯಜಿಸಿ, ನಿತ್ರಾಣವಾಗಿತ್ತು. ಪೊಲೀಸ್ ಇಲಾಖೆಯ ತುಂಗಾ ಶ್ವಾನ ಈಚೆಗೆ ಅಗಲಿದ ನಂತರ ಸೌಮ್ಯ ಶ್ವಾನದ ಸಾವು ಇಲಾಖೆಗೆ ತುಂಬಲಾರದ ನಷ್ಟ ಉಂಟು ಮಾಡಿವೆ. ಸೌಮ್ಯಾ ಉಳಿಸಿಕೊಳ್ಳಲು ಅದನ್ನು ನೋಡಿಕೊಳ್ಳುತ್ತಿದ್ದ ಕಾನ್ಸಟೇಬಲ್‌ ಪ್ರಕಾಶ್ ಸಾಕಷ್ಟು ಶ್ರಮಿಸಿದ್ದರು. ಅಷ್ಟೇ ಅಲ್ಲ, ಬೆಂಗಳೂರಿನ ಪಶು ತಜ್ಞರಿಂದಲೂ ಚಿಕಿತ್ಸೆ ಕೊಡಿಸಲಾಗಿತ್ತು.

ಪೊಲೀಸ್ ಶ್ವಾನ ಸೌಮ್ಯಾ ಸಾಧನೆಯ ಹೆಜ್ಜೆಗಳು..
225 ಭದ್ರತಾ ಕರ್ತವ್ಯ
4 ಸ್ಪೋಟಕಗಳ ಪತ್ತೆ ಪ್ರಕರಣದಲ್ಲಿ ಭಾಗಿ
2 ಭೇದಿಸಿದ ಸ್ಫೋಟಕಗಳ ಪತ್ತೆ ಪ್ರಕರಣ
4, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಭದ್ರತೆ ಕರ್ತವ್ಯ.
12 ಪ್ರಧಾನಿಯವರ ಭದ್ರತಾ ಸೇವೆ
10 ರಾಜ್ಯಪಾಲರ ಭದ್ರತಾ ಕಾರ್ಯ
64 ಮುಖ್ಯಮಂತ್ರಿಗಳ ಭದ್ರತಾ ಕಾರ್ಯ
2 ಬೆಂಗಳೂರು, ಹಂಪಿ ಜಿ-20 ಶೃಂಗಸಭೆ
5 ಕೇಂದ್ರ ಗೃಹ ಸಚಿವರ ಭದ್ರತಾ ಕಾರ್ಯ
2 ದಸರಾ ಉತ್ಪವದ ಕರ್ತವ್ಯ
4 ಹರಿಹರದ ಹರ ಜಾತ್ರೆ, ಮೇರಿ ಜಾತ್ರೆ ಭದ್ರತಾ ಕರ್ತವ್ಯ
1 ಕಾಡಜ್ಜಿ ಗ್ರಾಮದಲ್ಲಿ ಸ್ಪೋಟಕ ಪತ್ತೆ ಕಾರ್ಯ
1 ಕಾಶಿಪುರ ಗ್ರಾಮದ ಜಮೀನಿನಲ್ಲಿ ಜಿಲೇಟಿನ್ ಪತ್ತೆ ಕಾರ್ಯ
1 ಕಬ್ಬೂರು ಗ್ರಾಮದ ಜಮೀನಿನಲ್ಲಿ ಅನುಮಾನಾಸ್ಪದ ವಸ್ತು ಪತ್ತೆ ಕಾರ್ಯ
ಅಂತಾರಾಷ್ಟ್ರೀಯ, ಐಪಿಎಲ್ ಕ್ರಿಕೆಟ್ ಪಂದ್ಯಗಳ ಭದ್ರತಾ ಕಾರ್ಯ

ಕಾಂಗ್ರೆಸ್ ಸರ್ಕಾರಕ್ಕೆ ಕಾವೇರಿ ನೀರನ್ನು ರಕ್ಷಣೆ ಮಾಡುವ ಆಸಕ್ತಿಯೇ ಇಲ್ಲ: ಸಿ.ಎಸ್.ಪುಟ್ಟರಾಜು

ಕಣ್ಣು, ಬಾಯಿಯಲ್ಲಿ ಬಿಳಿಯಾದ ರೀತಿ ಕಂಡು ಬರುತ್ತಿದ್ದ ಸೌಮ್ಯಾ ಏಳೆಂಟು ದಿನದಿಂದ ಮಂಕು ಮಂಕಾಗಿತ್ತು. ಸದಾ ಚಟುವಟಿಕೆ, ಕ್ರಿಯಾಶೀಲವಾಗಿದ್ದ ಸೌಮ್ಯಾ ಸ್ಪಿನೋ ಮೆಗಾಲಿನ್ ಕಾಯಿಲೆಯಿಂದ ಬಳಲುತ್ತಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ ಸೌಮ್ಯಾಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಇಲಾಖೆಗೆ ನಾಲ್ಕು ವರ್ಷ 2 ತಿಂಗಳ ಕಾಲ ಸೇವೆ ಸಲ್ಲಿಸಿದ 5 ವರ್ಷ 2 ತಿಂಗಳಿನ ಪ್ರಾಯದ ಸೌಮ್ಯಾ ಸೇವೆಯನ್ನು ಇಲಾಖೆ ಸ್ಮರಿಸುವ ಕೆಲಸ ಮಾಡುತ್ತಿದೆ.
-ಪ್ರಕಾಶ್, ಕಾನ್ಸಟೇಬಲ್‌ (ಪಾಲನೆ ಮಾಡುತ್ತಿದ್ದವರು)

click me!