ಬಾರ್‌ಗಳಲ್ಲಿ ಅವಧಿ ಮುಗಿದ ಬೆಡ್‌ವೈಜರ್ ಕಂಪನಿಯ ಬಿಯರ್ ಮಾರಾಟ| 2019 ರ ಡಿಸೆಂಬರ್ 17 ರಂದು ಈ ಬಿಯರ್ ತಯಾರಾಗಿದ್ದು ಅವಧಿ ಮುಗಿಯುವುದು ಜೂನ್ 13, 2020 ಎಂದು ನಮೂದಿಸಲಾಗಿದೆ| ಆದರೆ ಇಲ್ಲಿನ ಬಹುತೇಕ ಬಾರ್‌ಗಳಲ್ಲಿ ಜೂನ್ 19ರವರೆಗೂ ಅದೇ ಭೀಯರ್‌ನ್ನೇ ಮಾರಾಟ| ಎಲ್ಲವೂ ಗೊತ್ತಿದ್ದರೂ ಜಾಣ ಕುರುಡರಾದ ಅಬಕಾರಿ ಅಧಿಕಾರಿಗಳು|
ಶಿವಕುಮಾರ ಕುಷ್ಟಗಿ
ಗದಗ(ಜೂ.20): ನಗರ ಸೇರಿದಂತೆ ಜಿಲ್ಲೆಯಲ್ಲಿ ಬಾರ್‌ಗಳಲ್ಲಿ ಲಾಕ್‌ಡೌನ್‌ನಲ್ಲಿ ಸ್ಟಾಕ್ ಉಳಿದು ಅವಧಿ ಮುಗಿದ ಬೀಯರ್ ಮಾರಾಟ ಮಾಡಲಾಗುತ್ತಿದೆ. ಅದೂ ಎಂಆರ್‌ಪಿ ದರಕ್ಕಿಂತ ಶೇ.25 ರಷ್ಟು ಹೆಚ್ಚಿನ ಬೆಲೆಗೆ. ಇಂಥ ಬಿಯರ್ ಕುಡಿದವರ ಆರೋಗ್ಯ ದೇವರಿಗೇ ಪ್ರೀತಿ ಎನ್ನುವಂತಾಗಿದೆ.
ನಗರದ ಹೃದಯ ಭಾಗದಲ್ಲಿರುವ ಬಾರ್‌ಗಳಲ್ಲಿಯೇ ಹೀಗೆ ಅವಧಿ ಮುಗಿದ ಬೆಡ್‌ವೈಜರ್ ಕಂಪನಿಯ ಬಿಯರ್ ಬಾಟಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. 2019 ರ ಡಿಸೆಂಬರ್ 17 ರಂದು ಈ ಬಿಯರ್ ತಯಾರಾಗಿದ್ದು ಅವಧಿ ಮುಗಿಯುವುದು ಜೂನ್ 13, 2020 ಎಂದು ನಮೂದಿಸಲಾಗಿದೆ. ಆದರೆ ಇಲ್ಲಿನ ಬಹುತೇಕ ಬಾರ್‌ಗಳಲ್ಲಿ ಜೂನ್ 19ರವರೆಗೂ ಅದೇ ಬೀಯರ್‌ನ್ನೇ ಮಾರಾಟ ಮಾಡುತ್ತಿದ್ದಾರೆ.
ಸಾವು ಸಂಭವಿಸುತ್ತದೆ:
ಈ ರೀತಿ ಅವಧಿ ಪೂರ್ಣಗೊಂಡಿರುವ ಬಿಯರ್ ಮಾರಾಟ ಮಾಡುವುದರಿಂದ ಮದ್ಯಪ್ರಿಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವೊಮ್ಮೆ ಸಾವು ಕೂಡಾ ಸಂಭವಿಸುವ ಸಾಧ್ಯತೆ ಇರುತ್ತದೆ. ಇದಕ್ಕಾಗಿಯೇ ಕಂಪನಿಗಳು ಅದರ ಮೇಲೆ ಅವಧಿಯನ್ನು ನಮೂದಿಸಿರುತ್ತಾರೆ. ಆದರೆ ಇಲ್ಲಿನ ಮದ್ಯದ ಅಂಗಡಿಗಳ ಮಾಲೀಕರು ಮಾತ್ರ ಕೇವಲ ಹಣ ಬಂದರೆ ಸಾಕು ಎನ್ನುವ ರೀತಿಯಲ್ಲಿ ವರ್ತಿಸುತ್ತಾ, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ಭಾರತೀಯ ಯೋಧರನ್ನ ಚೀನಾ ಕೊಲ್ಲಲಿ ಎಂದಿದ್ದ ದೇಶದ್ರೋಹಿಯ ಬಂಧನ
ಶೇ. 25 ರಷ್ಟು ಹೆಚ್ಚಿಗೆ ವಸೂಲಿ:
ಜಿಲ್ಲೆಯಾದ್ಯಂತ ಇರುವ ಎಲ್ಲಾ ಬಾರ್‌ಗಳಲ್ಲಿ ಸರ್ಕಾರ ಅಬಕಾರಿ ಇಲಾಖೆ ಮೂಲಕ ನಿಗದಿ ಪಡಿಸಿದ ದರಕ್ಕಿಂತಲೂ ಶೇ. 25ರಷ್ಟುಹೆಚ್ಚಿಗೆ ಹಣ ಪಡೆಯುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ನಿಮಗೆ ಬೇಕೋ? ಬೇಡವೋ? ನಾವು ಮಾರುವುದು ಇಷ್ಟಕ್ಕೆ ಎಂದು ಮದ್ಯಪ್ರೀಯರನ್ನೇ ಗದರಿಸಿ ಕಳಿಸುವ ಮಟ್ಟಕ್ಕೆ ಬಾರ್ ಮಾಲೀಕರು ಬಂದಿದ್ದಾರೆ.
ಜಾಣ ಕುರುಡುತನ
ಜಿಲ್ಲಾ ಅಬಕಾರಿ ಇಲಾಖೆಗೆ ಇದೆಲ್ಲಾ ಗೊತ್ತಿಲ್ಲ ಎಂದೇನಿಲ್ಲ, ಇಂಚಿಂಚು ಮಾಹಿತಿ ಕೂಡಾ ಗೊತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರಿಗೂ ಸಲ್ಲಿಕೆಯಾಗಬೇಕಾದದ್ದು ಬಂದು ಬೀಳುವ ಕಾರಣಕ್ಕಾಗಿ ಅವರೆಲ್ಲಾ ಯಾರ ಮೇಲೆ ಕ್ರಮ ತೆಗೆದುಕೊಳ್ಳುವ ಗೋಜಿಗೆ ಹೋಗದೇ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವುದು ಗುರುವಾರ ರಾತ್ರಿ ಅವಧಿ ಮುಗಿದ ಬೀಯರ್ ಪಡೆದು ಪರದಾಡಿ, ಬಾರ್ ಅಂಗಡಿ ಮಾಲೀಕರಿಂದ ಬೈಗುಳ ತಿಂದು, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಮದ್ಯಪ್ರಿರೊಬ್ಬರು.