ಹೊಲಗಾಲುವೆ ನಿರ್ಮಾಣಕ್ಕೆ ಶೀಘ್ರ ಟೆಂಡರ್‌: ಸಚಿವ ಎಂ.ಬಿ.ಪಾಟೀಲ

By Kannadaprabha News  |  First Published Aug 17, 2023, 8:53 PM IST

ಪಕ್ಕದ ರಾಜ್ಯದಲ್ಲಿಯೇ ಮಹಿಶ್ಯಾಳ ಯೋಜನೆ ಪ್ರಾರಂಭವಾಗಿ 50 ವರ್ಷಗಳು ಕಳೆದರೂ ಇನ್ನುವರೆಗೆ ನೀರು ಬಂದಿಲ್ಲ. ಆದರೆ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಯೋಜನೆಗಳನ್ನು ರೂಪಿಸಿ ನೀರು ಹರಿಸಿದ್ದೇವೆ. ರಾಜಸ್ಥಾನದ ಜೈಸಲ್ಮೇರ ಹಾಗೂ ಕರ್ನಾಟಕದ ವಿಜಯಪುರ ಅತ್ಯಂತ ಬರಗಾಲ ಪ್ರದೇಶ ಎಂದು ರಾಷ್ಟ್ರದಲ್ಲಿ ಹೆಸರು ಆಗಿದೆ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ


ವಿಜಯಪುರ(ಆ.17):  ನನ್ನ ಕನಸಿನ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಿ, ಮುಖ್ಯ ಕಾಲುವೆ, ಶಾಖಾ ಕಾಲುವೆ ಮೂಲಕ 2013-18ರ ಅವಧಿಯಲ್ಲಿಯೇ ನೀರು ಹರಿಸಿದ್ದರೂ, ಕಳೆದ ನಾಲ್ಕು ವರ್ಷಗಳಲ್ಲಿ ಹೊಲಗಾಲುವೆ ಮಾಡುವ ಕೆಲಸ ಹಿಂದಿನ ಸರ್ಕಾರ ಮಾಡಲಿಲ್ಲ. ಇದು ಅವರ ನೀರಾವರಿ ಯೋಜನೆಯ ನಿಷ್ಕಾಳಜಿ ತೋರುತ್ತದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಬಬಲೇಶ್ವರ ವಿಧಾನಸಭಾಕ್ಷೇತ್ರದ ಯತ್ನಾಳ ಗ್ರಾಮದಲ್ಲಿ ಯತ್ನಾಳ ಕೆರೆ ಪಾಟಾದಿಂದ ನೀನಾಬಾಯಿ ದೇವಸ್ಥಾನ (ತಾತೋಬಾ ವಸ್ತಿ) ವರೆಗೆ .250 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಅತ್ಯಂತ ಎತ್ತರದ ಕನಮಡಿ ಪ್ರದೇಶಕ್ಕೆ ನೀರೋದಗಿಸುವ ತುಬಚಿ-ಬಬಲೇಶ್ವರ ಯೋಜನೆ ನಾನೇ ರೂಪಿಸಿ, ಆರಂಭಿಸಿ, 2 ವರ್ಷಗಳಲ್ಲಿ .3600 ಕೋಟಿ ಅನುದಾನ ನೀಡಿ, ನೀರು ಹರಿಸಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ 1 ಕಿಮೀ ಕಾಲುವೆ ಕೂಡ ಮಾಡಲಿಲ್ಲ. ಕಮಿಷನ್‌ ಹೊಡೆಯಲು ಹೊಲಗಾಲುವೆಗಳ ದೊಡ್ಡ ಪ್ಯಾಕೇಜ್‌ ಮಾಡಲು ಹೊರಟಿದ್ದರು. ಕೆಲವೇ ದಿನಗಳಲ್ಲಿ ಹೊಲಗಾಲುವೆಗಳ ಕುರಿತು ಟೆಂಡರ್‌ ಕರೆಯಲು ಕ್ರಮ ವಹಿಸಲಾಗುವುದು ಎಂದರು.

Latest Videos

undefined

ಕಾಂಗ್ರೆಸ್‌ ಸರ್ಕಾರ ಕಮಿಷನ್‌ ಕೇಳಿದ್ದಕ್ಕೆ ಸಾಕ್ಷ್ಯ ಎಲ್ಲಿದೆ?: ಸಚಿವ ಎಂ.ಬಿ.ಪಾಟೀಲ್‌

ಬದಲಾವಣೆ ತಂದವರು ನಾವು:

ಪಕ್ಕದ ರಾಜ್ಯದಲ್ಲಿಯೇ ಮಹಿಶ್ಯಾಳ ಯೋಜನೆ ಪ್ರಾರಂಭವಾಗಿ 50 ವರ್ಷಗಳು ಕಳೆದರೂ ಇನ್ನುವರೆಗೆ ನೀರು ಬಂದಿಲ್ಲ. ಆದರೆ ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಯೋಜನೆಗಳನ್ನು ರೂಪಿಸಿ ನೀರು ಹರಿಸಿದ್ದೇವೆ. ರಾಜಸ್ಥಾನದ ಜೈಸಲ್ಮೇರ ಹಾಗೂ ಕರ್ನಾಟಕದ ವಿಜಯಪುರ ಅತ್ಯಂತ ಬರಗಾಲ ಪ್ರದೇಶ ಎಂದು ರಾಷ್ಟ್ರದಲ್ಲಿ ಹೆಸರು ಆಗಿದೆ. ಯುದ್ದದ ಸಂದರ್ಭದಲ್ಲಿ ಬಂಗಾರದಿಂದ ಇಂದಿರಾ ಗಾಂಧಿಯವರಿಗೆ ತುಲಾಭಾರ ಮಾಡಿ ಹೃದಯವಂತಿಕೆಯನ್ನು ಮೆರೆದ ಜಿಲ್ಲೆ ನಮ್ಮದು. ಆದರೆ, ಈ ಜಿಲ್ಲೆಯ ಅಭಿವೃದ್ಧಿಯಲ್ಲಿ ಬದಲಾವಣೆ ತಂದವರು ನಾವು ಎಂದರು.

ಈ ಸಂದರ್ಭದಲ್ಲಿ ತಿಕೋಟಾ ತಹಸೀಲ್ದಾರ್‌ ಪ್ರಶಾಂತ ಚನಗೊಂಡ, ತಿಕೋಟಾ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದು ಗೌಡನ್ನವರ, ಗ್ರಾಪಂ ಅಧ್ಯಕ್ಷೆ ಕಾಮಾಬಾಯಿ ಗೋಪಗಿ ಸೇರಿದಂತೆ ಮುಖಂಡರಾದ ಎಸ್‌.ಎಚ್‌. ನಾಡಗೌಡ, ರಾಜುಗೌಡ ಪಾಟೀಲ, ಕೋಪತ ಮಹಾರಾಜ, ಅಣ್ಣಪ್ಪ ದಳವಾಯಿ, ಅಪ್ಪಾಸಾಹೇಬಗೌಡ ಬಿರಾದಾರ, ರಮೇಶ ಗುಡದಿನ್ನಿ, ಗೀತಾಂಜಲಿ ಪಾಟೀಲ, ರಾಜು ಪವಾರ, ವಾಮನ ಚವ್ಹಾಣ ಮತ್ತಿತರರು ಉಪಸ್ಥಿತರಿದ್ದರು.

ಬಬಲೇಶ್ವರ, ತಿಕೋಟಾದ ಪ್ರತಿಯೊಬ್ಬರಿಗೂ ನಿತ್ಯ 135 ಲೀ. ನೀರು ಪೂರೈಕೆ: ಸಚಿವ ಎಂ.ಬಿ. ಪಾಟೀಲ

ಇದಕ್ಕೂ ಮುನ್ನ ಜಾಲಗೇರಿಯಲ್ಲಿ ಜಾಲಗೇರಿ ಎಲ್‌.ಟಿ-1 ದಿಂದ ಎಲ್‌.ಟಿ-4 ವರೆಗೆ .100 ಲಕ್ಷ ವೆಚ್ಚದರಸ್ತೆ ಮತ್ತು ಸೇತುವೆ ಕಾಮಗಾರಿಗೆ ಚಾಲನೆಗೊಳಿಸಿದರು. ನಂತರದಲ್ಲಿ ಹುಬನೂರ ಗ್ರಾಮದಲ್ಲಿ . 150 ಲಕ್ಷ ವೆಚ್ಚದ ಹುಬನೂರ-ಸೋಮದೇವರ ಹಟ್ಟಿಎಲ್‌.ಟಿ-1 ದಿಂದ ಹುಬನೂರ ದೇಸಾಯಿ ವಸ್ತಿ ವರೆಗೆ 4ಕಿ.ಮೀ ರಸ್ತೆ ಮತ್ತು ಸಿ.ಡಿ ಕಾಮಗಾರಿ, ಹುಬನೂರದಿಂದ ಕಾಗನೇರಿ ವರೆಗೆ .150 ಲಕ್ಷ ವೆಚ್ಚದ 4 ಕಿಮೀ ರಸ್ತೆ ಕಾಮಗಾರಿ ಟಕ್ಕಳಕಿಯಲ್ಲಿ ಟಕ್ಕಳಕಿ ಎಲ್‌.ಟಿ-1 ರಿಂದ ಗಣೇಶ ನಗರ ವರೆಗೆ .100 ಲಕ್ಷ ವೆಚ್ಚದಲ್ಲಿ 2ಕಿ.ಮೀ ರಸ್ತೆ ಕಾಮಗಾರಿಗೆ ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದರು.

ತುಬಚಿ-ಬಬಲೇಶ್ವರ ಹಾಗೂ ಅರಕೇರಿ ಏತ ನೀರಾವರಿ ಯೋಜನೆಗಳ ಮೂಲಕ ಜಾಲಗೇರಿ ಕೆರೆಗೆ ನೀರು ಹರಿಸಲು ಪ್ರತ್ಯೇಕ ಪೈಪ್‌ಲೈನ್‌ ಅಳವಡಿಸಿ, ಹೆಚ್ಚಿನ ನೀರು ಹರಿಸಲು ಕ್ರಮ ಜರುಗಿಸಲಾಗುವುದು. ಇದರಿಂದ ಜಾಲಗೇರಿ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ. 

click me!