ಚಿಕ್ಕಮಗಳೂರು ಹಬ್ಬದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಜ್ಞಾನ ವೈಭವ ವಸ್ತು ಪ್ರದರ್ಶನದಲ್ಲಿ ಹೂವಿನಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ಸೃಷ್ಠಿ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜ.19): ಚಿಕ್ಕಮಗಳೂರು ಉತ್ಸವದ ಅಂಗವಾಗಿ ನಗರದ ಎಐಟಿ ಕಾಲೇಜು ಆರಣದಲ್ಲಿ ಆಯೋಜಿಸಲಾಗಿರುವ ಜ್ಞಾನ ವೈಭವ ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ ವಿಜ್ಞಾನದ ಜ್ಞಾನ ಬಂಡಾರವೇ ಸೃಷ್ಠಿಯಾಗಿದೆ. ಉದ್ಘಾಟನೆಯ ಮೊದಲ ದಿನವೇ ಜ್ಞಾನ ವೈಭವ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ರೈತಾಪಿ ಗ್ರಾಮೀಣರನ್ನು ಸೆಳೆಯುತ್ತಿರುವುದು ವಿಶೇಷವಾಗಿದೆ.
ಹೂವಿನಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ :
ವಿವಿಧ ಹೂವಿನ ಕಲಾಕೃತಿಗಳು, ತರಕಾರಿ ಕೆತ್ತನೆಗಳ ಕಲಾಕೃತಿಗಳು, ಪುನೀತ್ ರಾಜ್ ಕುಮಾರ್ ಹೂವಿನ ಪುತ್ಥಳಿ, ರಂಗೋಲಿ ಕಲಾಕೃತಿ, ಬೋನ್ಸಾಯ್ ಗಿಡಗಳು, ಆರ್ಕೀಡ್, ಎಕ್ಸೋಟಿಕ್ ತರಕಾರಿ ಮತ್ತು ಹಣ್ಣುಗಳು, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧಿತ ಉತ್ಪನ್ನಗಳು, ಹನಿ ನೀರಾವರಿ ಮಾದರಿ, ಜೇನು ಕೃಷಿ, ವಿವಿಧ ಯಂತ್ರೋಪಕರಣಗಳು ಆಕರ್ಷಕವಾಗಿದೆ.ಸಜೀವ ಮಾದರಿಗಳ ವಸ್ತು ಪ್ರದರ್ಶನದಲ್ಲಿ ಮುಖ್ಯವಾಗಿ ಮಳಿಗೆಗಳ ಪ್ರವೇಶ ದ್ವಾರದಲ್ಲಿ ನಿರ್ಮಿಸಲಾಗಿರುವ ಅತ್ಯಾಕರ್ಷಕ ಸಿರಿಧಾನ್ಯ ರಾಶಿ ಹಾಗೂ ಬೆಳವಾಡಿಯ ವೀರನಾರಾಯಣ ದೇವಾಲಯಗಳು ಬೆರಗುಗೊಳಿಸುವಂತಿವೆ. ಇಲ್ಲಿಗೆ ಭೇಟಿಕೊಟ್ಟವರೆಲ್ಲರೂ ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಮಾಮೂಲಾಗಿದೆ.ವಿವಿಧ ಇಂಜಿನಿಯರಿಂಗ್ ಇಲಾಖೆಗಳಿಂದ ಜಿಲ್ಲಾಡಳಿತ ಭವನದ ಮಾದರಿ, ನೂತನ ಮೆಡಿಕಲ್ ಕಾಲೇಜು ಕಟ್ಟಡದ ಮಾದರಿ, ಹಿರೇನಲ್ಲೂರು ದೇವಾಲಯ, ಆಸಂದಿ ದೇವಾಲಯ ಹಾಗೂ ಬಗ್ಗವಳ್ಳಿ ದೇವಾಲಯಗಳ ಕಲಾ ಕೃತಿಗಳು ಅತ್ಯಾಕರ್ಷಕವಾಗಿವೆ.ಇದರ ಜೊತೆಗೆ ಚಿತ್ರ ಸಂತೆ, ಛಾಯಾಚಿತ್ರ, ಪುಸ್ತಕ ಮೇಳ ಹಾಗೂ ಗಾಂಧಿ ಸ್ಮರಣೆ ಕುರಿತು ಪ್ರದರ್ಶನಗಳೂ ಇವೆ. ಅರಣ್ಯ ಇಲಾಖೆಯಿಂದ ವನ್ಯ ಜಗತ್ತು ತೋಟಗಾರಿಕೆ ಕಾಲೇಜಿನಿಂದ ಚಿಟ್ಟೆ ಮತ್ತು ಕೀಟ ಪ್ರಪಂಚ, ಮೀನುಗಾರಿಕೆ ಇಲಾಖೆಯಿಂದ ಮತ್ಸ್ಯ ಜಗತ್ತು ಪ್ರದರ್ಶನ ಏರ್ಪಡಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹೆಲ್ತ್ ವೆಲ್ನೆಸ್ ಸೆಂಟರ್ ಮಾದರಿಯನ್ನು ಪ್ರದರ್ಶಿಸಲಾಗಿದೆ.
Chikkamagaluru Utsava: ಕೆಸರುಗದ್ದೆ ಅಖಾಡದಲ್ಲಿ ಸ್ಪರ್ಧಾಳುಗಳೊಂದಿಗೆ ಓಡಿದ ಚಿಕ್ಕಮಗಳೂರು
ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರದರ್ಶನ:
ಹೆಸರಾಂತ ಇಸ್ರೋ, ನೆಹರು ತಾರಾಲಯ ಹಾಗೂ ಹೆಚ್ಎಎಲ್ ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರದರ್ಶನ ಮಾಡುತ್ತಿದ್ದು, ಪ್ರಮುಖವಾಗಿ ವಿದ್ಯಾರ್ಥಿಗಳು ಅತ್ಯಂತ ಕುತೂಹಲದಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸಾರ್ವಜನಿಕರು, ರೈತರು, ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ ವತಿಯಿಂದ ಗ್ರಾಮೀಣ ಪ್ರದೇಶದ ಜನರನ್ನು ಕರೆತರಲು ವಾಹನ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಸಹಸ್ರಾರು ಜನರು ಜ್ಞಾನ ವೈಭವವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿದೆ.ಜ್ಞಾನ ವೈಭವಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ವಿವಿಧ ಸಚಿವರು, ಶಾಸಕರು ಬುಧವಾರ ಅದ್ದೂರಿ ಚಾಲನೆ ನೀಡಿದರು. ಶಾಸಕ ಸಿ.ಟಿ.ರವಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿ.ಪಂ. ಸಿಇಓ ಜಿ.ಪ್ರಭು ಇತರರು ಇದ್ದರು.