ಕೊರೋನಾ ತಡೆಗಟ್ಟಲು ಲಾಕ್‌ಡೌನ್ ಅವಶ್ಯಕ| ಗುತ್ತಲ ಪಟ್ಟಣದ ಜನತೆಯ ಆರೋಗ್ಯ ದೃಷ್ಟಿಯಿಂದ ಲಾಕ್‌ಡೌನ್ ನಿರ್ಧಾರ ತೆಗೆದುಕೊಂಡಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಧಾರ ಸ್ವಾಗತಾರ್ಹ| ವ್ಯಾಪಾರಸ್ಥರಿಂದ ಲಾಕ್‌ಡೌನ್‌ಗೆ ಬೆಂಬಲ|
ಗುತ್ತಲ(ಜು.11): ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಜನಪ್ರತಿನಿಧಿಗಳು, ವೈದ್ಯರು ಹಾಗೂ ಅನೇಕ ಜನರ ಅಭಿಪ್ರಾಯದಂತೆ ತಹಸೀಲ್ದಾರ್ ಶಂಕರ ಜಿ.ಎಸ್., ನಿನ್ನೆ(ಶುಕ್ರವಾರ)ಯಿಂದ ಜಾರಿಗೆ ಬರುವಂತೆ ಲಾಕ್‌ಡೌನ್ ಜಾರಿಗೆ ತಂದಿದ್ದಾರೆ.
ಪ್ರತಿದಿನ ಮಧ್ಯಾಹ್ನ 12 ರಿಂದ ಮರುದಿನ ಬೆಳಗ್ಗೆ 6ರ ವರೆಗೆ ನಿತ್ಯ ಲಾಕ್‌ಡೌನ್ ಇದ್ದು ಈ ವೇಳೆ ಯಾರು ರಸ್ತೆಯಲ್ಲಿ ಸಂಚರಿಸಬಾರದು. ವ್ಯಾಪಾರ-ವಹಿವಾಟು ಮಾಡಲು ಅಂಗಡಿ ತೆರೆಯಬಾರದೆಂದು ಪಪಂನಿಂದ ಪ್ರಚಾರ ಕೈಗೊಳ್ಳಲಾಯಿತು. ಇದಕ್ಕೆ ಸ್ಪಂದಿಸಿದ ಜನತೆ 12 ಗಂಟೆಯ ಸುಮಾರಿಗೆ ಸ್ವತಃ ಕೆಲ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿದರೆ, ಕೆಲವೊಂದನ್ನು ಅಧಿಕಾರಿಗಳೆ ಬಂದ್ ಮಾಡಿಸಿ ಲಾಕ್‌ಡೌನ್ ಜಾರಿಗೆ ಸಹಕರಿಸುವಂತೆ ಮನವಿ ಮಾಡಿದರು. ಪಪಂನಿಂದ ಆಟೋದಲ್ಲಿ ಪ್ರಚಾರ ಮಾಡುತ್ತಿದ್ದಂತೆ ಜನರು ಬೆಳಗ್ಗೆಯಿಂದಲೇ ನಿತ್ಯ ತಮಗೆ ಬೇಕಾದ ಅಗತ್ಯದ ವಸ್ತುಗಳನ್ನು ಖರೀದಿಸಿದರು.
undefined
ಹಾನಗಲ್: ಆ್ಯಂಬುಲೆನ್ಸ್‌ಗಾಗಿ 12 ಗಂಟೆ ಕಾದ ಕೊರೋನಾ ಸೋಂಕಿತೆ..!
ಪಟ್ಟಣದ ವಿವಿಧ ಕಚೇರಿಗಳಲ್ಲಿ ಜನರಿಲ್ಲದೆ ಸಿಬ್ಬಂದಿ ಕಚೇರಿಯ ಇನ್ನಿತರ ಕಾರ್ಯಗಳನ್ನು ಮಾಡಿದರು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ಹೋಟೆಲ್‌ಗಳನ್ನು ತೆರೆಯದೆ ಇರುವುದಕ್ಕೆ ತೊಂದರೆ ಅನುಭವಿಸುವಂತಾಯಿತು. ಒಟ್ಟಿನಲ್ಲಿ ಅನೇಕ ದಿನಗಳಿಂದ ಲಾಕ್‌ಡೌನ್‌ನಲ್ಲಿ ಕಾಲ ಕಳೆದ ಅನುಭವ ಇರುವ ಕಾರಣಕ್ಕೆ ಜನರು ಸಹ ಹೊಂದಿಕೊಂಡಿರವುದು ಮೇಲ್ನೋಟಕ್ಕೆ ಕಂಡು ಬಂದಿತು.
ಈ ವೇಳೆ ಪಿಎಸ್‌ಐ ಎಂ.ಇ. ಮಣ್ಣಣ್ಣನವರ, ಪಪಂ ಮುಖ್ಯಾಧಿಕಾರಿ ಏಸು ಬೆಂಗಳೂರ, ಪಪಂ ಸದಸ್ಯರಾದ ರಮೇಶ ಮಠದ, ಪ್ರಕಾಶ ಪಠಾಡೆ ಹಾಗೂ ಪೊಲೀಸ್, ಪಪಂ ಸಿಬ್ಬಂದಿಗಳು ಪಟ್ಟಣದಲ್ಲಿ ಸಂಚರಿಸಿ ಪರಿಶೀಲನೆ ಕೈಗೊಂಡರು.
ಕೊರೋನಾ ತಡೆಗಟ್ಟಲು ಇಂತಹ ನಿರ್ಧಾರಗಳು ಅವಶ್ಯಕವಾಗಿದೆ. ಪಟ್ಟಣದ ಜನತೆಯ ಆರೋಗ್ಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಧಾರ ಸ್ವಾಗತಾರ್ಹ. ವ್ಯಾಪಾರಸ್ಥರು ಕೂಡಾ ಲಾಕ್‌ಡೌನ್‌ಗೆ ಬೆಂಬಲ ನೀಡಿದ್ದಾರೆ ಎಂದು ಕಲ್ಮಠ ಗುತ್ತಲದ ಶ್ರೀಗುರುಸಿದ್ಧ ಶ್ರೀಗಳು ತಿಳಿಸಿದ್ದಾರೆ.
ಗುತ್ತಲದಲ್ಲಿ ಕೊರೋನಾ ಸೋಂಕು ಹೆಚ್ಚಾಗಬಾರದೆಂದು ಜನ ಪ್ರತಿನಿಧಿಗಳು, ವೈದ್ಯರು, ಮುಖಂಡರು ಸೇರಿದಂತೆ ಅನೇಕರು ನಿತ್ಯವೂ ಲಾಕ್‌ಡೌನ್ ಮಾಡುವಂತೆ ತಮ್ಮಲ್ಲಿ ಬೇಡಿಕೆ ಇಟ್ಟಿದ್ದರು. ಪ್ರಸ್ತುತ ದಿನಗಳಲ್ಲಿ ಕೊರೋನಾ ಹತೋಟಿಗೆ ಲಾಕ್‌ಡೌನ್ ಅನಿವಾರ್ಯವಾಗಿದ್ದರಿಂದ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇದು ಎಷ್ಟುದಿನವೆಂದು ಹೇಳಲು ಸಾಧ್ಯವಿಲ್ಲ. ಪರಿಸ್ಥಿತಿ ನೋಡಿಕೊಂಡು ಲಾಕ್‌ಡೌನ್ ಹಿಂಪಡೆಯಲಾಗುವುದು ಎಂದು ಹಾವೇರಿ ತಹಸೀಲ್ದಾರ್ ಶಂಕರ ಜಿ.ಎಸ್ ಅವರು ಹೇಳಿದ್ದಾರೆ.