ಹೈ ಕೋರ್ಟ್ ತೀರ್ಪು : ಸಾಮಾನ್ಯ ಕ್ಷೇತ್ರದಿಂದ ಗೆದ್ದರೂ ಅಧ್ಯಕ್ಷ ಹುದ್ದೆಗೆ ಮೀಸಲು ಅಡಿ ಸ್ಪರ್ಧೆ ತಪ್ಪಲ್ಲ

By Kannadaprabha News  |  First Published Nov 12, 2023, 8:39 AM IST

ಸಾಮಾನ್ಯಕ್ಕೆ ಮೀಸಲಾದ ಕ್ಷೇತ್ರದಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ವ್ಯಕ್ತಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ನಿಗದಿಪಡಿಸಿದ ಮೀಸಲು ಜಾತಿಗೆ ಸೇರಿದ್ದಲ್ಲಿ, ಆ ಚುನಾವಣೆಗೆ ಆತ ಮೀಸಲು ಅಡಿಯಲ್ಲೂ ಸ್ಪರ್ಧೆ ಮಾಡಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.


  ಬೆಂಗಳೂರು :  ಸಾಮಾನ್ಯಕ್ಕೆ ಮೀಸಲಾದ ಕ್ಷೇತ್ರದಿಂದ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ವ್ಯಕ್ತಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ನಿಗದಿಪಡಿಸಿದ ಮೀಸಲು ಜಾತಿಗೆ ಸೇರಿದ್ದಲ್ಲಿ, ಆ ಚುನಾವಣೆಗೆ ಆತ ಮೀಸಲು ಅಡಿಯಲ್ಲೂ ಸ್ಪರ್ಧೆ ಮಾಡಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.

ತುಮಕೂರು ಜಿಲ್ಲೆ ತಾಲೂಕಿನ ಕುನ್ನಲ ಗ್ರಾಮ ಪಂಚಾಯತ್ ಸದಸ್ಯೆ ಚೈತ್ರಾ ಎಂಬುವರು ಸಲ್ಲಿಸಿದ್ದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ ಈ ಆದೇಶ ನೀಡಿದೆ.

Latest Videos

undefined

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1992ರ ಸೆಕ್ಷನ್ 5ರ ಅಡಿಯಲ್ಲಿ ಗ್ರಾಮ ಪಂಚಾಯತಿ ಸ್ಥಾನಕ್ಕೆ ಮೀಸಲು ಕಲ್ಪಿಸಲಾಗುತ್ತದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅದೇ ಕಾಯ್ದೆಯ ಸೆಕ್ಷನ್ 44 ಅಡಿಯಲ್ಲಿ ಮೀಸಲು ಕಲ್ಪಿಸಲಾಗುತ್ತದೆ. ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಮೀಸಲು ಕಲ್ಪಿಸುವಾಗ ಆ ಗ್ರಾಮ ಪಂಚಾಯತಿಯ ಜನಸಂಖ್ಯೆಯನ್ನು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಕಲ್ಪಿಸುವಾಗ ಇಡೀ ರಾಜ್ಯದ ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ, ಈ ಎರಡೂ ಮೀಸಲು ನಿಯಮಗಳು ಒಂದಕ್ಕೊಂದು ವಿಭಿನ್ನವಾಗಿವೆ ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ಸೆಕ್ಷನ್‌ 5 ಅಡಿಯಲ್ಲಿ ಗ್ರಾಮ ಪಂಚಾಯತಿ ಸ್ಥಾನ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾದ ಸದಸ್ಯರು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ನಿಗದಿಪಡಿಸಿದ ಮೀಸಲು ಜಾತಿಗೆ ಸೇರಿದ್ದರೆ ಆ ಚುನಾವಣೆಗೆ ಅವರು ಮೀಸಲು ಕೋಟಾದಡಿ ಸ್ಪರ್ಧಿಸಲು ಅವಕಾಶವಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣವೇನು?:

ಅರ್ಜಿದಾರೆ ಚೈತ್ರಾ ಗುಬ್ಬಿ ತಾಲೂಕಿನ ಲಿಂಗಮ್ಮನಹಳ್ಳಿ ಗ್ರಾಮದ ನಿವಾಸಿ ಮತ್ತು ಮತದಾರರಾಗಿದ್ದಾರೆ. ಅವರ ಗ್ರಾಮವು ಕುನ್ನಲ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುತ್ತದೆ. ಆ ಪಂಚಾಯತಿಯಲ್ಲಿ 9 ವಾರ್ಡ್‌ಗಳಿದ್ದು, 21 ಜನ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಅವರು ಹಿಂದುಳಿದ ವರ್ಗ- ಬಿ ಪ್ರವರ್ಗಕ್ಕೆ (ಮಹಿಳೆ) ಮೀಸಲಾಗಿದ್ದ ಲಿಂಗಮ್ಮನಹಳ್ಳಿ-1 ಸ್ಥಾನದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಹಿಂದುಳಿದ ವರ್ಗ-ಬಿ ಪ್ರವರ್ಗಕ್ಕೆ ಸೇರಿದ ಕೆ.ಎಂ.ಆಶಾರಾಣಿ ಅವರು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ದೊಡ್ಡ ಕುನ್ನಲ ಸ್ಥಾನದಿಂದ ಸ್ಪರ್ಧಿಸಿ ಜಯಗಳಿಸಿದ್ದರು.

2023ರಲ್ಲಿ ಕುನ್ನಲ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ-ಬಿ (ಮಹಿಳೆ) ಪ್ರವರ್ಗಕ್ಕೆ ಮೀಸಲಿರಿಸಲಾಗಿತ್ತು. ಇದರಿಂದ ಆ ಜಾತಿಯ ಪ್ರಮಾಣ ಪತ್ರ ಪಡೆದುಕೊಂಡಿದ್ದ ಆಶಾರಾಣಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಅರ್ಜಿದಾರೆಯು, ಆಶಾ ರಾಣಿಯ ನಾಮಪತ್ರವನ್ನು ಉಪ ವಿಭಾಗಾಧಿಕಾರಿಯ ಮುಂದೆ ಪ್ರಶ್ನಿಸಿದ್ದರು. ಸಾಮಾನ್ಯ ವರ್ಗದಿಂದ ಆಯ್ಕೆಯಾಗಿರುವ ಅವರು, ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ-ಬಿ ಪ್ರವರ್ಗ(ಮೀಸಲು) ಕೋಟಾದಡಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಇದರಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಕ್ಕೆ ಆಶಾರಾಣಿಗೆ ಉಪ ವಿಭಾಗಾಧಿಕಾರಿ ನಿರ್ಬಂಧ ವಿಧಿಸಿದ್ದರು. ಆ ಆದೇಶವನ್ನು ಪ್ರಶ್ನಿಸಿ ಆಕೆ ಜಿಲ್ಲಾಧಿಕಾರಿಯ ಮೊರೆ ಹೋಗಿದ್ದರು. ಮೊದಲಿಗೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಆಶಾರಾಣಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿ ಮಧ್ಯಂತರ ಆದೇಶ ಮಾಡಿದ್ದರು. ಅದರಂತೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಶಾರಾಣಿ ಜಯ ಸಾಧಿಸಿದ್ದರು. ಜಿಲ್ಲಾಧಿಕಾರಿಗಳು 2023ರ ಆ.9ರಂದು ಅಂತಿಮ ಆದೇಶ ಹೊರಡಿಸಿ, ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವಾಗ ಮೀಸಲಾತಿ ಬದಲಾವಣೆ ಮಾಡಬಹುದು ಎಂದು ಹೇಳಿದ್ದರು.

ಈ ಆದೇಶ ಪ್ರಶ್ನಿಸಿ ಚೈತ್ರಾ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮತ್ತೊಂದೆಡೆ ಆಶಾ ರಾಣಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದು, ಅದು ಗುಬ್ಬಿಯಲ್ಲಿರುವ ಹಿರಿಯ ಸಿವಿಲ್‌ ತುಮಕೂರು ಸಿವಿಲ್‌ ಮತ್ತು ಜನಪ್ರತಿನಿಧಿ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣಾ ಹಂತದಲ್ಲಿದೆ. ಇದೀಗ ಹೈಕೋರ್ಟ್‌ ಈ ಮೇಲಿನಂತೆ ಆದೇಶಿಸಿದೆ.

ಜತೆಗೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಶಾರಾಣಿ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎನ್ನಲಾದ ಚೈತ್ರಾ ಅವರ ವಾದ ಪರಿಗಣಿಸಿರುವ ಹೈಕೋರ್ಟ್‌, ಜಾತಿ ಪರಿಶೀಲನಾ ಸಮಿತಿಯು ಆಶಾರಾಣಿ ಅವರಿಗೆ ವಿತರಿಸಿದ ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಿ 45 ದಿನಗಳಲ್ಲಿ ಸಿವಿಲ್‌ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿಚಾರವು ಚುನಾವಣಾ ತಕರಾರು ಅರ್ಜಿಯ ತೀರ್ಪಿಗೆ ಬದ್ಧವಾಗಿರುತ್ತದೆ. ಅದರಂತೆ ಜಾತಿ ಪ್ರಮಾಣ ಪತ್ರದ ಪರಿಶೀಲನಾ ವರದಿ ಸಲ್ಲಿಕೆಯಾಗುವರೆಗೂ ಚುನಾವಣಾ ತಕರಾರು ಅರ್ಜಿ ವಿಚಾರಣೆಯನ್ನು ಸಿವಿಲ್‌ ನ್ಯಾಯಾಲಯ ಮುಂದುವರಿಸಬಾರದು ಎಂದು ಆದೇಶಿಸಿದೆ.

click me!