ಬೆಂಗಳೂರು: ಪೌರಕಾರ್ಮಿಕರು, ದಲಿತ ಹೆಣ್ಣುಮಕ್ಕಳ ವಿವಾಹಕ್ಕೆ ಬಿಬಿಎಂಪಿಯಿಂದ 1 ಲಕ್ಷ ನೆರವು

By Kannadaprabha News  |  First Published Nov 12, 2023, 5:07 AM IST

ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ₹268.91 ಕೋಟಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ₹10 ಕೋಟಿ ಮೀಸಲಿಡಲಾಗಿದೆ. ಈ ಅನುದಾನದಲ್ಲಿ ನಗರದ ಪೌರಕಾರ್ಮಿಕರು ಮತ್ತು ಎಸ್ಸಿ, ಎಸ್ಟಿ ಸಮುದಾಯದ ಕುಟುಂಬದ ಒಂದು ಹೆಣ್ಣು ಮಗಳ ಸರಳ ವಿವಾಹದ ಖರ್ಚು-ವೆಚ್ಚಕ್ಕೆ ಬಿಬಿಎಂಪಿಯಿಂದ ₹1 ಲಕ್ಷ ಸಹಾಯಧನ ನೀಡಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ.


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ನ.11): ರಾಜಧಾನಿ ಬೆಂಗಳೂರಿನ ಪೌರಕಾರ್ಮಿಕರು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕುಟುಂಬದ ಓರ್ವ ಹೆಣ್ಣು ಮಗಳ ಸರಳ ವಿವಾಹಕ್ಕೆ ಬಿಬಿಎಂಪಿಯಿಂದ ₹1 ಲಕ್ಷ ಸಹಾಯಧನ ನೀಡುವ ಯೋಜನೆಗೆ ರಾಜ್ಯ ಸರ್ಕಾರದ ಅನುಮೋದನೆ ದೊರಕಿದ್ದು, ಶೀಘ್ರದಲ್ಲೇ ಜಾರಿಯಾಗಲಿದೆ.

Tap to resize

Latest Videos

ಬಿಬಿಎಂಪಿಯ 2023-24ನೇ ಸಾಲಿನ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ₹268.91 ಕೋಟಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ₹10 ಕೋಟಿ ಮೀಸಲಿಡಲಾಗಿದೆ. ಈ ಅನುದಾನದಲ್ಲಿ ನಗರದ ಪೌರಕಾರ್ಮಿಕರು ಮತ್ತು ಎಸ್ಸಿ, ಎಸ್ಟಿ ಸಮುದಾಯದ ಕುಟುಂಬದ ಒಂದು ಹೆಣ್ಣು ಮಗಳ ಸರಳ ವಿವಾಹದ ಖರ್ಚು-ವೆಚ್ಚಕ್ಕೆ ಬಿಬಿಎಂಪಿಯಿಂದ ₹1 ಲಕ್ಷ ಸಹಾಯಧನ ನೀಡಿ ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಬ್ರ್ಯಾಂಡ್‌ ಬೆಂಗಳೂರು ರಸ್ತೆಯಲ್ಲಿ ಮತ್ತೊಂದು ಮಹಾಗುಂಡಿ: ವಾಹನ ಸವಾರರೇ ಎಚ್ಚರ!

ಈ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಯ ಸೌಲಭ್ಯ ಪಡೆಯುವುದಕ್ಕೆ ಬಿಬಿಎಂಪಿಯ ಕಲ್ಯಾಣ ವಿಭಾಗದ ಮಾರ್ಗಸೂಚಿ ರಚನೆ ಮಾಡಿ ಅಂತಿಮ ಪಡಿಸಲಾಗಿದೆ. ಶೀಘ್ರದಲ್ಲಿ ಯೋಜನೆ ಜಾರಿ ಆದೇಶ ಹೊರಡಿಸಲಾಗುವುದು ಎಂದು ಕಲ್ಯಾಣ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಅರ್ಹತೆಗಳೇನು?: 

ಕನಿಷ್ಠ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂರು ವರ್ಷ ವಾಸವಿರಬೇಕು. 2023ರ ಏಪ್ರಿಲ್‌ 1ರ ನಂತರ ಮದುವೆ ಆಗಿರಬೇಕು. ಜಾತಿ ಪ್ರಮಾಣ ಪತ್ರ, ಆಧಾರ್‌ ಕಾರ್ಡ್, ಪಡಿತರ ಚೀಟಿ ಕಡ್ಡಾಯ ಹಾಗೂ ಪೌರಕಾರ್ಮಿಕರಾಗಿದ್ದರೆ ಗುರುತಿನ ಚೀಟಿ ಕಡ್ಡಾಯ. ಕುಟುಂಬದ ಆದಾಯ ₹3 ಲಕ್ಷ ಮೀರಿರಬಾರದು. ಪೌರಕಾರ್ಮಿಕರಿಗೆ ಆದಾಯ ಮಿತಿ ಅನ್ವಯವಿಲ್ಲ. ವಾಸಿ ದೃಢೀಕರಣಕ್ಕೆ ಮತದಾರ ಚೀಟಿ ಅಥವಾ ಬಾಡಿಗೆ ಮನೆಯ ಕರಾರು ಪತ್ರ, ಗ್ಯಾಸ್, ವಿದ್ಯುತ್ ಬಿಲ್‌ ಸಲ್ಲಿಸಬಹುದು. ಮದುವೆ ಆಮಂತ್ರಣ ಪತ್ರ ಸಲ್ಲಿಸುವುದು ಕಡ್ಡಾಯ. ವಿಧವಾ ವಿವಾಹ ಸೌಲಭ್ಯ ಪಡೆಯಬಹುದು. ಆದರೆ, ಈ ಹಿಂದೆ ಸೌಲಭ್ಯ ಪಡೆಯದಿದ್ದರೆ ವಿವಾಹ ನೋಂದಣಿ ಕಡ್ಡಾಯವಾಗಿದೆ. ವಧುವಿನ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಬಿಬಿಎಂಪಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸೌಲಭ್ಯಕ್ಕೆ ಆಯ್ಕೆ ವಿಧಾನ ಹೇಗೆ?

ವಲಯ ಮಟ್ಟದಲ್ಲಿ ಆಯ್ಕೆ ಸಮಿತಿ ರಚನೆ ಮಾಡಿ ಸೌಲಭ್ಯಕ್ಕೆ ಸಲ್ಲಿಕೆ ಮಾಡಿದ ಅರ್ಜಿ ಮಂಡಿಸಲಾಗುವುದು. ದಾಖಲೆಗಳನ್ನು ಸಲ್ಲಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಅರ್ಹ ದಾಖಲೆ ಸಲ್ಲಿಸದಿರುವ ಅರ್ಜಿ ತಿರಸ್ಕರಿಸಲಾಗುವುದು. ಅನುದಾನ ಲಭ್ಯತೆ ಆಧಾರದ ಮೇಲೆ ಸೌಲಭ್ಯ ವಿತರಿಸಲಾಗುವುದು. ಇಲ್ಲವೇ ಮುಂದಿನ ವರ್ಷ ಆಧ್ಯತೆಯ ಮೇರೆಗೆ ಪರಿಗಣಿಸುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

ಬೆಂಗಳೂರು ಸೈಟ್‌ ಮಾಲೀಕರೇ ಎಚ್ಚರ: ಪೊದೆ ಬೆಳೆಸಿಕೊಂಡ್ರೆ ದಂಡ ವಿಧಿಸುತ್ತೆ ಬಿಬಿಎಂಪಿ!

ಅಂತಿಮಗೊಳ್ಳದ ಫಲಾನುಭವಿಗಳ ಸಂಖ್ಯೆ

ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಪೌರಕಾರ್ಮಿಕರು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕುಟುಂಬದ ಓರ್ವ ಹೆಣ್ಣು ಮಗಳ ಸರಳ ವಿವಾಹಕ್ಕೆ ಬಿಬಿಎಂಪಿಯಿಂದ ₹1 ಲಕ್ಷ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸುವುದಕ್ಕೆ ಮುಂದಾಗಿದೆ. ಆದರೆ, ತಲಾ ₹1 ಲಕ್ಷ ಸಹಾಯಧನ ನೀಡಬೇಕಾಗಿದೆ. ಒಂದು ಆರ್ಥಿಕ ವರ್ಷದಲ್ಲಿ ಎಷ್ಟು ಮಂದಿಗೆ ಸೌಲಭ್ಯ ನೀಡಬೇಕು. ಎಷ್ಟು ಮೊತ್ತ ಅನುದಾನ ಮೀಸಲಿಡಲಾಗಿದೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಜತೆಗೆ ಬಿಬಿಎಂಪಿಯ ಎಂಟು ವಲಯಗಳ ಪೈಕಿ ಯಾವ ವಲಯಕ್ಕೆ ಎಷ್ಟು ಜನರಿಗೆ ಸೌಲಭ್ಯ ನೀಡುವುದು ಎಂಬುದರ ಬಗ್ಗೆಯೂ ಗೊಂದಲಗಳಿವೆ.

ಎಸ್ಸಿ-ಎಸ್ಟಿ ಹಾಗೂ ಪೌರಕಾರ್ಮಿಕರ ಸಂಘ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಸದ್ಯದಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುವುದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರ್ ಬಾಬು ತಿಳಿಸಿದ್ದಾರೆ.  

click me!