ಬಗರ್‌ಹುಕುಂ ಸಾಗುವಳಿದಾರರ ತೆರವು ವಿಚಾರ: ರೈತಪರ ಯಾವುದೇ ಕಾನೂನು ಹೋರಾಟಕ್ಕೆ ನಾನು ಸಿದ್ಧ: ಮಧು

By Kannadaprabha News  |  First Published Mar 25, 2023, 8:33 AM IST

ಒಂದು ಮರ ಬೆಳೆಸಲು ಹತ್ತಾರು ವರುಷ ಸಮಯ ತೆಗೆದುಕೊಳ್ಳುತ್ತದೆ. ಇದರ ಪರಿವೆಯೇ ಇಲ್ಲದೇ ಅಡಕೆ ಮರಗಳನ್ನು ನೆಲಸಮ ಮಾಡಿದ್ದಾರೆ. ಅಮೂಲ್ಯ ತೋಟ ಕಳೆದುಕೊಂಡ ರೈತರ ಮುಂದಿನ ಜೀವನಕ್ಕೆ ಯಾರು ಹೊಣೆ?


ಆನವಟ್ಟಿ (ಮಾ.25) : ಒಂದು ಮರ ಬೆಳೆಸಲು ಹತ್ತಾರು ವರುಷ ಸಮಯ ತೆಗೆದುಕೊಳ್ಳುತ್ತದೆ. ಇದರ ಪರಿವೆಯೇ ಇಲ್ಲದೇ ಅಡಕೆ ಮರಗಳನ್ನು ನೆಲಸಮ ಮಾಡಿದ್ದಾರೆ. ಅಮೂಲ್ಯ ತೋಟ ಕಳೆದುಕೊಂಡ ರೈತರ ಮುಂದಿನ ಜೀವನಕ್ಕೆ ಯಾರು ಹೊಣೆ?

ಹೀಗೆಂದು ಮಾಜಿ ಶಾಸಕ ಮಧು ಬಂಗಾ​ರಪ್ಪ(Madhu bangarappa) ಅವರು ಪೋನ್‌ ಕರೆ ಮಾಡಿ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ರೈತರ ಪರವಾಗಿ ಯಾವುದೇ ಕಾನೂನು ಹೋರಾಟಕ್ಕೆ ತಾವು ಸಿದ್ಧ ಎಂದು ರೈತರಿಗೆ ಭರವಸೆ ನೀಡಿದರು.

Tap to resize

Latest Videos

ರಕ್ತಕ್ರಾಂತಿ ಹೆಸರಿನಲ್ಲಿ ಶಾಂತಿ ಕದಡುತ್ತಿರುವ ಮಧು ಬಂಗಾರಪ್ಪ: ಕುಮಾರ ಬಂಗಾರಪ್ಪ ವಾಗ್ದಾಳಿ

ಆನವಟ್ಟಿಸಮೀಪದ ತಾಳಗುಪ್ಪದಲ್ಲಿ ಬಗರ್‌ಹುಕುಂ(Bagarhukum) ಸಾಗುವಳಿದಾರರನ್ನು ತೆರವುಗೊಳಿಸುವ ಹೆಸರಲ್ಲಿ ಸುಮಾರು 20 ಎಕರೆಗೂ ಹೆಚ್ಚು ಅಡಕೆ ತೋಟದಲ್ಲಿನ ಮರಗಳನ್ನು ನಿರ್ದಾಕ್ಷಣ್ಯವಾಗಿ ಕಡಿದಿರುವುದನ್ನು ಶುಕ್ರವಾರ ವೀಕ್ಷಣೆ ಮಾಡಿದ ಅವರು ರೈತರಿಗೆ ಸಾಂತ್ವನ ಹೇಳಿದರು.

ಅಡಕೆ ಮರ ಕಿತ್ತು ತೆಗೆಯಲು ಮುಂದಾದ ಅಧಿಕಾರಿಗಳನ್ನು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶ್ನೆ ಮಾಡಿದ್ದಾರೆ. ಆಗ ಅವರಿಗೆ ಗೌರವ ನೀಡದೇ ಅರಣ್ಯಾಧಿಕಾರಿಗಳು ಒದೆಯುವುದಕ್ಕೆ ಮುಂದಾಗುವುದು ಸರಿಯಲ್ಲ. ಸ್ವಾರ್ಥ ರಾಜಕಾರಣಕ್ಕಾಗಿ ತಾಲೂಕಿನ ರೈತರನ್ನು ಬಲಿ ಕೊಡಲಾಗುತ್ತಿದೆ. ತಾಲೂಕಿನಲ್ಲಿ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳಲ್ಲಿ ಮಾನವೀಯತೆ ಸತ್ತುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯಗಳು ರೈತರ ಪರವಾಗಿ ಮಾನವೀಯತೆಯಿಂದ ತೀರ್ಪು ನೀಡುತ್ತಿವೆ. ಆದರೆ ತಾಲೂಕಿನ ಶಾಸಕರು ಹಾಗೂ ಅಧಿಕಾರಿಗಳು ತಾವೇ ನ್ಯಾಯಾಧೀಶರಿಗಿಂತ ಹೆಚ್ಚೆಂದು ಭಾವಿಸಿ ರೈತರ ತೋಟಗಳನ್ನು ಹಾಳು ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಅರಣ್ಯ ವ್ಯಾಪ್ತಿಯನ್ನು ಗುರುತು ಮಾಡಲು ಅಗಳ (ಕಾಲುವೆ) ತೆಗೆಯುತ್ತೇವೆ ಎಂದು ಹೇಳಿ ಬಂದವರು ಏಕಾಏಕಿ ಜೆಸಿಬಿ ಹಾಗೂ ಮರ ಕತ್ತರಿಸುವ ಯಂತ್ರಗಳನ್ನು ತಂದು ಸಾವಿರಾರು ಅಡಕೆ ಮರಗಳನ್ನು ಧರೆಗುರುಳಿಸಿ ಹೀನ ಕೃತ್ಯ ಮೆರೆದಿದ್ದಾರೆ. ಆದರೆ ಅದೇ ವ್ಯಾಪ್ತಿಯ ಹಲಸಿನ ಮರಗಳು, ತೆಂಗಿನ ಮರಗಳು ಹಾಗೂ ಇನ್ನಿತರ ಬೆಲೆ ಬಾಳುವ ಮರಗಳನ್ನು ಬಿಟ್ಟು ಕೇವಲ ಅಡಕೆ ಮರಗಳನ್ನು ಗುರಿಯಾಗಿಟ್ಟುಕೊಂಡು ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ. ರೈತರನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸೊರ​ಬ​ದಲ್ಲಿ ಕುಮಾರ್‌ ಬಂಗಾರಪ್ಪ ಗೆಲ್ಲಿಸಿ: ಬಿ.ಎಸ್‌.ಯಡಿ​ಯೂ​ರ​ಪ್ಪ

ಕಳೆದ ವರ್ಷ ಗಂಡನನ್ನು ಕಳೆದುಕೊಂಡಿದ್ದೇನೆ. ಅರ್ಧ ಎಕರೆ ತೋಟ ನಮ್ಮ ಜೀವನಕ್ಕೆ ಆಸರೆಯಾಗಿತ್ತು. ಅಡಕೆ ಮರಗಳು ಧರೆಗೆ ಬೀಳುತ್ತಿದ್ದಂತೆ ನಮ್ಮ ಬದುಕು ಬರಡಾಗಿದೆ. ಮುಂದಿನ ನಮ್ಮ ಜೀವನದ ಪರಿಸ್ಥಿತಿಯನ್ನು ನೆನೆದರೇ ಜೀವ ಕಳೆದುಕೊಳ್ಳದೇ ಬೇರೆ ದಾರಿಯಿಲ್ಲ ಎಂದು ಮಾಜಿ ಶಾಸಕರ ಮುಂದೆ ಸಂತ್ರಸ್ತೆ ಗಂಗಮ್ಮ ಕಣ್ಣೀರು ಹಾಕಿ ಗೋಳಾಡಿದರು.

ಗೋಳು ಕೇಳಿದ ಮಧು ಬಂಗಾರಪ್ಪ ಅವ​ರು ನಿಮ್ಮ ಜೀವನಕ್ಕೆ ಬೇಕಾಗುವ ಸಹಾಯ ಮಾಡುತ್ತೇನೆ. ಈ ಕೃತ್ಯ ಎಸೆಗಿರುವವರ ಮೇಲೆ ಕಾನೂನು ಹೋರಾಟ ಮಾಡಿ ನ್ಯಾಯ ಒದಗಿಸುವುದಾಗಿ ಧೈರ್ಯ ತುಂಬಿದರು.

-ಕೆಪಿ24ಎವಿಟಿ1ಪಿ: ಆನವಟ್ಟಿಸಮೀಪದ ತಾಳಗುಪ್ಪದಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರೆದುರು ಅಡಕೆ ಮರಗಳನ್ನು ಕಳೆದುಕೊಂಡ ಸಂತ್ರಸ್ತೆ ಗಂಗಮ್ಮ ತಮ್ಮ ಅಳಲು ತೋಡಿಕೊಳ್ಳುತ್ತಿರುವುದು.

click me!