ಯಾವುದೇ ಒಂದು ಸಮುದಾಯ ಜಾಗತಿಕ ಮಟ್ಟದಲ್ಲಿ ತಮ್ಮನ್ನು ಗುರುತಿಸಬೇಕೆಂದರೆ, ಅದಕ್ಕೆ ಶಿಕ್ಷಣವೇ ಪೂರಕವಾದ ಅಂಶವಾಗಿದ್ದು, ನೇಕಾರರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಾಂಗದತ್ತ ಗಮನಹರಿಸುವಂತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ತುಮಕೂರು (ನ.14): ಯಾವುದೇ ಒಂದು ಸಮುದಾಯ ಜಾಗತಿಕ ಮಟ್ಟದಲ್ಲಿ ತಮ್ಮನ್ನು ಗುರುತಿಸಬೇಕೆಂದರೆ, ಅದಕ್ಕೆ ಶಿಕ್ಷಣವೇ ಪೂರಕವಾದ ಅಂಶವಾಗಿದ್ದು, ನೇಕಾರರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಾಂಗದತ್ತ ಗಮನಹರಿಸುವಂತೆ ಮಾಡಬೇಕೆಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ನಗರದ ಮಹಾವೀರ ಭವನದಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಮತ್ತು ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ನೇಕಾರರ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮುದಾಯದಲ್ಲಿ ಹೆಚ್ಚು ಹೆಚ್ಚು ಜನ ವಿದ್ಯಾವಂತರಾದಂತೆ, ಅವರ ಅರ್ಥಿಕ, ಸಾಮಾಜಿಕ ಸ್ಥಿತಿಗತಿಯೂ ಬದಲಾಗಲಿದೆ. ಹಾಗಾಗಿ ಎಲ್ಲರೂ ಶಿಕ್ಷಣದತ್ತ ಗಮನಹರಿಸಬೇಕೆಂದರು.
undefined
ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಇದುವರೆಗೂ ಒಂದು ಅಭಿವೃದ್ಧಿ ನಿಗಮ ಇಲ್ಲದಿರುವುದು ಶೋಚನೀಯ. ನಿಗಮಗಳ ಸ್ಥಾಪನೆಯಿಂದ ಸರ್ಕಾರದಿಂದ ಜನಾಂಗದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುತ್ತದೆ. ಆ ಅನುದಾನವನ್ನು ಶೈಕ್ಷಣಿಕ ಮತ್ತು ಅರ್ಥಿಕ ಅಭಿವೃದ್ಧಿಗೆ ವಿನಿಯೋಗಿಸಿದರೆ ಸಮುದಾಯವನ್ನು ಬಲಿಷ್ಠಗೊಳಿಸಲು ಸಾಧ್ಯ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ನಾವು ಸಹ ನಿಮ್ಮೊಂದಿಗೆ ಇರುತ್ತೇವೆ ಎಂದರು.
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ಮಾತನಾಡಿ, 11 ವರ್ಷಗಳ ಹಿಂದೆ ಆರಂಭವಾದ ನಮ್ಮ ಸಂಘಟನೆ ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಆಸ್ಥಿತ್ವದಲ್ಲಿದೆ. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರವಾರು ಸಂಘಟಿಸುವ ಗುರಿಯನ್ನು ಒಕ್ಕೂಟ ಹೊಂದಿದೆ ಎಂದರು.
ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ, ನೇಕಾರರೆಂದರೆ ಕೇವಲವಾಗಿ ಕಾಣುತ್ತಿದ್ದ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಆಗಸ್ಟ್ 7ನೇ ತಾರೀಕನ್ನು ನೇಕಾರ ದಿವಸ್ ಎಂದು ಘೋಷಿಸಿದ ನಂತರ ಸಮುದಾಯದಲ್ಲಿ ಒಂದು ರೀತಿಯ ಸಂಚಲನ ಮೂಡಿದೆ. ಇಂದು ದೇಶದಲ್ಲಿ ಹಾರಾಡುತ್ತಿರುವ ರಾಷ್ಟ್ರಧ್ವಜವನ್ನು ರೂಪಿಸಿಕೊಟ್ಟವರು ನಾವು ಎಂಬ ಹೆಮ್ಮೆ ನಮಗಿದೆ. ಸರ್ಕಾರ ನೇಕಾರರು, ರೈತರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದೆ. ಆದರೆ ರೈತರಿಗೆ ನೀಡಿದಂತೆ ಉಚಿತ ವಿದ್ಯುತ್, ಸಾಲ ಮನ್ನಾ ಯೋಜನೆ ನಮ್ಮಗಿಲ್ಲ. ಸರ್ಕಾರ ನೆರೆಯ ಆಂಧ್ರ, ತಮಿಳುನಾಡು ಸರ್ಕಾರದಂತೆ ನೇಕಾರರಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್, ಸಾಲಮನ್ನಾ ಯೋಜನೆ, ನೇಕಾರರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಪ್ರಭಾವತಿ, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಪಾಲಿಕೆ ಸದಸ್ಯರಾದ ಗಿರಿಜಾ ಧನಿಯಕುಮಾರ್, ಬಲಿಜ ಸಮಾಜದ ಟಿ.ಆರ್.ಅಂಜನಪ್ಪ, ಈಡಿಗ ಸಮಾಜದ ಜೆ.ಪಿ.ಶಿವಣ್ಣ, ಆರ್ಯವೈಶ್ಯ ಸಮಾಜದ ನಟರಾಜು, ಪಿ.ಎನ್.ರಾಮಯ್ಯ, ನೇಕಾರರ ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಆರ್.ರಾಮಕೃಷ್ಣಯ್ಯ, ಉಪಾಧ್ಯಕ್ಷ ಎನ್.ವೆಂಕಟೇಶ್, ಕರಿಯಪ್ಪ, ಟಿ.ರೇವಣ್ಣಕುಮಾರ್, ಯೋಗಾನಂದ್, ಅನಿಲ್‌ಕುಮಾರ್, ಬಿ.ಎಲ್.ರವೀಂದ್ರಕುಮಾರ್, ಗೌರವಾಧ್ಯಕ್ಷ ಟಿ.ಎಚ್. ಶಿವಾನಂದ್, ಚೌಡಪ್ಪ, ಎಸ್.ವಿರೂಪಾಕ್ಷಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ 250ಕ್ಕೂ ಹೆಚ್ಚು ನೇಕಾರ ಸಮುದಾಯಕ್ಕೆ ಸೇರಿದ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು.
ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಇದೆ ಎಂದು ಹೇಳುವ ನೇಕಾರರ ಅಭಿವೃದ್ಧಿಗೆ ಇದುವರೆಗೂ ಒಂದು ಅಭಿವೃದ್ಧಿ ನಿಗಮ ಆಗದಿರುವುದು ವಿಷಾದದ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿರುವಂತೆ, ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್ ಅವರ ಒತ್ತಾಯದ ಮೇರೆಗೆ ಶೀಘ್ರದಲ್ಲಿಯೇ ಅಭಿವೃದ್ಧಿ ನಿಗಮ ಸ್ಥಾಪನೆಯಾಗಲಿದೆ. ಈ ನಿಟ್ಟಿನಲ್ಲಿ ನಾವು ಕೂಡ ನಿಮ್ಮ ಒತ್ತಾಯಕ್ಕೆ ಕೈಜೋಡಿಸುತ್ತೇವೆ.
ಜಿ.ಬಿ.ಜ್ಯೋತಿಗಣೇಶ್ ಶಾಸಕ
ರಾಜ್ಯದಲ್ಲಿರುವ ಸುಮಾರು 1467 ಜಾತಿಗಳಲ್ಲಿ ಪ್ರವರ್ಗ 1ರಲ್ಲಿನ 102 ಮತ್ತು ಪ್ರವರ್ಗ 2ರಲ್ಲಿನ 95 ಹಿಂದುಳಿದ ಜಾತಿಗಳಲ್ಲಿ, ಸುಮಾರು 27 ಜಾತಿಗಳು ನೇಕಾರರ ಸಮುದಾಯಕ್ಕೆ ಸೇರಿವೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಕುಲಕಸುಬುಗಳನ್ನಾಧರಿಸಿದ, ಜಾತಿಗಳನ್ನು ಒಂದು ವೇದಿಕೆಗೆ ತಂದು, ಸುಮಾರು 75 ಕೋಟಿ ರು.ಗಳನ್ನು ಅನುದಾನವನ್ನು ನೀಡಿದ್ದರು. ಆ ನಂತರದಲ್ಲಿ ನೇಕಾರ ಸಮುದಾಯಕ್ಕೆ ಅಂತಹ ಸಹಾಯ, ಸಹಕಾರ ಸರ್ಕಾರಗಳಿಂದ ಸಿಕ್ಕಿಲ್ಲ.
ಎಂ.ಡಿ.ಲಕ್ಷ್ಮೀನಾರಾಯಣ್ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ