'ಜನರಿಗೆ ದ್ರೋಹ ಮಾಡಿದ ಮೋದಿ ಸರ್ಕಾರ, ಅಚ್ಚೇ ದಿನ್‌ ಯಾರಿಗೆ ಬಂದಿದೆ?'

Kannadaprabha News   | Asianet News
Published : Mar 12, 2021, 03:39 PM ISTUpdated : Mar 12, 2021, 03:43 PM IST
'ಜನರಿಗೆ ದ್ರೋಹ ಮಾಡಿದ ಮೋದಿ ಸರ್ಕಾರ, ಅಚ್ಚೇ ದಿನ್‌ ಯಾರಿಗೆ ಬಂದಿದೆ?'

ಸಾರಾಂಶ

ಸಿಡಿ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದ ಸಮತಿಯಿಂದ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಗೆ ಬರಲಿದೆ| ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರುವುದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಬಹಳಷ್ಟು ಜನರು ಕಾಂಗ್ರೆಸ್‌ ಸಂಪರ್ಕದಲ್ಲಿ: ಈಶ್ವರ ಖಂಡ್ರೆ|

ಯಾದಗಿರಿ(ಮಾ.12): ಬಿಜೆಪಿ ಸರ್ಕಾರ ಬಂದ ಮೇಲೆ ಯಾವುದೇ ನೀರಾವರಿ, ರಸ್ತೆ ಕಾಮಗಾರಿ ಘೋಷಣೆಯಾಗಿಲ್ಲ, ಈ ಹಿಂದೆ ಘೋಷಣೆಯಾಗಿದ್ದ ಯೋಜನೆಗಳನ್ನು ತಡೆ ಹಿಡಿಯಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತದ ಘೋರ ಪರಿಣಾಮ ದೇಶದ ಜನರ ಮೇಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ. 

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ 7500 ಕೋಟಿ ರು.ಗಳ ಅನುದಾನ ಬಿಡುಗಡೆ ಅದರಲ್ಲಿ 5000 ರು.ಗಳ ಕೋಟಿಯಲ್ಲಿ ಕಾಮಗಾರಿಗಳು ನಡೆದಿವೆ. ಕೆಕೆಆರ್‌ಡಿಬಿ ಅಡಿಯಲ್ಲಿ 1136 ಕೋಟಿ ರು.ಗಳು ಮಾತ್ರ ಬಿಡುಗಡೆಯಾಗಿದೆ. ಈ ಬಾರಿಯ ಕಾಮಗಾರಿಗೆ ನಯಾಪೈಸೆ ಖರ್ಚಾಗಿಲ್ಲ, ಈ ಹಿಂದೆ ಪ್ರಾರಂಭವಾಗಿರುವ ಕಾಮಗಾರಿಗಳನ್ನ ತಮ್ಮದು ಎಂದು ಬಿಂಬಿಸಲಾಗುತ್ತಿದೆ. ಇದು ಕಲ್ಯಾಣ ಕರ್ಣಾಟಕಕ್ಕೆ ಭಾಗಕ್ಕೆ ಮಾಡಿದ ಅನ್ಯಾಯ ಎಂದು ಖಂಡ್ರೆ ಬಿಜೆಪಿ ಸರ್ಕಾರಗಳನ್ನು ಟೀಕಿಸಿದ್ದಾರೆ.

ಶೇ. 40-50 ಹುದ್ದೆಗಳು ಖಾಲಿಯಿವೆ. ನಮ್ಮ ಸರ್ಕಾದಲ್ಲಿ ಹುದ್ದೆ ತುಂಬಲಾಗಿತ್ತು. ಈ ಸರ್ಕಾರ ಬಂದ ಮೇಲೆ ಕೊರೋನಾ ನೆಪವೊಡ್ಡಿ ಖಾಲಿ ಹುದ್ದೆ ತುಂಬಲಾಗಿಲ್ಲ. ಈ ಭಾಗದ ಯುವಕರು ಉದ್ಯೋಗ ಹೊಂದುವ ಆಸೆಗೆ ತಣ್ಣೀರು ಎರಚಲಾಗಿದೆ. ಸಿಲೆಂಡರ್‌ ಬೆಲೆ ದುಪ್ಪಟ್ಟಾಗಿದೆ. ರೈತರ ಆದಾಯ 2014 ರಲ್ಲಿ ಇದ್ದಷ್ಟೆ ಇದೆ. ಪೆಟ್ರೋಲ್‌ ಬೆಲೆ 100 ರು.ಗಳ ಹಾಗೂ ಡಿಸೆಲ್‌ ಬೆಲೆ 80 ದಾಟಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿದೆ. ದೇಶದ ಜನರೇ ಹೋರಾಟ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ ಎಂದ ಅವರು, 120 ಡಾಲರ್‌ ಗೆ ಒಂದು ಬ್ಯಾರೆಲ್‌ ಇದ್ದಾಗ ಆಗ ಪೆಟ್ರೋಲ್‌ ಬೆಲೆ 50 ರು.ಗಳು ಇತ್ತು. ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಅದರ ಅರ್ಧದಷ್ಟಿದ್ದರೂ ಬೆಲೆ ಮಾತ್ರ ಇಳಿದಿಲ್ಲ. ಇದು ಜನರಿಗೆ ಹೊರೆಯಾಗುತ್ತಿದೆ ಎಂದರು.

ಯಾದಗಿರಿ: ಕಲ್ಲು ಕ್ವಾರಿ ಮೇಲೆ ದಾಳಿ, ಸ್ಫೋಟಕ್ಕೆ ಬಳಸುವ 750 ಕೆಜಿ‌ ಬೂಸ್ಟರ್‌ ಜಪ್ತಿ

ಮಾಧ್ಯಮಗಳು ಮಾರಾಟವಾಗಿವೆ: ಖಂಡ್ರೆ ಖೇದ

ರೈತರ ಹೋರಾಟಕ್ಕೆ ನೂರು ದಿನಗಳು ತುಂಬಿದೆ. ಕೃಷಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್‌ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಧ್ವನಿ ಎತ್ತಿದೆ. ಬಿಜೆಪಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಆರ್ಥಿಕತೆ ಕುಸಿದಿದೆ. ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. 2.2% ಮಾತ್ರ ಅಂದು ನಿರುದ್ಯೋಗ. ಇಂದು ಅದು 7-8% ಗೆ ಏರಿದೆ. ಇದು ಜನರಿಗೆ ಮಾಡಿದ ದ್ರೋಹ. ಅಚ್ಚೇ ದಿನ್‌ ಯಾರಿಗೆ ಬಂದಿದೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅನೈತಿಕ ಸರ್ಕಾರ ಬಂದಿದೆ. ಆಡಳಿತ ಯಂತ್ರ ಕುಸಿದಿದೆ. ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ವರ್ಗಾವಣೆ ದಂಧೆ ಜೋರಾಗಿದೆ. ಜನರು ಪಶ್ಚಾತಾಪ ಪಡುತ್ತಿದ್ದಾರೆ. ಬಸವ ಕಲ್ಯಾಣ, ಮಸ್ಕಿ, ಸಿಂದಗಿಯಲ್ಲಿ ವಿಧಾನಸಭೆಗೆ ಉಪಚುನಾವಣೆ ಹಾಗೂ ಬೆಳಗಾವಿಯಲ್ಲಿ ಲೋಕಸಭೆ ಉಪಚುನಾವಣೆ ನಡೆಯಲಿದೆ. ಬಿಜೆಪಿಯ ನಿಜಬಣ್ಣ ಬಯಲಾಗಿದೆ. ಅವರು ಒಂದು ಸಲ ಎರಡು ಸಲ ಮೋಸ ಮಾಡಬಹುದು ಮೂರನೇ ಸಲ ಸಾಧ್ಯವಿಲ್ಲ. ಎಲ್ಲ ಉಪಚುನಾಚಣೆ ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಭದ್ರಾವತಿ ಶಾಸಕ ಸಂಗಮೇಶ್‌ ಹಾಗೂ ಅವರ ಮನೆಯವರ ಮೇಲೆ 307 ಅಡಿಯಲ್ಲಿ ಕೇಸು ದಾಖಲಾಗಿದೆ. ಶಿವಮೊಗ್ಗದಲ್ಲಿ ಮಾ.13 ರಂದು ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟ ನಡೆಸಲಿದೆ.

ಇನ್ನು, ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರುವುದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಬಹಳಷ್ಟು ಜನರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ ಬಿಟ್ಟು ಹೋದವರು ಮತ್ತೆ ಬಂದರೆ ಅವರನ್ನು ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಯ ಮುಂದೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಖಂಡ್ರೆ ಹೇಳಿದರು.

ಸಿಡಿ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು, ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದ ಸಮತಿಯಿಂದ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದ ಅವರು, ರೈತರ ಹೋರಾಟದ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿಲ್ಲ. ಮಾಧ್ಯಮಗಳು ಮಾರಾಟವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಮಾಜಿ ಎಂಎಲ್‌ಸಿ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು, ಶ್ರೀನಿವಾಸ ರೆಡ್ಡಿ ಕಂದಕೂರು, ಡಿಸಿಸಿ ಅಧ್ಯಕ್ಷ ಮರಿಗೌಡ ಹುಲ್ಕಲ್‌, ಎ.ಸಿ. ಕಾಡ್ಲೂರು, ಮಾಣಿಕರೆಡ್ಡಿ ಕುರಕುಂದಿ, ಲಾಯತ್‌ ಹುಸೇನ್‌ ಬಾದಲ್‌, ಸುದರ್ಶನ್‌ ನಾಯಕ್‌, ಬಸು ಬಿಳ್ಹಾರ, ಗಣೇಶ್‌ ದುಪ್ಪಲ್ಲಿ, ಮಹಿಪಾಲರೆಡ್ಡಿ ಪಾಟೀಲ್‌, ಹಣಮೇಗೌಡ ಮರಕಲ್‌ ಮುಂತಾದವರಿದ್ದರು.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ