
ಬೆಂಗಳೂರು : ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗಾಳಿ, ಮಳೆಗೆ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿ ಹಾನಿಯಾಗುತ್ತಿದ್ದು, ಅದನ್ನು ತಪ್ಪಿಸಲು ಅಪಾಯಕಾರಿ ಮರ ಗುರುತಿಸಿ ಅವುಗಳ ಕೊಂಬೆ ಕತ್ತರಿಸಲು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.
ಬೆಂಗಳೂರು ದಂಡು ಪ್ರದೇಶದಲ್ಲಿ ಶುಕ್ರವಾರ ರಸ್ತೆ ಬದಿಯ ಮರದ ಸುತ್ತಲೂ ಹಾಕಲಾಗಿದ್ದ ಕಾಂಕ್ರೀಟ್ ತೆರವು ಮಾಡುವ ಮೂಲಕ ವೃಕ್ಷಗಳ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಳೆ, ಗಾಳಿಗೆ ಒಣಗಿದ ಮತ್ತು ಟೊಳ್ಳು ಮರಗಳು ಧರಾಶಾಯಿಯಾಗುತ್ತಿರುವುದು ಹೆಚ್ಚುತ್ತಿದೆ. ಅದಕ್ಕೆ ಪ್ರಮುಖವಾಗಿ ಬೇರಿಗೆ ನೀರು ಇಳಿಯದಂತೆ ಕಾಂಕ್ರೀಟ್, ಕಲ್ಲಿನ ಚಪ್ಪಡಿ, ಟೈಲ್ಸ್ ಅಳವಡಿಸಿರುವುದೇ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವೂ ಈ ಬಗ್ಗೆ ತೀರ್ಪು ನೀಡಿ, ಮರಗಳ ಸುತ್ತಲಿನ ಕಾಂಕ್ರೀಟ್, ಕಲ್ಲು, ಟೈಲ್ಸ್‌ಗಳ ತೆರವಿಗೆ ಸೂಚಿಸಿದೆ. ಅದರಂತೆ ವೃಕ್ಷ ಸಂರಕ್ಷಣಾ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಮರಗಳ ಬೆಳವಣಿಗೆಗೆ ತಡೆಯಾಗುವ ನಿರ್ಮಾಣಗಳನ್ನು ತೆರವು ಮಾಡುವಂತೆ ಬಿಬಿಎಂಪಿ ವಿಶೇಷ ಆಯುಕ್ತರಿಗೂ ಸೂಚಿಸಲಾಗಿದೆ. ಇನ್ನು ಮುಂದೆ ರಸ್ತೆ ಬದಿ ಸಸಿ ನೆಡುವಾಗ ಒಂದು ಮೀಟರ್ ಸುತ್ತಳತೆಯಲ್ಲಿ ಯಾವುದೇ ನಿರ್ಮಾಣ ಇರದಂತೆ ಖಾತ್ರಿ ಪಡಿಸಿಕೊಳ್ಳುವಂತೆಯೂ ನಿರ್ದೇಶಿಸಲಾಗಿದೆ. ಅದರ ಜತೆಗೆ ಇತ್ತೀಚೆಗೆ ಮರದ ಕೊಂಬೆ ಬಿದ್ದು ಅಕ್ಷಯ್ ಎಂಬ ಯುವಕ ಮೃತಪಟ್ಟಿದ್ದಾರೆ. ಅದು ಪುನರಾವರ್ತನೆಯಾಗದಂತೆ ತಡೆಯಲು, ಅಪಾಯಕಾರಿ ಮರ ಗುರುತಿಸಿ ಅವುಗಳ ಕೊಂಬೆ ಕತ್ತರಿಸಬೇಕು ಎಂದು ತಿಳಿಸಲಾಗಿದೆ ಎಂದರು.
2041 ಎಕರೆ ಒತ್ತುವರಿ:
ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 2,041 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಆ ಪೈಕಿ ಕಳೆದೊಂದು ವರ್ಷದಲ್ಲಿ 4 ಸಾವಿರ ಕೋಟಿ ರು. ಮೌಲ್ಯದ 128 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ. ಉಳಿದ ಒತ್ತುವರಿಯನ್ನು ಹಂತಹಂತವಾಗಿ ತೆರವು ಮಾಡಲಾಗುವುದು ಎಂದು ಖಂಡ್ರೆ ತಿಳಿಸಿದರು.
ರೈಲ್ವೆ ಕಾಲೋನಿಯಲ್ಲಿ 368 ಮರ ಕಡಿಯದಂತೆ ಮನವಿ:
ನಗರದ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೋನಿಯಲ್ಲಿ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ 368 ಮರ ಕಡಿಯಲು ರೈಲ್ವೆ ಇಲಾಖೆ ನಿರ್ಧಾರಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ನೀಡದಂತೆ ಸ್ಥಳೀಯರು ಮತ್ತು ಪರಿಸರವಾದಿಗಳು ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು. ಜತೆಗೆ ದಂಡು ಪ್ರದೇಶದಲ್ಲಿ ಬೃಹದಾಕಾರದ ವಿವಿಧ ಜಾತಿಯ ಮರಗಳಿದ್ದು, ಇದನ್ನು ಜೀವವೈಧ್ಯತೆಯ ಪಾರಂಪರಿಕ ತಾಣವಾಗಿ ಘೋಷಿಸಬೇಕು ಎಂದು ಕೋರಿದರು. ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ಈ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಒಳ್ಳಲಾಗುವುದು ಭರವಸೆ ನೀಡಿದರು.