
ಬೆಂಗಳೂರು: ನಗರದಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಅಪಘಾತಗಳು ಮರುಕಳಿಸುತ್ತಿರುವ ನಡುವೆ ಮತ್ತೊಂದು ದುರ್ಘಟನೆ ಸಂಭವಿಸಿದ್ದು, ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವುದು ಆತಂಕ ಮೂಡಿಸಿದೆ.
ಉತ್ತರಹಳ್ಳಿ ಮುಖ್ಯ ರಸ್ತೆಯ ಶ್ರೀನಿವಾಸಪುರ ಕ್ರಾಸ್ ಸಮೀಪ ಈ ಘಟನೆ ನಡೆದಿದ್ದು, ಸಿರಿಶಾ (21) ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಘಟನೆಯಲ್ಲಿ ಮೃತಪಟ್ಟಿದ್ದಾಳೆ. ಸಿರಿಶಾ ಪ್ರಯಾಣಿಸುತ್ತಿದ್ದ ಬೈಕ್ ಮತ್ತು ಬಿಎಂಟಿಸಿ ಬಸ್ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದರು. ಈ ವೇಳೆ ಬೈಕ್‌ನ ಹ್ಯಾಂಡಲ್ ಬಸ್‌ಗೆ ತಾಗಿದ ಪರಿಣಾಮ, ನಿಯಂತ್ರಣ ತಪ್ಪಿ ಸಿರಿಶಾ ರಸ್ತೆಗೆ ಬಿದ್ದಿದ್ದಾರೆ.
ಅದಾದ ನಂತರ, ಹಿಂಬದಿಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಘಟನೆಯ ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಸ್ ಚಾಲಕ ಚಂದ್ರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟಿನಲ್ಲಿ, ನಗರದಲ್ಲಿ ನಡೆಯುತ್ತಿರುವ ಇಂತಹ ಅಪಘಾತಗಳು ಸಾರ್ವಜನಿಕರಲ್ಲಿ ಭದ್ರತೆ ಕುರಿತು ಆತಂಕ ಹೆಚ್ಚಿಸುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕ ಸಾರಿಗೆ ಚಾಲಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂಬ ಅಗತ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳುತ್ತಿವೆ.