ಕೆಸರಿನಿಂದ ರಕ್ಷಿಸಿದ್ದ ಆನೆ ಸಾವು: ಮರಿಯಾನೆ ಅಳಲು

Published : Nov 30, 2018, 09:45 AM IST
ಕೆಸರಿನಿಂದ ರಕ್ಷಿಸಿದ್ದ ಆನೆ ಸಾವು: ಮರಿಯಾನೆ ಅಳಲು

ಸಾರಾಂಶ

ಭಾನುವಾರ ರಾತ್ರಿ ಏಲಕ್ಕಿ ತೋಟಕ್ಕೆ ತನ್ನ ಮರಿಯೊಂದಿಗೆ ನುಗ್ಗಿ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಹೆಣ್ಣಾನೆಯನ್ನು ರಕ್ಷಿಸಲಾಗಿತ್ತು. ಆದರೀಗ ಇದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಹಾಸನ[ನ.30]: ಕೆಸರಿನಿಂದ ರಕ್ಷಿಸಲ್ಪಟ್ಟಿದ್ದ ಹೆಣ್ಣಾನೆ, ವೈದ್ಯರ ಚಿಕಿತ್ಸೆ ಫಲಿಸದೆ ಗುರುವಾರ ಮುಂಜಾನೆ ಕೊನೆಯುಸಿರೆಳೆದಿದೆ. ಇನ್ನು ತಾಯಿಯ ಸಾವಿನಿಂದ ಕಂಗೆಟ್ಟ 6 ತಿಂಗಳ ಮರಿಯಾನೆ, ಅಮ್ಮನ ಮೃತದೇಹವನ್ನು ಬಿಡದೆ ಸತತವಾಗಿ ರೋದಿಸಿದ ದೃಶ್ಯ ಮನಕಲಕುವಂತಿತ್ತು.

ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಗ್ರಾಮದ ಸಮೀಪದ ಏಲಕ್ಕಿ ತೋಟವೊಂದಕ್ಕೆ ಭಾನುವಾರ ರಾತ್ರಿ, ತನ್ನ ಮರಿಯೊಂದಿಗೆ ನುಗ್ಗಿದ್ದ ಹೆಣ್ಣಾನೆ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಬಳಿಕ ಅದರ ಎಡಗಾಲಿನ ಮೂಳೆ ಮುರಿದಿರುವುದು ಹಾಗೂ ಬಲಗಣ್ಣು ಕುರುಡಾಗಿರುವುದು ಬೆಳಕಿಗೆ ಬಂದಿತ್ತು. ಕೊನೆಗೆ ಸತತ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳು ಹಾಗೂ ಹಿಟಾಚಿ ಯಂತ್ರ ಬಳಸಿ ಆನೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಕಾಲಿನ ಮೂಳೆ ಮುರಿತಗೊಂಡಿದ್ದರ ಪರಿಣಾಮ ಆನೆ ನಿತ್ರಾಣಗೊಂಡಿತ್ತು. ಆದಕಾರಣ ರಕ್ಷಣೆ ಮಾಡಿದ ಸ್ಥಳದ ಸಮೀಪವೇ ಆನೆಗೆ ಸತತವಾಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಗುರುವಾರ ಮುಂಜಾನೆ ಸುಮಾರು 35 ವರ್ಷದ ಹೆಣ್ಣಾನೆ ಕೊನೆಯುಸಿರೆಳೆದಿದೆ.

ಇದೀಗ ಅಮ್ಮನ ಅಗಲುವಿಕೆಯಿಂದ ಅನಾಥವಾಗಿರುವ ಮರಿಯಾನೆಯನ್ನು ಸಕ್ಕರೆಬೈಲು ಶಿಬಿರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅಧಕಾರಿಗಳು ಹೇಳಿದ್ದಾರೆ.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ