ಹೆಣ್ಣಾ​ನೆಯ ಸಾಮೀ​ಪ್ಯಕ್ಕಾಗಿ ಹಾತೊರೆಯುತ್ತಿರುವ ಮದ​ವೇ​ರಿದ ಗಜ​ಗ​ಳು..!

By Kannadaprabha News  |  First Published Mar 12, 2021, 1:02 PM IST

ರಸ್ತೆಗೆ ಇಳಿ​ಯಲು ಹೆದ​ರು​ತ್ತಿ​ರುವ ಜನ​ತೆ| ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪಣ​ಸೋಲಿ ಪ್ರದೇ​ಶ​| ಸಫಾರಿ ಕ್ಯಾಂಪ್‌ ಹೆಣ್ಣಾನೆ ಸ್ಥಳಾಂತ​ರಿ​ಸ​ದಿ​ದ್ದರೆ ಪ್ರತಿ​ಭ​ಟನೆ ಬೆದ​ರಿ​ಕೆ| ಅನಾಹುತಕ್ಕೆ ಇಲಾಖೆಯೇ ಹೊಣೆ| 


ಜೋಯಿಡಾ(ಮಾ.12): ತಾಲೂಕಿನ ಪಣಸೋಲಿ ಸಫಾರಿ ಏರಿಯಾದಲ್ಲಿರುವ ಅರಣ್ಯ ಇಲಾಖೆಯ ಸಫಾರಿ ಕ್ಯಾಂಪ್‌ನ ಹೆಣ್ಣಾನೆಯ ಸಹವಾಸ ಬಯಸಿ ಕಾಡಿನ ಮದವೇರಿದ ಗಜಗಳು ಪಣಸೋಲಿ ಸುತ್ತಲ ಕಾಡಿನಲ್ಲಿ ಓಡಾಡಿಕೊಂಡಿದೆ. ಮದವೇರಿದ ಆನೆಯ ಭಯದಲ್ಲಿ ರಸ್ತೆಗಿಳಿಯಲು ಜನ ಭಯಭೀತರಾಗಿದ್ದು, ಕೂಡಲೇ ಸಫಾರಿ ಆನೆಗಳನ್ನು ಸ್ಥಳಾಂತರಿಸಿ ಇಲ್ಲವೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿರುತ್ತಾರೆ.

ಬೇಸಿಗೆಯ ಈ ದಿನಮಾನದಲ್ಲಿ ಗಂಡಾನೆಗಳು ಮದವೇರುವುದು ಸಹಜ ಪ್ರಕೃತಿಯಾಗಿದ್ದು, ಹೆಣ್ಣಾನೆಯ ಸಹವಾಸಕ್ಕಾಗಿ ಹಾತೊರೆಯುತ್ತಿವೆ. ಇದೆ ರೀತಿಯ ಮದವೇರಿದ ಗಂಡಾನೆ ಕಳೆದ ಒಂದು ವಾರದಿಂದ ಪಣಸೋಲಿ ಆನೆ ಕ್ಯಾಂಪ್‌ ಬಳಿಯ ಹೆಣ್ಣಾನೆಯ ಹತ್ತಿರ ಬರುತ್ತಿದ್ದು, ಜನರನ್ನು ಕಂಡರೆ ಓಡಿಸಿಕೊಂಡು ಬರುತ್ತಿವೆ. ಸ್ಥಳೀಯರಲ್ಲಿ ಜೀವ ಭಯದ ವಾತಾವರಣ ನಿರ್ಮಾಣಗೊಂಡಿದೆ. ಪಣಸೋಲಿ ಕ್ಯಾಂಪ್‌ ಬಳಿ ಇರುವ ಮೂರು ಸಫಾರಿ ಆನೆಗಳಾದ ಚಂಚಲೆ, ಚಾಮುಂಡಿ, ಶಿವಾನಿ ಆನೆಗಳು ಹೆಣ್ಣಾನೆಯಾಗಿದ್ದರಿಂದ ಇದರ ವಾಸನೆಗೆ ಮದವೇರಿದ ಆನೆಗಳು ಇಲ್ಲಿ ದಿನನಿತ್ಯ ರಾತ್ರಿ ಹಗಲೆನ್ನದೆ ಓಡಾಡಿಕೊಂಡಿರುತ್ತಿವೆ. ಇದು ಗ್ರಾಮಸ್ಥರ ನಿದ್ದೆಗೆಡಿಸಿದೆ.

Tap to resize

Latest Videos

undefined

ಈ ಪ್ರದೇಶ ದಿನನಿತ್ಯ ಶಾಲಾ ಮಕ್ಕಳು ಶಾಲೆಗೆ ಕಾಲ್ನಡಿಗೆಯಲ್ಲಿ ಹೋಗುವ ರಸ್ತೆಯಾಗಿದ್ದು, ಮಹಿಳೆಯರು, ರೈತರು ಹೊಲದ ಕೆಲಸಕ್ಕೆ, ಕೂಲಿ ಕೆಲಸಕ್ಕೆ ಓಡಾಡಿಕೊಂಡಿರುತ್ತಿದ್ದ ಈ ರಸ್ತೆಯಂಚಿನಲ್ಲೇ ಕಾಡಿನ ಎರಡು ಮದಗಜಗಳು ಕ್ಯಾಂಪ್‌ ಬಳಿಯಲ್ಲಿ ಓಡಾಡಿಕೊಂಡಿದ್ದನ್ನು ಸೋಮವಾರ ಸಾಯಂಕಾಲ ಕೂಡಾ ಸ್ಥಳೀಯರು ಕಂಡಿದ್ದಾರೆ. ಈ ಮದಗಜದ ಭಯದಲ್ಲಿ ಕೆಲಸಕ್ಕೆ ಹೋಗಲೂ ಆಗದೆ, ಮಕ್ಕಳನ್ನು ಶಾಲೆಗೆ ಕಳಿಸಲೂ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮನೆಯಂಗದಲ್ಲಿ ತಮ್ಮವರನ್ನು ಕಾದುಕುಳಿತುಕೊಳ್ಳುವ ವಾತಾವರಣ ನಿರ್ಮಾಣಗೊಂಡಿದೆ. ಕೂಡಲೆ ಇಲಾಖೆ ತಮ್ಮ ಸಫಾರಿ ಕ್ಯಾಂಪ್‌ನ ಆನೆಯನ್ನು ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಿರಸಿ: ಸಹಪಾಠಿ ಮಾತಿನಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಅನಾಹುತಕ್ಕೆ ಇಲಾಖೆಯೇ ಹೊಣೆ

ಕಳೆದ 2019ರ ಡಿಸೆಂಬರ್‌ ಸುಮಾರಿಗೆ ಇಲ್ಲಿನ ಪಣಸೋಲಿ ಕ್ಯಾಂಪ್‌ನ ಸಫಾರಿಯ ರಾಜೇಶ ಎನ್ನುವ ಗಂಡಾನೆಯೊಂದನ್ನು ಕಾಡಿನ ಮದಗಜಗಳು ಸೇರಿ ತಿವಿದು ಕೊಂದುಹಾಕಿದ ಘಟನೆ ನಡೆದಿದೆ. ಇದಕ್ಕಿಂತ ಮುಖ್ಯವಾಗಿ ಮೂರ್ನಾಲ್ಕು ವರ್ಷದ ಹಿಂದೆ ವಿರ್ನೋಲಿ ದತ್ತಾ ದೇಸಾಯಿ ಎಂಬಾತ ರೈತನನ್ನು ಮದವೇರಿದ ಕಾಡಾನೆಯೊಂದು ತಿವಿದು ಕೊಂದ ಘಟನೆ ನಡೆದಿದೆ. ಇದೇ ಪಣಸೋಲಿ ಕ್ಯಾಂಪ್‌ನಲ್ಲಿ ಮದವೇರಿದ ಸಫಾರಿ ಆನೆ ಕೂಡಾ ತನ್ನದೇ ಮಾವುತನನ್ನು ಕೊಂದ ಘಟನೆ ನಡೆದಿದೆ. ಇಂತಹ ಘಟನೆಗಳು ಈಗಾಗಲೆ ನಡೆದಿರುವುದು ನಮ್ಮ ಕಣ್ಮುಂದಿರುವಾಗ, ಇಂತಹ ಘಟನೆಗಳು ಮರುಕಳಿಸುವ ಪೂರ್ವದಲ್ಲಿ ಎಚ್ಚರಿಕೆಯ ಕ್ರಮಕೈಗೊಂಡು ಸಫಾರಿ ಆನೆಯನ್ನು ಬೇರೆಡೆ ಸ್ಥಳಾಂತರಿಸಬೇಕು, ಇಲ್ಲದೆ ಇದ್ದರೆ ಆಗುವ ಅನಾಹುತಕ್ಕೆ ಇಲಾಖೆಯ ಅಧಿಕಾರಿಗಳೆ ಹೊಣೆಗಾರರೆಂದು ಎಚ್ಚರಿಸಿರುತ್ತಾರೆ.

ಈ ಮಧ್ಯೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಳೆದೆರಡು ದಿನಗಳಿಂದ ಕಾಡಿನ ಮದವೇರಿದ ಆನೆಯನ್ನು ದೂರಕ್ಕೆ ಓಡಿಸುವ ಪ್ರಯತ್ನ ಮಾಡಿದ್ದಾಗಿ ಅರಣ್ಯಾಧಿಕಾರಿಗಳು ತಿಳಿಸುತ್ತಿದ್ದಾರೆ. ಸಾಕಾನೆಯನ್ನು ಹತ್ತಿರದ ಸಾತಖಂಡ ಎಂಬ ಅರಣ್ಯ ಇಲಾಖೆಯ ಕ್ಯಾಂಪ್‌ ಬಳಿ ಬಿಡಲು ಯೋಚಿಸಿದ್ದು, ಮುಂದಿನ ಒಂದೆರಡು ದಿನಗಳ ಬಳಿಕ ಕಾಡಾನೆಯ ಮದವಿಳಿದ ಮೇಲೆ ಪಣಸೋಲಿ ಕ್ಯಾಂಪ್‌ಗೆ ತರಲಾಗುವುದು ಎಂದು ವಲಯರಣ್ಯಾಧಿಕಾರಿ ಸಂಗಮೇಶ ತಿಳಿಸಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಎಷ್ಟೇ ಓಡಿಸುವ ತಂತ್ರಮಾಡಿದ್ದರೂ ಪುನಃ ಅದು ಇಲ್ಲಿನ ಹೆಣ್ಣಾನೆಯ ಸಹವಾಸಕ್ಕೆ ತಿರುಗಿ ಬರುತ್ತಿದೆ. ಸೋಮವಾರವೂ ಕೂಡಾ ಇದೆ ಆಗಿದೆ. ಹಾಗಾಗಿ ಕೂಡಲೆ ಕ್ಯಾಂಪ್‌ನ ಹೆಣ್ಣಾನೆಗಳನ್ನು ಹತ್ತಿರ ಸಾತಖಂಡದಲ್ಲಿಯೂ ಇಡದೆ ದೂರದ ಇನ್ನಾವುದಾದರು ಕ್ಯಾಂಪಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿರುವ ಪಣಸೋಲಿ ಗ್ರಾಮಸ್ಥರು, ಕೂಡಲೇ ಸ್ಥಳಾಂತರ ಕ್ರಮಕೈಗೊಳ್ಳದಿದ್ದರೆ ಪ್ರತಿಭಟಿಸುವುದಾಗಿ ಗ್ರಾಮದ ಪ್ರಮುಖ ರಾಜಾ ದೇಸಾಯಿ, ನಂದು ತೇಲಿ, ಕೃಷ್ಣಾ ದೇಸಾಯಿ, ಗ್ರಾ.ಪಂ. ಅಧ್ಯಕ್ಷೆ ಪ್ರೀತಿ ತೇಲಿ, ಅರ್ಜುನ ಸಾವಂತ, ಗ್ರಾ.ಪಂ. ಉಪಾಧ್ಯಕ್ಷೆ ಚಿತ್ರಾ ರಿತ್ತಿ, ಪೊಂಡು ಸಡಕೆ ಎಚ್ಚರಿಕೆ ನೀಡಿರುತ್ತಾರೆ.

ಪಣಸೋಲಿ ಕ್ಯಾಂಪ್‌ ಹೆಣ್ಣಾನೆಯಿಂದಾಗಿ ಕಾಡಿನ ಮದಗಜಗಳು ನಮ್ಮೂರಿಗೆ ನುಗ್ಗುತ್ತಿದ್ದು, ಗ್ರಾಮಸ್ಥರಿಗೆ ಜೀವಭಯ ಉಂಟಾಗಿದೆ. ಕೂಡಲೆ ಇಲ್ಲಿನ ಕ್ಯಾಂಪ್‌ ಆನೆಯನ್ನು ದೂರದ ಕ್ಯಾಂಪ್‌ಗೆ ಸ್ಥಳಾಂತರಿಸಿ, ಹಿಂದೆ ನಡೆದ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಗ್ರಾಮಸ್ಥರಿಗೆ ರಕ್ಷಣೆ ನೀಡಿ. ಇಲ್ಲದಿದ್ದರೆ ಇಲಾಖೆ ವಿರುದ್ಧ ನಮ್ಮ ಗ್ರಾಮಸ್ಥರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಗ್ರಾಮದ ಪ್ರಮುಖರು ರಾಜಾರಾಮ ದೇಸಾಯಿ ತಿಳಿಸಿದ್ದಾರೆ. 
 

click me!