ಜಿಲ್ಲೆಯಲ್ಲಿ ಕಾಡಾನೆ ಉಪಟಳಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ ಇಲಾಖೆ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿದ್ದು, ಟಾಸ್ಕ್ ಫೋರ್ಸ್ ಮೂಲಕ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಮುಂದಾಗಿದೆ.
ವಿಜಯ್ ಕೇಸರಿ
ಚನ್ನಪಟ್ಟಣ (ಜೂ.30): ಜಿಲ್ಲೆಯಲ್ಲಿ ಕಾಡಾನೆ ಉಪಟಳಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಅರಣ್ಯ ಇಲಾಖೆ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿದ್ದು, ಟಾಸ್ಕ್ ಫೋರ್ಸ್ ಮೂಲಕ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಗೆ ಮುಂದಾಗಿದೆ. ಮೈಸೂರು, ಕೊಳ್ಳೇಗಾಲ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಿಂದ ಆಗಮಿಸಿರುವ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಂಡಿದ್ದು, ಇದರೊಂದಿಗೆ ಸ್ಥಳೀಯವಾಗಿಯೂ ಟಾಸ್ಕ್ ಫೋರ್ಸ್ ರಚಿಸುವ ಸಂಬಂಧ ಯೋಜನೆ ರೂಪಿಸಲಾಗಿದೆ.
ಏನಿದು ಟಾಸ್ಕ್ ಫೋರ್ಸ್: ಕಾಡಾನೆಗಳ ಹಾವಳಿ ಮಿತಿ ಮೀರಿರುವ ಜಿಲ್ಲೆಗಳನ್ನು ಎಲಿಫೆಂಟ್ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗುತ್ತದೆ. ಈಗಾಗಲೇ ಮೈಸೂರು, ಚಿಕ್ಕಮಗಳೂರು, ಕೊಳ್ಳೇಗಾಲ ಹಾಗೂ ಹಾಸನ ಮುಂತಾದ ಕಡೆಗಳಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಪಡೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಪರಿಣತಿ ಪಡೆದಿದ್ದು, ಅರಣ್ಯ ವ್ಯಾಪ್ತಿಯಲ್ಲಿ ಕೋಂಬಿಂಗ್ ನಡೆಸುವ ಮೂಲಕ ಆನೆಗಳ ಚಟುವಟಿಕೆ ಮೇಲೆ ನಿಗಾ ವಹಿಸಲಿದೆ. ಇದೇ ಮಾದರಿಯನ್ನು ಜಿಲ್ಲೆಯಲ್ಲಿ ಅನುಸರಿಸಿ ಕಾಡಾನೆಗಳ ಕಾಟಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.
ನಾನು ಗ್ರಾನೈಟ್ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ
ಟಾಸ್ಕ್ ಫೋರ್ಸ್ ಆಗಮನ: ಈಗಾಗಲೇ ಬೇರೆ ಜಿಲ್ಲೆಗಳಿಂದ ರಾಮನಗರ ಜಿಲ್ಲೆಗೆ ಆಗಮಿಸಿರುವ ಟಾಸ್ಕ್ ಫೋರ್ಸ್ ತನ್ನ ಕಾರ್ಯಾಚರಣೆಯನ್ನು ಜಿಲ್ಲೆಯಲ್ಲಿ ಆರಂಭಿಸಿದೆ. ಮೈಸೂರು ಜಿಲ್ಲೆಯಿಂದ 20, ಕೊಳ್ಳೇಗಾಲದಿಂದ 20, ಚಿಕ್ಕಮಗಳೂರು ಹಾಗೂ ಹಾಸನ 10 ಜನ ಟಾಸ್ಕ್ ಫೋರ್ಸ್ ಸಿಬ್ಬಂದಿ ರಾಮನಗರ ಜಿಲ್ಲೆಗೆ ಆಗಮಿಸಿದ್ದು, 23ನೇ ತಾರೀಖಿನಿಂದಲೇ ಆನೆಗಳನ್ನು ಕಾಡಿಗೆ ಡ್ರೈವ್ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 25 ಆನೆಗಳಿದ್ದು, ಇದರಲ್ಲಿ ಸುಮಾರು 15ಕ್ಕೂ ಹೆಚ್ಚು ಆನೆಗಳನ್ನು ಈಗಾಗಲೇ ಕಾವೇರಿ ವನ್ಯಜೀವಿ ಧಾಮಕ್ಕೆ ಹಿಮ್ಮೆಟ್ಟಿಸಲಾಗಿದೆ. ಇನ್ನು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಟಾಸ್ಕ್ ಫೋರ್ಸ್ ಸಹಕಾರದ ಮೂಲಕ ಎಲ್ಲ ಆನೆಗಳನ್ನು ಕಾವೇರಿ ವನ್ಯ ಜೀವಿಧಾಮ ಹಾಗೂ ಬನ್ನೇರಘಟ್ಟಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಮುಂದಾಗಿದೆ. ಮಂಗಳವಾರ ರಾತ್ರಿ ಸುಮಾರು 8 ಆನೆಗಳನ್ನು ಕಾವೇರಿ ವನ್ಯಜೀವಿಧಾಮಕ್ಕೆ ಅಟ್ಟಲಾಗಿದ್ದು, ಮಿಕ್ಕ ಆನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಲಭ್ಯವಾಗಿದೆ.
ರಾಮನಗರ, ಚನ್ನಪಟ್ಟಣ ವ್ಯಾಪ್ತಿಯ ತೆಂಗಿನಕಲ್ಲು, ನರೀಕಲ್ಲುಗುಡ್ಡ, ಕಬ್ಬಾಳು ವ್ಯಾಪ್ತಿಯಲ್ಲಿರುವ ಆನೆಗಳನ್ನು ಕಾವೇರಿ ವನ್ಯಜೀವಿ ಧಾಮಕ್ಕೆ ಹಾಗೂ ಕನಕಪುರ, ಅಚ್ಚಲು, ಮುನೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿನ ಆನೆಗಳನ್ನು ಬನ್ನೇರಘಟ್ಟಅರಣ್ಯ ವ್ಯಾಪ್ತಿಗೆ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಕಾರ್ಯತಂತ್ರ ರೂಪಿಸಿದೆ. ಆನೆಗಳನ್ನು ಅರಣ್ಯ ಪ್ರದೇಶದ ಒಳಗೆ ಡ್ರೈವ್ ಮಾಡಿದ ನಂತರ ಹಿಂದಿರುಗಿ ಬರಲು ಹವಣಿಸುವ ಆನೆಗಳನ್ನು ಟಾಸ್ಕ್ ಫೋರ್ಸ್ ಸಹಕಾರದಿಂದ ಅಲ್ಲಿಂದಲೇ ಹಿಮ್ಮೆಟ್ಟುವ ಕಾರ್ಯಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ.
ಸಾತನೂರಿನಲ್ಲಿ ಕ್ಯಾಂಪ್: ಎಲಿಫೆಂಟ್ ಟಾಸ್ಕ್ ಫೋರ್ಸ್ ಕಾರ್ಯಾಚರಣೆಗೆ ಸಾತನೂರು, ಹಾಗೂ ಕನಕಪುರದಲ್ಲಿ ಬೇಸ್ ಕ್ಯಾಂಪ್ ಅನ್ನು ನಿರ್ಮಿಸಲಾಗಿದೆ. ಸಾತನೂರು ಬೇಸ್ ಕ್ಯಾಂಪ್‌ಗೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಟಾಸ್ಕ್ ಫೋರ್ಸ್ ಸಿಬ್ಬಂದಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಿದೆ. ಇದರೊಂದಿಗೆ ಜಿಲ್ಲೆಯಲ್ಲೂ ಶಾಶ್ವತವಾದ ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆಗೆ ಅರಣ್ಯ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ಧೈರ್ಯವಂತ ಯುವಕರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಒಟ್ಟು 40 ಜನರ ಟಾಸ್ಕ್ ಫೋರ್ಸ್ ರಚಿಸಿ ಈಗಾಗಲೇ ಪರಿಣತಿ ಪಡೆದಿರುವ ಎಲಿಫೆಂಟ್ ಟಾಸ್ಕ್ ಫೋರ್ಸ್ ಮೂಲಕ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ.
ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆಯೊಂದಿಗೆ ಸಹಾಯವಾಣಿಯನ್ನು ಆರಂಭಿಸಲಾಗುವುದು. ಆನೆಗಳ ಕುರಿತು ಸಹಾಯವಾಣಿಗೆ ಮಾಹಿತಿ ದೊರೆತ ತಕ್ಷಣ ಕಾರ್ಯಾಪ್ರವೃತ್ತವಾಗುವ ಟಾಸ್ಕ್‌ಫೋರ್ಸ್ ಆನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಳ್ಳುವ ಶೀಘ್ರ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆಯನ್ನು ಅರಣ್ಯ ಇಲಾಖೆ ಹೊಂದಿದೆ. ಸಾತನೂರು ವಲಯ ಅರಣ್ಯಾಧಿಕಾರಿ ದೂರವಾಣಿ ಸಂಖ್ಯೆಯನ್ನು ತಾತ್ಕಾಲಿಕ ಸಹಾಯವಾಣಿಯಾಗಿ ಆರಂಭಿಸಿದ್ದು, ಮುಂದೆ ಶಾಶ್ವತ ಸಹಾಯವಾಣಿ ಆರಂಭಿಸಲು ಚಿಂತನೆ ನಡೆಸಿದೆ. ಈ ಕಾರ್ಯತಂತ್ರವಾದರೂ ಯಶಸ್ವಿಯಾಗಿ ಕಾಡಾನೆಗಳ ಕಾಟಕ್ಕೆ ಶಾಶ್ವತ ಪರಿಹಾರ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಥರ್ಮಲ್ ಡ್ರೋಣ್ ಬಳಕೆ: ಆನೆಗಳನ್ನು ಕಾಡಿಗೆ ಡ್ರೈವ್ ಮಾಡುವ ಕಾರ್ಯಾಚರಣೆಗೆ ಥರ್ಮಲ್ ಡ್ರೋಣ್ ಅನ್ನು ಅರಣ್ಯ ಇಲಾಖೆ ಬಳಕೆ ಮಾಡುತ್ತಿದೆ. ಕಾರ್ಯಾಚರಣೆಗಾಗಿ ವಿಶೇಷವಾಗಿ ನಾಗರಹೊಳೆಯಿಂದ ಥರ್ಮಲ್ ಡ್ರೋಣ್ ಕ್ಯಾಮೆರಾ ತರಿಸಲಾಗಿದೆ. ಥರ್ಮಲ್ ಡ್ರೋಣ್‌ನಲ್ಲಿ ನೈಟ್ ವಿಷನ್ ಮೋಡ್ ಇರಲಿದ್ದು, ಇದು ರಾತ್ರಿ ವೇಳೆಯಲ್ಲಿಯೂ ಆನೆಗಳು ಬೀಡುಬಿಟ್ಟಿರುವ ಜಾಗವನ್ನು ನಿಖರವಾಗಿ ಪತ್ತೆ ಹಚ್ಚಲು ಸಹಕಾರಿಯಾಗಿದೆ. ಈ ಡ್ರೋಣ್ ಅನ್ನು ಬಳಸಿಕೊಂಡು ರಾತ್ರಿ ವೇಳೆ ಸಹ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡ್ರೋಣ್‌ನೊಂದಿಗೆ ನಾಲ್ಕು ಮಂದಿ ಪರಿಣಿತರ ತಂಡ ಆಗಮಿಸಿದ್ದು, ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಗೆ ಸಹಕಾರ ನೀಡುತ್ತಿದೆ.
ಕಾಂಗ್ರೆಸ್ ಸರ್ಕಾರದಲ್ಲೀಗ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ: ಎಚ್‌ಡಿಕೆ
ಬೇರೆ ಜಿಲ್ಲೆಗಳಿಂದ ಎಲಿಫೆಂಟ್ ಟಾಸ್ಕ್ ಫೋರ್ಸ್ ಜಿಲ್ಲೆಗೆ ಆಗಮಿಸಿದ್ದು, ಆನೆಗಳನ್ನು ಕಾಡಿಗೆ ಹಿಮ್ಮೆಟಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸ್ಥಳೀಯವಾಗಿಯೇ ಒಂದು ಎಲಿಫೆಂಟ್ ಟಾಸ್ಕ್ ಫೋರ್ಸ್ ಅನ್ನು ಶೀಘ್ರವಾಗಿ ರಚಿಸಲಾಗುವುದು. ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಆನೆಗಳನ್ನು ಕಾವೇರಿ ವನ್ಯಜೀವಿಧಾಮಕ್ಕೆ ಡ್ರೈವ್ ಮಾಡಲಾಗಿದ್ದು, ಉಳಿದ ಆನೆಗಳನ್ನು ಶೀಘ್ರವಾಗಿ ಕಾಡಿಗೆ ಅಟ್ಟಲಾಗುವುದು.
-ದೇವರಾಜು, ಡಿಸಿಎಫ್, ರಾಮನಗರ