ಚಿಕ್ಕಮಗಳೂರು ಜಿಲ್ಲಾಧಿಕಾರಿ ವರ್ಗಾವಣೆಗೆ ಮಹಿಳೆ ಕಣ್ಣೀರು!

By Suvarna News  |  First Published Jun 30, 2023, 8:53 PM IST

ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಕೆ.ಎನ್ ರಮೇಶ್ ವರ್ಗಾವಣೆ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ಉಡುಗೊರೆ ನೀಡಿ ಕಣ್ಣೀರಿಟ್ಟಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.30): ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಕೆ.ಎನ್ ರಮೇಶ್ ವರ್ಗಾವಣೆ ಹಿನ್ನಲೆಯಲ್ಲಿ ಮಹಿಳೆಯೊಬ್ಬರು ಉಡುಗೊರೆ ನೀಡಿ ಕಣ್ಣೀರಿಟ್ಟಿದ್ದಾರೆ. ಕಳೆದ 2 ವರ್ಷದಿಂದ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಕೆ.ಎನ್ ರಮೇಶ್ ವರ್ಗಾವಣೆಗೊಂಡಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದಾಗ ಜಮೀನು ದಾಖಲೆ ಮಾಡಿಕೊಟ್ಟಿದ್ದನ್ನ ಮಹಿಳೆಯೊಬ್ಬರು ನೆನೆದು ತನ್ನ ತೋಟದಲ್ಲಿ ಸಾವಯವ ಗೊಬ್ಬರದಲ್ಲಿ ಬೆಳೆದ ತರಕಾರಿ ನೀಡಿ ಕೃತಜ್ಞತೆಯ ಕಣ್ಣೀರು ಸುರಿಸಿದರು.

Latest Videos

undefined

ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಡಾ. ಮೀನಾ ನಾಗರಾಜ್ ಅವರನ್ನು ಸರ್ಕಾರ ನೇಮಕ ಮಾಡಲಾಗಿದೆ. ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಬಯೋ ಟೆಕ್ನಾಲಜಿ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಮೀನಾ ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಜಿಲ್ಲಾಧಿಕಾರಿಗಳಾಗಿದ್ದ ಕೆ.ಎನ್. ರಮೇಶ್ ಕಳೆದ 2 ವರ್ಷದಿಂದ ಚಿಕ್ಕಮಗಳೂರು ಡಿಸಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಚುನಾವಣೆಗೂ ಮುನ್ನವೇ  ಡಿಸಿ ಎಸ್ ಪಿ ವರ್ಗಾವಣೆಗೆ ಕಾಂಗ್ರೆಸ್ ಆಗ್ರಹಿಸಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ಚಿಕ್ಕಮಗಳೂರು ಜಿ.ಪಂ. ಸಿ.ಇ.ಓ. ಸ್ಥಾನದಿಂದ ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥರಾಗಿ ವರ್ಗಾವಣೆ ಆಗಿದ್ದ ಜಿ.ಪ್ರಭು ಅವರನ್ನು ತುಮಕೂರು ಜಿ.ಪಂ. ಸಿ.ಇ.ಓ. ಅಗಿ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿಗಳಾಗಿದ್ದ ಕೆ.ಎನ್. ರಮೇಶ್ ಅವರನ್ನು ವರ್ಗಾವಣೆ ಮಾಡಿದ್ದು ಯಾವುದೇ ಸ್ಥಾನವನ್ನು ಸೂಚಿಸಿಲ್ಲ.

ಒಡಹುಟ್ಟಿದವನ್ನು ಹೊಲಕ್ಕೆ ಕರೆದು ಕೊಡಲಿಯಿಂದ ಕೊಚ್ಚಿ ಕೊಂದ ಸಹೋದರರು!

ನಿವೇಶನ ರಹಿತರಿಗೆ ನಿವೇಶನಕ್ಕೆ 905 ಎಕರೆ ಭೂಮಿ: 
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾಗಿ ನೇಮಕವಾಗಿರುವ ಡಾ. ಮೀನಾ ಅವರಿಗೆ ಅಧಿಕಾರ ಹಸ್ತಾಂತರಕ್ಕೂ ಮುನ್ನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಕೆ.ಎನ್.ರಮೇಶ್ ಸುದ್ದಿಗಾರರೊಂದಿಗೆ ಮಾತಾಡಿ ಗ್ರಾಮಪಂಚಾಯಿತಿಗಳಲ್ಲಿ ಒತ್ತುವರಿಯಾಗಿದ್ದ ಭೂಮಿಯನ್ನು ತೆರವುಗೊಳಿಸುವ ಮೂಲಕ ನಿವೇಶನ ರಹಿತರಿಗೆ ನಿವೇಶನಕ್ಕೆ 905 ಎಕರೆಭೂಮಿಯನ್ನು ಕಾಯ್ದಿರಿಸುವ ಮೂಲಕ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು.

ಚಿಕ್ಕಮಗಳೂರು ತಾಲೂಕಿನಲ್ಲೇ 225 ಎಕರೆ ಭೂವಿಯನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದೆ. ಮಾಚಗೊಂಡನಹಳ್ಳಿಯಲ್ಲಿ ಒತ್ತುವರಿಯಾಗಿದ್ದ 10 ಎಕರೆಯನ್ನು ತೆರವುಗೊಳಿಸಲಾಗಿದೆ. ಹಾದಿಹಳ್ಳಿ ಗ್ರಾಮದಲ್ಲಿ 10 ಎಕರೆಯನ್ನು ನಿವೇಶನರಹಿತರಿಗೆ ನೀಡಲಾಗಿದೆ ಎಂದು ಹೇಳಿದರು.ಮೂಡಿಗೆರೆ ತಾಲೂಕಿನಲ್ಲಿ ಅಕ್ರಮವಾಗಿ ಮಂಜೂರಾತಿನೀಡಿದ್ದ 905 ಎಕರೆಯನ್ನು ರದ್ದುಪಡಿಸಿದ್ದು, ಪಹಣ  ಯಲ್ಲಿ ಇಂಡೀಕರಣ ಮಾಡಲಾಗಿದೆ. ಸುಮಾರು 85-90 ಪಂಚಾಯಿತಿಗಳಿಗೆ ನಿವೇಶನಕ್ಕಾಗಿ ಭೂಮಿಯನ್ನು ಕಾಯ್ದಿರಿಸಲಾಗಿದೆ.ನಿವೇಶನಕ್ಕಾಗಿ ಮೀಸಲಿಟ್ಟಿದ್ದ ಭೂಮಿ ಒತ್ತುವರಿಯಾಗಿರುವುದನ್ನು ಪತ್ತೆಹಚ್ಚುವ ಮೂಲಕ ತೆರವುಮಾಡಲಾಗಿದೆ ಎಂದರು.

ಆಡಳಿತ ಅವಧಿಯಲ್ಲಿನ ಕೈಗೊಂಡ ಪ್ರಮುಖ ನಿರ್ಧಾರ:
ಅಕ್ರಮವಾಗಿ ಭೂಮಿ ಮಂಜೂರಾತಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೇಳು ನೌಕರರನ್ನು ಜೈಲಿಗೆ ಕಳುಹಿಸಲಾಗಿದೆ. ಕಾನೂನಿಗೆ ಗೌರವ ಬರುವಂತೆ ಮಾಡಲಾಗಿದೆ. ನಿವೇಶನ ಸಮಸ್ಯೆ ನೀಗಿಸಲು ಭೂಮಿ ಸಮಸ್ಯೆ ನಿವಾರಣೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ ಎಂದು ತಮ್ಮ ಆಡಳಿತ ಅವಧಿಯಲ್ಲಿನ ಕೈಗೊಂಡ ಪ್ರಮುಖ ನಿರ್ಧಾರವನ್ನು ಮಾಧ್ಯಮದವರ ಮುಂದಿಟ್ಟರು.ಕಡೂರು ಮತ್ತು ತರೀಕೆರೆ ತಾಲೂಕಿನ ಭದ್ರಾಮೇಲ್ದಂಡೆ ಯೋಜನೆಗೆ ಬೇಕಾಗಿರುವ ಶೇ.95 ರಷ್ಟು ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ಸಂಬಂಧಿಸಿದ ಇಲಾಖೆಯವರಿಗೆ ಹಸ್ತಾಂತರಿಸಲಾಗಿದೆ.

ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಭೂ ಸಮಸ್ಯೆಯನ್ನು ಬಗೆಹರಿಸಲಾಗಿದೆ. ದೇಶದ ರಕ್ಷಣೆಗೆ ಮುಂದಾಗಿ ನಿವೃತ್ತಿಹೊಂದಿರುವ ಮಾಜಿ ಸೈನಿಕರಿಗಾಗಿ 130 ಎಕರೆ ಭೂಮಿಯನ್ನು ಗುರುತಿಸಿರುವುದಾಗಿ ಹೇಳಿದರು.ಮೆಡಿಕಲ್ ಕಾಲೇಜು ಮತ್ತು ಇಂಜಿನಿಯರಿಂಗ್ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಭೂಮಿ ನೀಡಿದ್ದು, ವೈದ್ಯಕೀಯ ಕಾಲೇಜು ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ. ನಿಧಾನ ಗತಿಯಲ್ಲಿ ಸಾಗುತ್ತಿದ್ದ ಅಮೃತ್ ಮತ್ತು ಒಳಚರಂಡಿ ಕಾಮಗಾರಿಯ ವೇಗವನ್ನು ಹೆಚ್ಚಿಸಿದ್ದು, ಅಮೃತ್‌ ಯೋಜನೆಯಡಿ 3-4 ವಾರ್ಡಿನಲ್ಲಿ ಮಾತ್ರ ಕೆಲಸ ಬಾಕಿ ಉಳಿದಿದೆ ಎಂದರು.

ಕುದುರೆಮುಖದಲ್ಲಿರುವ 163 ಕಾರ್ಮಿಕರ ನಿವೇಶನ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ 5.70 ಲಕ್ಷ ಬಿಡುಗಡೆಗೊಳಿಸಿದ್ದು, 45.10 ಲಕ್ಷ ರೂ. ವೆಚ್ಚಕ್ಕೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಸ್ಪೈಸ್ ಪಾರ್ಕ ನಿರ್ಮಾಣಕ್ಕೆ ಸಮಗ್ರ ಯೋಜನಾ ವರದಿ ತರಿಸಲಾಗಿದೆ. ಕಡೂರು ತಾಲೂಕಿನ ನಿಗದಿಯತ್ ಕಾವಲಿನಲ್ಲಿ ಇಂಡಸ್ಟ್ರೀಯಲ್ ತೆರೆಯಲು 160 ಎಕರೆ ಭೂಮಿ ಗುರುತಿಸಲಾಗಿದೆ. ಮಾಗಡಿ ಸಮೀಪ ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಾಣಕ್ಕೆ 356 ಎಕರೆ ಗುರುತಿಸಲಾಗಿದೆ.ಟೆಕ್ಸ್‌ಟೈಲ್ ಪಾರ್ಕಿಗೆ ಜಮೀನು ಹುಡುಕಲಾಗಿದೆ ಎಂದು ತಿಳಿಸಿದರು.

ಆರ್ ಅಶೋಕ್ ಡಿಎನ್ಎ ಬಗ್ಗೆ ಮಾತನಾಡಲು ಮೆಡಿಕಲ್ ಓದಿದ್ದಾರೆಯೇ? 

2 ವರ್ಷದ ಅವಧಿಯಲ್ಲಿನ ಕಾರ್ಯವನ್ನು ಮೆಲುಕು ಹಾಕಿದ ಡಿಸಿ 
ಕಡೂರು ತಾಲೂಕು ಎಮ್ಮೆದೊಡ್ಡಿಯಲ್ಲಿ 15-18 ಎಕರೆ ಅರಣ್ಯವನ್ನು ಒತ್ತುವರಿಮಾಡಿಕೊಂಡು ಬೇಲಿಹಾಕಲಾಗಿದ್ದು, ಅಲ್ಲಿ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ವಿದ್ಯುತ್ ಸಂಪರ್ಕವನ್ನು ಗೋವಿಂದಪ್ಪ ಹೆಸರಿನಲ್ಲಿ ಪಡೆಯಲಾಗಿದೆ. ಅದನ್ನು ಪರಿಶೀಲಿಸಿದಾಗ ಮತ್ತೊಬ್ಬ ವ್ಯಕ್ತಿಯ ಹೆಸರು ಪತ್ತೆಯಾಗಿದ್ದು, ಇಬ್ಬರಿಗೂ ನೋಟೀಸ್ ಜಾರಿಗೊಳಿಸಲು ಸೂಚಿಸಲಾಗಿದೆ. ಬಳಿಕ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.ಕೊರೊನಾಸೋಂಕಿನ ಎರಡನೆ ಅಲೆಯಲ್ಲಿ 28 ವೆಂಟಿಲೇಟರ್ ಇಟ್ಟುಕೊಂಡು ಯಶಸ್ವಿಯಾಗಿ ನಿರ್ವಹಣೆಮಾಡಲಾಗಿದೆ. ಖಾಸಗಿ ಆಸ್ಪತ್ರೆಯವರೊಂದಿಗೆ ಮಾತುಕತೆ ನಡೆಸುವ ಮೂಲಕ ಅಗತ್ಯಕ್ಕೆ ತಕ್ಕಂತೆ ಆಮ್ಲಜನಕ ಪೂರೈಸುವ ಮೂಲಕ ಆರೋಗ್ಯ ಸೇವೆ ನೀಡಲಾಗಿದೆ.

ಸಾರ್ವಜನಿಕರಿಗೆ ಯಾವುದೇ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗಿತ್ತು ಎಂದು 2 ವರ್ಷದ ಅವಧಿಯಲ್ಲಿನ ಕಾರ್ಯವನ್ನು ಮೆಲುಕುಹಾಕಿದರು. ದತ್ತಜಯಂತಿ ಮತ್ತು ಉರುಸ್ ಸಂದರ್ಭದಲ್ಲಿ ಎರಡು ಸಮುದಾಯದವರೊಂದಿಗೆ ಮಾತುಕತೆ ನಡೆಸುವ ಮೂಲಕ ಯಾವುದೇ ಗಲಾಟೆಗೆ ಅವಕಾಶನೀಡದೆ ಕೋಮುಸೌಹಾರ್ದತೆ ಕಾಪಾಡಲು ಒತ್ತುನೀಡಲಾಗಿತ್ತು. ಹಿಜಾಬ್ ಸಮಸ್ಯೆ ಬಂದಾಗ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಮಾತುಕತೆ ನಡೆಸಿ ಅವರ ಮನಸ್ಸನ್ನು ಗೆಲ್ಲಲಾಯಿತು ಎಂದು ಹೇಳಿದರು. ಎರಡು ವರ್ಷದ ಅವಧಿಯಲ್ಲಿ ನಿವೇಶನ ಸಮಸ್ಯೆ ನಿವಾರಣೆಗೆ ಅಕ್ರಮ ಭೂ ಮಂಜೂರಾತಿಯನ್ನು ರದ್ದುಗೊಳಿಸುವ ಮೂಲಕ ವಶಕ್ಕೆ ಪಡೆದುಕೊಂಡಿದ್ದು, ಭೂಮಿ ಗುರುತಿಸುವ ಕಾರ್ಯಕ್ಕೆ ಮೊದಲಾದ್ಯತೆ ನೀಡಿ ಕಾರ್ಯನಿರ್ವಹಿಸಲಾಗಿದೆ ಎಂದು ತಿಳಿಸಿದರು.

click me!