ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಸಾವಿರಾರು ಮನೆಗಳು ಜಲಾವೃತಗೊಂಡಿದ್ದು ಒಂದೆಡೆಯಾದ್ರೆ, ಇನ್ನೊಂದೆಡೆ ನಗರದ ಬಹುತೇಕ ಏರಿಯಾಗಳ ರಸ್ತೆಗಳು ಹೊಂಡ ಗುಂಡಿಗಳಿಂದಲೇ ತುಂಬಿ ತುಳುಕ್ತಿವೆ.
ವರದಿ: ವಿಕ್ರಮ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಜೂ.05): ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಸಾವಿರಾರು ಮನೆಗಳು ಜಲಾವೃತಗೊಂಡಿದ್ದು ಒಂದೆಡೆಯಾದ್ರೆ, ಇನ್ನೊಂದೆಡೆ ನಗರದ ಬಹುತೇಕ ಏರಿಯಾಗಳ ರಸ್ತೆಗಳು ಹೊಂಡ ಗುಂಡಿಗಳಿಂದಲೇ ತುಂಬಿ ತುಳುಕ್ತಿವೆ. ಮನೆಯಿಂದ ಹೊರಗೆ ಕಾಲಿಟ್ರೆ ರಸ್ತೆ ಬದಲಾಗಿ ನೇರವಾಗಿ ರಸ್ತೆ ಗುಂಡಿಗೆ ಕಾಲಿಡುವ ಪರಿಸ್ಥಿತಿ ಅದೆಷ್ಟೋ ಏರಿಯಾದಲ್ಲಿ ನಿರ್ಮಾಣವಾಗಿದೆ. ಆದ್ರೆ ಈ ಮಧ್ಯೆ ಈ ಏರಿಯಾದ ರಸ್ತೆಯೊಂದನ್ನ ನೋಡಿದ್ರೆ ನೀವು ಶಾಕ್ ಆಗೋದಂತೂ ಪಕ್ಕಾ, ಯಾಕಂದ್ರೆ ಅಷ್ಟು ಅಂದವಾಗಿ, ಚೆಂದವಾಗಿ, ಒಂದೇ ಒಂದು ಗುಂಡಿಯೂ ಇಲ್ಲದಂತೆ ನಿರ್ವಹಣೆ ಮಾಡಲಾಗಿದೆ ಈ ರಸ್ತೆಯನ್ನ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳನ್ನ ನೋಡಿದ್ರೆ, ರಸ್ತೆ ಮಧ್ಯೆ ಹೊಂಡಾ-ಗುಂಡಿ ಇದೆಯೋ ಅಥವಾ ಹೊಂಡಾ-ಗುಂಡಿ ನಡುವೆಯೇ ರಸ್ತೆ ನಿರ್ಮಾಣ ಮಾಡಲಾಗಿದ್ಯಾ ಅನ್ನೋ ಅನುಮಾನ ಮೂಡುತ್ತೆ. ಆದ್ರೆ ಬೆಂಗಳೂರಿನಲ್ಲೇ ಇರುವಂಥಹ ಎಲೆಕ್ಟ್ರಾನಿಕ್ ಸಿಟಿಯ ಈ ರಸ್ತೆಗಳನ್ನ ನೋಡಿದ್ರೆ, ಅಯ್ಯೋ, ಬೆಂಗಳೂರಲ್ಲೂ ಇಷ್ಟೊಂದು ಚೆನ್ನಾಗಿ, ನೀಟಾಗಿರೋ ರಸ್ತೆ ಇದಿಯಾ ಅಂತ ಅನಿಸೋದ್ರಲ್ಲಿ ಅನುಮಾನವೇ ಇಲ್ಲ. ಎಸ್, ಈ ಫೋಟೋದಲ್ಲಿರುವ ರಸ್ತೆಗಳನ್ನ ನೋಡಿ, ಎಷ್ಟು ನೀಟಾಗಿ, ಸ್ವಲ್ಪವೂ ಕಸ ಕಡ್ಡಿ ಇಲ್ಲದಂತೆ, ಹುಡುಕಿದರೂ ಒಂದು ರಸ್ತೆ ಮಧ್ಯೆ ಗುಂಡಿ ಸಿಗದಂತೆ ನಿರ್ಮಾಣ ಮಾಡಲಾಗಿದೆ.
ಬೆಂಗಳೂರಿನ ಸ್ವಚ್ಛತೆಗಾಗಿ 'ಜೊತೆ ಜೊತೆಯಲಿ' ನಟ ಅನಿರುದ್ಧ್ ಪಣ, ಬಿಬಿಎಂಪಿಗೆ ಸಲಹೆ!
ಬಿಬಿಎಂಪಿ ಅಥವಾ ಸರ್ಕಾರ ಇಷ್ಟು ಸೊಗಸಾಗಿ ಇರೋ ರಸ್ತೆ ನಿರ್ಮಾಣ ಮಾಡಿದ್ಯಾ ಅಂತ ಕನ್ಫ್ಯೂಸ್ ಆಗ್ಬಡಿ, ಯಾಕಂದ್ರೆ ಈ ರಸ್ತೆ ನಿರ್ಮಾಣ ಮಾಡಿರೋದು ಹಾಗೆಯೇ ಇದರ ಮೇಂಟೇನೆನ್ಸ್ ಮಾಡ್ತಾ ಇರೋದು ಎಲ್ಸಿಟಾ (ELCITA). ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್ಶಿಪ್ ಅಥಾರಿಟಿ (Electronics City Industrial Township Authority) ಎಲೆಕ್ಟ್ರಾನಿಕ್ ಸಿಟಿಯ Phase-1 ಹಾಗೂ Phase-2 ನಿರ್ವಹಣೆ ಮಾಡ್ತಾ ಇದ್ದು, ಇಲ್ಲಿನ ರಸ್ತೆ ಸೇರಿದಂತೆ ಉಳಿದೆಲ್ಲಾ ನಿರ್ವಹಣೆಯ ಜವಾಬ್ದಾರಿಯನ್ನ ವಹಿಸಿಕೊಂಡಿದೆ. ಅದರಂತೆ ವೈಜ್ಞಾನಿಕವಾಗಿ ಈ ರಸ್ತೆಗಳನ್ನ ನಿರ್ಮಾಣ ಮಾಡಿದ್ದು, ಹುಡುಕಿದರೂ ಸಹ ಒಂದೇ ಒಂದು ಹೊಂಡಾ-ಗುಂಡಿ ಇಲ್ಲಿ ಸಿಗೋದಿಲ್ಲ. ಒಂದು ವೇಳೆ ಗುಂಡಿ ಬಿದ್ದರೂ ಸಹ ಅತೀ ಶೀಘ್ರದಲ್ಲೇ ಅದನ್ನ ಪ್ಯಾಚ್ ಅಪ್ ಮಾಡೋ ಕಾರ್ಯವನ್ನ ಈ ಅಥಾರಿಟಿ ಮಾಡುತ್ತೆ.
2002ರಲ್ಲಿ ELCITA, ಎಲೆಕ್ಟ್ರಾನಿಕ್ಸ್ ಸಿಟಿ ವೆಸ್ಟ್ ಹಂತದಲ್ಲಿ ಮೊದಲ ಬಾರಿಗೆ ರಸ್ತೆಗಳನ್ನು ನಿರ್ಮಾಣ ಮಾಡಿದ್ದು, ಅಂದಿನಿಂದ ಇಂದಿನವರೆಗೂ ಸಹ ರಸ್ತೆ ನಿರ್ಮಾಣದ ವಿಷಯದಲ್ಲಿ ಹಾಗೂ ಅದರ ಕ್ವಾಲಿಟಿ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಅಗಿಲ್ಲ. ರಸ್ತೆ ನಿರ್ಮಾಣ ಹಂತದಿಂದ ಹಿಡಿದು ಪ್ರತಿಯೊಂದು ಕೆಲಸವನ್ನೂ ಸಹ ಕೂಲಂಕಷವಾಗಿ ಪರಿಶೀಲನೆ ನಡೆಸೋ ELCITA, ರಸ್ತೆ ಡಾಂಬರೀಕರಣ, ಡಾಂಬರಿನ ತಾಪಮಾನ, ರೋಲಿಂಗ್, ರಸ್ತೆಯ ಲೆವೆಲಿಂಗ್ ಸೇರಿದಂತೆ ಎಲ್ಲಾ ಕಾರ್ಯಗಳಲ್ಲಿಯೂ ಸಹ ಉತ್ತಮ ಗುಣಮಟ್ಟವನ್ನ ಖಚಿತಪಡಿಸಿಕೊಳ್ಳುತ್ತೆ.
ELCITA ಪ್ರಕಾರ ರಸ್ತೆಯಲ್ಲಿ ಗುಂಡಿಗಳು ಬೀಳೋದಕ್ಕೆ ಮಳೆ ನೀರು ಕಾರಣ ಎನ್ನಲಾಗಿದೆ, ಆದ್ದರಿಂದ ಈ ರಸ್ತೆಗಳಲ್ಲಿ ಮಳೆ ನೀರು ನಿಲ್ಲದಂತೆ ಒಳಚರಂಡಿ ವ್ಯವಸ್ಥೆಯನ್ನ ಸುಸಜ್ಜಿತವಾಗಿ ಮಾಡಲಾಗಿದೆ. ಅದಲ್ಲದೆ, ರಸ್ತೆಯ ಗುಣಮಟ್ಟ ಕಾಪಾಡಲು ಒಂದಿಷ್ಟು ಅಂಶಗಳನ್ನೂ ಸಹ ELCITA ಪಾಲನೆ ಮಾಡ್ತಿದೆ. ವಿಶೇಷವಾಗಿ ಮಳೆಗಾಲ ಆರಂಭವಾಗುವುದಕ್ಕೂ ಮೊದಲು ಈ ಪ್ರದೇಶದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಮುಚ್ಚಿಹೋಗಿರುವ ಚರಂಡಿಗಳನ್ನ ಸರಿಪಡಿಸುವುದು. ಚರಂಡಿಗಳಲ್ಲಿ ಡಂಪಿಂಗ್ ನಡೆಯದಂತೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳವುದು. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ ಕಾರ್ಯವನ್ನ ಮಾಡಲಾಗುತ್ತೆ.
ಒಂದು ವೇಳೆ ವಿಪರೀತ ಮಳೆ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಯಾವುದೇ ಗುಂಡಿಗಳು ಬಿದ್ದಿದ್ದರೆ, ಅವುಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕಂಡು, ಮಳೆ ಅಲ್ಪ ವಿರಾಮ ನೀಡಿದ ಬಳಿಕ ಆ ಗುಂಡಿಗಳನ್ನ ಮುಚ್ಚುವ ಕಾರ್ಯವನ್ನ ಮಾಡಲಾಗುತ್ತೆ. ಗುಂಡಿಗಳನ್ನು ಮುಚ್ಚಲು, ELCITA ತನ್ನದೇ ಆದ ಇಂಜಿನಿಯರ್ಗಳ ತಂಡವನ್ನು ಹೊಂದಿದೆ. ಪ್ರತ್ಯೇಕ ಟೆಂಡರ್ ಅನ್ನು ನೀಡುವುದಕ್ಕಿಂತ ಗುಂಡಿಗಳನ್ನು ಸರಿಪಡಿಸಲು ನಾವೇ ಒಂದು ತಂಡವನ್ನ ರೆಡಿ ಇಟ್ಟರೆ ಕೆಲಸವೂ ತ್ವರಿತಗತಿಯಲ್ಲಿ ಸಾಗುವುದು ಹಾಗೆಯೇ ಖರ್ಚು ಸಹ ಖಡಿಮೆ ಆಗುವುದು ಎಂಬುದು ELCITAದ ಅಭಿಪ್ರಾಯವಾಗಿದೆ.
Bengaluru Flyoverಗಳು ಎಷ್ಟು ಸುರಕ್ಷಿತ? ಪರಿಶೀಲನೆಗೆ ಮುಂದಾಯ್ತು ಬಿಬಿಎಂಪಿ
ಒಟ್ಟಿನಲ್ಲಿ ಬೆಂಗಳೂರಿನ ಹೊಂಡಾ-ಗುಂಡಿಯಿಂದ ರಸ್ತೆಗಳಲ್ಲಿ ಬೇಸರ ಮಾಡಿಕೊಂಡು ಸಂಚಾರ ಮಾಡೋವ್ರು ಈ ರಸ್ತೆಯನ್ನ ನೋಡಿದ್ರೆ ಖುಷಿ ಪಡೋದ್ರಲ್ಲಿ ಎರಡು ಮಾತಿಲ್ಲ. ಇನ್ನಾದ್ರೂ ನಮ್ಮ ಬಿಬಿಎಂಪಿ ಎಚ್ಚೆತ್ತುಕೊಂಡು ELCITA ದಂತೆ ಬೆಂಗಳೂರಿನ ರಸ್ತೆಗಳನ್ನ ಉತ್ತಮ ಗುಣಮಟ್ಟದೊಂದಿಗೆ ನಿರ್ಮಾಣ ಮಾಡಿದ್ರೆ ಇಲ್ಲಿನ ಜನರು ಸಹ ನೆಮ್ಮದಿಯಿಂದ ರಸ್ತೆಯಲ್ಲಿ ಸಂಚಾರ ಮಾಡಬಹುದಾಗಿದೆ.