Latest Videos

ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ : ರೈತರಿಗೆ ಗುಡ್ ನ್ಯೂಸ್

By Kannadaprabha NewsFirst Published Nov 28, 2023, 8:45 AM IST
Highlights

 ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಕುಡಿವ ನೀರಿನ ಕೊರತೆ ಇರುವೆಡೆ ಕೊರೆಯಲಾಗುವ ಕೊಳವೆ ಬಾವಿಗಳಿಗೆ ಯಾವುದೇ ಸಬೂಬು ನೀಡದೆ ತಕ್ಷಣ ವಿದ್ಯುತ್ ಸಂಪರ್ಕ ಒದಗಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸಚಿವ ಡಾ. ಜಿ. ಪರಮೇಶ್ವರ ಸೂಚಿಸಿದರು.

 ತುಮಕೂರು:   ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಕುಡಿವ ನೀರಿನ ಕೊರತೆ ಇರುವೆಡೆ ಕೊರೆಯಲಾಗುವ ಕೊಳವೆ ಬಾವಿಗಳಿಗೆ ಯಾವುದೇ ಸಬೂಬು ನೀಡದೆ ತಕ್ಷಣ ವಿದ್ಯುತ್ ಸಂಪರ್ಕ ಒದಗಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸಚಿವ ಡಾ. ಜಿ. ಪರಮೇಶ್ವರ ಸೂಚಿಸಿದರು.

ಅವರು ಚಿಕ್ಕನಾಯಕನಹಳ್ಳಿ ತಾ.ಪ. ಸಭಾಂಗಣದಲ್ಲಿ ನಡೆದ ತಾಲೂಕು ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಆರ್.ಆರ್ ಮೀಟರ್ ಬಂದಿಲ್ಲ ಎಂಬ ಸಬೂಬು ಹೇಳದೆ ತಕ್ಷಣ ವಿದ್ಯುತ್ ಸಂಪರ್ಕ ನೀಡುವಂತೆ ಸೂಚನೆ ನೀಡಿದರು.

ಮೇವಿನ ಕಿಟ್‌ಗಳ ಉಚಿತ ವಿತರಣೆಗೆ ಸಂಬಂಧಿಸಿದಂತೆ ವ್ಯಾಪಕ ಪ್ರಚಾರ ನೀಡುವಂತೆ ಮತ್ತು ರೈತರು ಬೆಳೆದು ಅವರು ಉಪಯೋಗಿಸಿಕೊಂಡು ಉಳಿದ ಮೇವನ್ನು ಸರ್ಕಾರದಿಂದ ಮುಂದಿನ ದಿನಗಳಲ್ಲಿ ಮರು ಖರೀದಿಸುವ ಸಾಧ್ಯತೆಯಿದ್ದು, ಈ ಕುರಿತಂತೆ ಸಹ ರೈತರಲ್ಲಿ ಅರಿವು ಮೂಡಿಸುವಂತೆ ತಿಳಿಸಿದ ಸಚಿವರು, ಎಚ್ಚರಿಕೆಯಿಂದ ಕಾಲಮಿತಿಯೊಳಗೆ ಮೇವಿನ ಕಿಟ್‌ಗಳನ್ನು ವಿತರಿಸಲು ಸೂಚಿಸಿದರು.

ನರೇಗಾ ಯೋಜನೆಯಡಿ ಬಡವರಿಗೆ ಜಾಬ್ ಕಾರ್ಡ್ಗ ವಿತರಿಸಿ ನೆರವಾಗುವಂತೆ ಸೂಚಿಸಿದರು. ಜಾನುವಾರುಗಳಿಗೆ ಸಾಂಕ್ರಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಮತ್ತು ಸಾಕಷ್ಟು ಜಾನುವಾರು ಔಷಧ ದಾಸ್ತಾನು ಮಾಡಿಕೊಳ್ಳಬೇಕು ಎಂದು ಪಶುಸಂಗೋಪನ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿಯನ್ನು ಕಳಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳು ಅಸಡ್ಡೆಯಿಂದ ವರ್ತನೆ ಮಾಡಬಾರದು ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಆಯಾ ಇಲಾಖೆಗಳ ಯಾವುದೇ ಲೋಪಕ್ಕೆ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ಎಚ್ಚರಿಸಿದರು.

ಪಿಡಿಒ ಕೆಲಸ ಮಾಡದಿದ್ದಲ್ಲಿ ಇ.ಓ.ಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. ಅಧೀನ ಸಿಬ್ಬಂದಿಗಳಿಂದ ಕೆಲಸ ಪಡೆಯುವುದು ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಕರ್ತವ್ಯವಾಗಿರುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಲ್ಲಿದ್ದು, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ತಹಶೀಲ್ದಾರ್, ಇ.ಓ ನೀವು ಮುಂಚಿತವಾಗಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು, ಮುಂದಿನ ಮಾರ್ಚ್ವರೆಗೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಶಾಸಕ ಸುರೇಶ್ ಬಾಬು ಅವರು ಮಾತನಾಡಿ, ನೀರಿನ ಸಮಸ್ಯೆ ಇರುವ ಕಡೆ ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಪೈಪ್‌ಲೈನ್‌ಗಳಿಗಾಗಿ ಕಾಯುತ್ತಿದ್ದೇವೆ. ಪೈಪ್‌ಲೈನ್‌ಗಳನ್ನು ಹಾಕಿಸಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

click me!