ಮಡಿಕೇರಿಯ ಎಇಇ ಸೇರಿದಂತೆ ಇತರೆ ಅಧಿಕಾರಿಗಳು ಸೇರಿ ಯೋಜನೆಯನ್ನು ಜಾರಿ ಮಾಡಿ 12 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಬಿಲ್ಲು ಮಾಡಿ ಸ್ವಾಹಃ ಮಾಡಿದ್ದಾರೆ. ಆದರೆ ನಾಲ್ಕು ದಿನಗಳ ಹಿಂದೆ ಈ ಕುಟುಂಬಗಳಿಗೆ 1700 ರೂಪಾಯಿಯಿಂದ ಹಿಡಿದು 2800 ರೂಪಾಯಿವರೆಗೆ ವಿದ್ಯುತ್ ಬಿಲ್ಲು ಬಂದಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಫೆ.21): ಸರ್ಕಾರಗಳೇನೋ ವಿವಿಧ ಯೋಜನೆಗಳ ಮೂಲಕ ಬಡ ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತವೆ. ಆದರೆ ಆ ಯೋಜನೆಗಳನ್ನು ಜಾರಿ ಮಾಡಬೇಕಾದ ಅಧಿಕಾರಿಗಳೇ ಇಲ್ಲಿ ಅದನ್ನು ನುಂಗಿ ನೀರು ಕುಡಿದಿದ್ದಾರೆ. ಹೌದು ಕೇಂದ್ರ ಸರ್ಕಾರದ ಬೆಳಕು ಯೋಜನೆಯಡಿಯಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಬೇಕಾಗಿದ್ದ ಕೆಇಬಿ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನೇ ಕಲ್ಪಿಸದೆ, ಲಕ್ಷ ಲಕ್ಷ ಹಣ ನುಂಗಿ ನೀರು ಕುಡಿದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
undefined
ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹಾಗೂ ಅಯ್ಯಂಗೇರಿ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 15 ಕ್ಕೂ ಹೆಚ್ಚು ಆದಿವಾಸಿ ಬುಡಕಟ್ಟು ಕುಟುಂಬಗಳಿಗೆ ಹೊಸದಾಗಿ ವಿದ್ಯುತ್ ಲೈನ್ ಎಳೆದು ಎರಡು ವರ್ಷಗಳ ಹಿಂದೆಯೇ ಸಂಪರ್ಕ ಕೊಡಬೇಕಾಗಿತ್ತು. ಗುತ್ತಿಗೆದಾರ ಸುಳ್ಯದ ವಿಶ್ವ ಎಂಬುವರು ಅದರ ಗುತ್ತಿಗೆಯನ್ನು ಪಡೆದಿದ್ದರು. ಪ್ರತೀ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಎರಡರಿಂದ ಮೂರು ಕಂಬಗಳನ್ನು ಹಾಕಿ, ವಿದ್ಯುತ್ ಲೈನ್ ಎಳೆಯಬೇಕಾಗಿತ್ತು. ಆದರೆ ವಿದ್ಯುತ್ ಲೈನ್ ಅನ್ನು ಎಳೆಯದೆ, ಮೀಟರ್ ಬೋರ್ಡನ್ನೂ ಅಳವಡಿಸದೆ, ಲಕ್ಷಾಂತರ ರೂಪಾಯಿ ಬಿಲ್ಲು ಮಾಡಿ ಬಡ ಜನರಿಗೆ ದೋಖಾ ಮಾಡಿದ್ದಾರೆ.
ಕಾಡ್ಗಿಚ್ಚು ತಡೆಗೆ ನಾಗರಹೊಳೆ ಅಭಯಾರಣ್ಯದಲ್ಲಿ 2000ಕಿಮೀ ಫೈರ್‌ಲೈನ್! ಏನಿದು ಅಗ್ನಿರೇಖೆ?
ಮಡಿಕೇರಿಯ ಎಇಇ ಸೇರಿದಂತೆ ಇತರೆ ಅಧಿಕಾರಿಗಳು ಸೇರಿ ಯೋಜನೆಯನ್ನು ಜಾರಿ ಮಾಡಿ 12 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಬಿಲ್ಲು ಮಾಡಿ ಸ್ವಾಹಃ ಮಾಡಿದ್ದಾರೆ. ಆದರೆ ನಾಲ್ಕು ದಿನಗಳ ಹಿಂದೆ ಈ ಕುಟುಂಬಗಳಿಗೆ 1700 ರೂಪಾಯಿಯಿಂದ ಹಿಡಿದು 2800 ರೂಪಾಯಿವರೆಗೆ ವಿದ್ಯುತ್ ಬಿಲ್ಲು ಬಂದಿದೆ. ವಿದ್ಯುತ್ ಬಿಲ್ಲು ಕಟ್ಟಿ, ಇಲ್ಲವೆ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ ಎಂದು ಲೈನ್ಮನ್ಗಳು ಬಂದಿದ್ದಾರೆ. ಇದು ಬಡ ಕುಟುಂಬಗಳಿಗೆ ಆತಂಕ ಮತ್ತು ಅಚ್ಚರಿ ತರಿಸಿದೆ. ನಾವು ವಿದ್ಯುತ್ ಸಂಪರ್ಕಕ್ಕಾಗಿ ಎರಡು ವರ್ಷಗಳಿಂದ ನಿರಂತರವಾಗಿ ಅರ್ಜಿ ಹಿಡಿದು ಅಲೆಯುತ್ತಿದ್ದೇವೆ. ಪದೇ ಪದೇ ಅರ್ಜಿ ಕೊಟ್ಟಿದ್ದೇವೆ. ವಿದ್ಯುತ್ ಕಂಬ ಹಾಕಿಲ್ಲ, ಲೈನ್ ಎಳೆದಿಲ್ಲ, ಮೀಟರ್ ಬೋರ್ಡ್ ಅಂತು ಇಲ್ಲವೇ ಇಲ್ಲ. ವಿದ್ಯುತ್ ದೀಪಗಳೇ ಉರಿದಿಲ್ಲ. ಆದರೂ ಎರಡುವರೆ ಸಾವಿರ ಬಿಲ್ಲು ಬಂದಿರುವುದು ಅಚ್ಚರಿಯಾಗಿದೆ. ವಿದ್ಯುತ್ ಸಂಪರ್ಕವೇ ಇಲ್ಲದೆ ಸಂಪರ್ಕ ಕಡಿತ ಮಾಡುತ್ತೇವೆ ಎಂದು ಬಂದಿದ್ದಾರಲ್ಲ ಅವರಿಗೆ ಏನು ಬುದ್ಧಿ ಸರಿಯಿಲ್ಲವೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಇನ್ನು ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಇಂದಿಗೂ ವಿದ್ಯುತ್ ಸಂಪರ್ಕ ಕೊಡದಿರುವುದು ಏಕೆ ಎಂದು ಅನುಮಾನಗೊಂಡ ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅವರು ಆರ್ಟಿಐ ಮೂಲಕ ಮಾಹಿತಿ ಪಡೆದಿದ್ದಾರೆ. ಆಗ ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ 12 ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಚೆಸ್ಕಾಂ ಇಲಾಖೆ ಮಾಹಿತಿ ನೀಡಿದೆ. ಆಗಲೇ ಕಾಳನ ರವಿ ಅವರಿಗೆ ಅಚ್ಚರಿಯಾಗಿದೆ. ಹೀಗಾಗಿ ಚೆಸ್ಕಾಂ ಇಲಾಖೆಯ ಈ ಕರ್ಮಕಾಂಡ ಬೆಳಕಿಗೆ ಬಂದಿದೆ.
ವಿದ್ಯುತ್ ಸಂಪರ್ಕ ಇಲ್ಲ ಎಂದ ಮೇಲೆ ವಿದ್ಯುತ್ ಬಳಸಿರುವುದಿಲ್ಲ. ಆದರೂ ಮಿನಿಮಮ್ ದರವೇ ಇಷ್ಟು ಬಂದಿದೆ ಎಂದ ಮೇಲೆ ಕನಿಷ್ಠ ಎರಡು ವರ್ಷದ ಹಿಂದೆಯೇ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಾಗಿ ಅಧಿಕಾರಿಗಳು ಬಿಲ್ಲು ಮಾಡಿದ್ದಾರೆ. ಇದೊಂದೇ ಪಂಚಾಯಿತಿಯಿಂದ ಆಗಿರುವ ಗೋಲ್ ಮಾಲ್ ಇದಲ್ಲ. ಬದಲಾಗಿ ಇಡೀ ಜಿಲ್ಲೆಯಲ್ಲಿ ಇಂತಹ ನೂರಾರು ಜನರಿಗೆ ದೋಖಾ ಮಾಡಲಾಗಿದೆ ಎಂದು ರವಿ ಕಾಳನ ಆಕ್ರೋಶ ವ್ಯಕ್ತಪಡಿಸಿದ್ದಾರೆ.