ಆರ್ಯ ಈಡಿಗ ಮಹಿಳೆಯರು 5 ಮಕ್ಕಳನ್ನಾದರು ಹೆರಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ. ಇದರಿಂದ ಜನಸಂಖ್ಯೆ ವೃದ್ಧಿಸಲು ಸಾಧ್ಯ ಎಂದಿದ್ದಾರೆ.
ಹರಪನಹಳ್ಳಿ (ಮಾ.15): ಆರ್ಯ ಈಡಿಗ ಸಮಾಜದ ಮಹಿಳೆಯರು ಕನಿಷ್ಠ 5 ಮಕ್ಕಳನ್ನಾದರೂ ಹೆರಬೇಕು. ಸಾಕಲು ಆಗದಿದ್ದರೆ ಮಠಕ್ಕೆ ಕಳುಹಿಸಿ ನಾವು ಸಾಕುತ್ತೇವೆ! ಇದು ಆರ್ಯ ಈಡಿಗ ಸಮಾಜದ ಗುರುಗಳಾದ ಹಾವೇರಿ ಜಿಲ್ಲೆಯ ಪ್ರಣಾವಾನಂದ ಸ್ವಾಮೀಜಿ ಕೋರಿಕೆ. ಭಾನುವಾರ ಪಟ್ಟಣದ ಕಾಶಿ ಮಠದಲ್ಲಿ ಆರ್ಯ ಈಡಿಗರ ಚಿಂತನ-ಮಂಥನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ ಈ ಮನವಿ ಮಾಡಿದರು.
ಆರ್ಯ ಈಡಿಗ ಸಮಾಜದ ಜನಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಈ ರೀತಿಯ ಮನವಿ ಮಾಡುತ್ತಿದ್ದೇನೆ ಎಂದು ಸ್ವಾಮೀಜಿ ಕಾರಣವನ್ನೂ ನೀಡಿದ್ದಾರೆ. ಇಂದು ಪ್ರತಿಯೊಂದಕ್ಕೆ ಜಾತಿ ಜನಸಂಖ್ಯೆ ಪರಿಗಣಿಸುತ್ತಾರೆ. ಆದ್ದರಿಂದ ಕನಿಷ್ಠ 5 ಮಕ್ಕಳನ್ನು ಹೆರಬೇಕು. ಸಾಕಲು ಕಷ್ಟವಾದರೆ 2 ಮಕ್ಕಳನ್ನು ನೀವು ಇಟ್ಟುಕೊಳ್ಳಿ, ಉಳಿದ 3 ಮಕ್ಕಳನ್ನು ನಮ್ಮ ಮಠಕ್ಕೆ ಕಳುಹಿಸಿ ಕೊಡಿ. ನಾವು ಸಾಕಿ ವಿದ್ಯಾಭ್ಯಾಸ ಕೊಡಿಸುತ್ತೇವೆ. ಈ ರೀತಿ ಹೆತ್ತರೆ ಇದುವೇ ಸಮಾಜಕ್ಕೆ ನೀವು ಕೊಡುವ ದೊಡ್ಡ ಕೊಡುಗೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಹೆಣ್ಮಗು ಹುಟ್ಟಿದ್ರೆ ಫೀಸೇ ತಗೋಳ್ಳಲ್ಲ ಈ ಲೇಡಿ ಡಾಕ್ಟರ್ .
ಇದೇ ವೇಳೆ ಮೀಸಲಾತಿ ವಿಚಾರವಾಗಿಯೂ ಮಾತನಾಡಿದ ಶ್ರೀಗಳು, ಈಡಿಗ ಸಮಾಜಕ್ಕೆ ಇರುವ ಶೇ.15ರ ಮೀಸಲಾತಿಗೆ ಯಾವುದೇ ತೊಂದರೆ ಕೊಡಬೇಡಿ, ನಾವೂ ಇನ್ನೊಬ್ಬರಿಗೆ ತೊಂದರೆ ಕೊಡುವುದಿಲ್ಲ, ನಮ್ಮ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದರು.
ಈಡಿಗ ಸಮಾಜದ ಶಾಸಕರು ಉಪಮುಖ್ಯ ಮಂತ್ರಿಯಾಗಲು ಅರ್ಹರಿದ್ದಾರೆ. ಆದರೆ, ಕೇಳಲು ಹಿಂಜರಿಯುತ್ತಾರೆ. ಮುಂದೆ ಈಡಿಗ ಸಮಾಜಕ್ಕೆ ಮುಖ್ಯಮಂತ್ರಿಯಾಗುವ ಅವಕಾಶ ಬರುತ್ತದೆ ಎಂದ ಅವರು, ನಾವು ಯಾವ ಸರ್ಕಾರವನ್ನೂ ಬ್ಲ್ಯಾಕ್‌ಮೇಲ್ ಮಾಡುವುದಿಲ್ಲ, ನಮ್ಮ ಹಕ್ಕು ಪಡೆಯಲು ಸಮಾಜ ಬಾಂಧವರನ್ನು ಜಾಗೃತಿ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.