ಮಾಸ್ಕ್‌ಗಳ ದರವೇ 250 ರಿಂದ 280, 300 ವರೆಗೆ ಮಾರಾಟ| ಖರೀದಿಸಲು ವಿಚಾರಿಸುತ್ತಿರುವ ಸಾರ್ವಜನಿಕರು| ಶಾಲಾ ಕಾಲೇಜುಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಲು ಸಲಹೆ|
ಬೆಳಗಾವಿ(ಮಾ.12): ಇಡೀ ಜಗತ್ತನ್ನೇ ಭೀತಿಗೆ ನೂಕಿರುವ ಮಹಾಮಾರಿ ಕೊರೋನಾ ವೈರಸ್, ಇದೀಗ ರಾಜ್ಯದಲ್ಲಿಯೂ ಪತ್ತೆಯಾಗಿದೆ. ಜತೆಗೆ ಕೊರೋನಾ ದಾಳಿಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಮಾಸ್ಕ್‌ಗಳು ಜತೆಗೆ ಹ್ಯಾಂಡ್ ಸ್ಯಾನಿಟೈಸರ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಇವೆರಡೂ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಅವುಗಳ ದರದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಮಾತ್ರವಲ್ಲ, ನಗರದ ಔಷಧಿಯ ಅಂಗಡಿಗಳಲ್ಲಿ ಅವುಗಳು ಸಮರ್ಪಕವಾಗಿ ಸಿಗದೆ ಸಾರ್ವಜನಿಕರು ಕೊರೋನಾದಿಂದ ಹೇಗೆ ರಕ್ಷಣೆ ಪಡೆಯಬೇಕು ಎಂದು ಪ್ರಶ್ನೆ ಮಾಡುವಂತಾಗಿದೆ.
ಈಗಾಗಲೇ ಜಗತ್ತಿನೆಲ್ಲೆಡೆ ಕೊರೋನಾ ಸದ್ದು ಮಾಡಿ, ಜನರನ್ನು ಭೀತಿ ನೂಕಿದೆ. ಆದರೆ ನೆರೆಯ ರಾಜ್ಯಗಳಲ್ಲಿ ಪತ್ತೆಯಾಗಿರುವ ವೈರಸ್ ಕರ್ನಾಟಕದಲ್ಲಿ ಎರಡು ದಿನಗಳಿಂದ ಪತ್ತೆಯಾಗುತ್ತಿದ್ದಂತೆ ಎಲ್ಲರೂ ಭಯಭೀತರಾಗಿದ್ದಾರೆ. ಮಾತ್ರವಲ್ಲ, ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆದರೆ, ಅದಕ್ಕೆ ಬೇಕಾದ ಮಾಸ್ಕ್‌ಗಳು, ಹ್ಯಾಂಡ್ ಸ್ಯಾನಿಟರೈಸ್‌ಗಳು ಸಾರ್ವಜನಿಕರಿಗೆ ಸರಿಯಾಗಿ ದೊರೆಯುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜನತೆ ಇವುಗಳ ಖರೀದಿಗಾಗಿಯೇ ಔಷಧ ಅಂಗಡಿಗಳಲ್ಲಿ ವಿಚಾರಣೆ ನಡೆಸುತ್ತಲೇ ಇದ್ದಾರೆ. ಆದರೆ, ಔಷಧ ಅಂಗಡಿಕಾರರು ಮಾಸ್ಕ್‌ಗಳನ್ನು ಮಾರಾಟ ಮಾಡಿದರೂ ದರಗಳು ಹೆಚ್ಚಾಗಿವೆ. ಅವುಗಳ ನಿಗದಿತ ದರಕ್ಕೂ ಮಾರಾಟ ಮಾಡಿದರೂ ಜನರು ಅವುಗಳನ್ನು ಖರೀದಿಸಲು ಮುಂದೆ ಬರುತ್ತಿಲ್ಲ.
ಅಂಗಡಿಗಳಲ್ಲಿ ಸಾಮಾನ್ಯ ಮಾಸ್ಕ್‌ಗಳ ದರವೇ 250 ರಿಂದ 280, 300 ವರೆಗೂ ಹಾಗೂ ಎನ್-59 ಎಂಬ ವಿಶೇಷ ಮಾಸ್ಕ್‌ಗಳ ಎಂಆರ್‌ಪಿ 80 ಇವೆ. ಇವುಗಳನ್ನು ಜನಸಾಮಾನ್ಯರು ಇಷ್ಟೊಂದು ಹಣ ಕೊಟ್ಟು ಹೇಗೆ ಖರೀದಿಸಬೇಕು ಎಂದು ಯೋಚನೆ ಮಾಡುವ ಹಂತದಲ್ಲಿದ್ದಾರೆ. ಕೆಲವರು ಅವುಗಳ ಬೆಲೆ ಕೇಳಿ ಪೆಚ್ಚು ಮೋರೆ ಹಾಕಿಕೊಂಡು ಸುಮ್ಮನೆ ಹೋಗುವಂತಾಗಿದೆ ಎಂದು ಹೇಳಲಾಗಿದೆ.
ಕಡಿಮೆ ಬೆಲೆಗೆ ಔಷಧ ಅಂಗಡಿಯವರು ಮಾರಾಟ ಮಾಡಲೂ ಬರುವಂತಿಲ್ಲ. ಅವುಗಳನ್ನು ಕಡಿಮೆ ಬೆಲೆಗೆ ಮಾರಿದರೆ ತಮಗೆ ನಷ್ಟವಾಗುತ್ತದೆ ಎಂದು ನೇರವಾಗಿ ಹೇಳುತ್ತಿದ್ದಾರೆ. ಹೀಗಾಗಿ ಮೂಲ ದರದಲ್ಲಿಯೇ ಅವುಗಳನ್ನು ಮಾರಾಟ ಮಾಡಲು ಮುಂದಾದರೆ ಅಶಕ್ತರು ಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇದರ ನಡುವೆ ಕೆಲವು ಶಾಲಾ ಕಾಲೇಜುಗಳಲ್ಲಿ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಬರುವಂತೆ ಅಲ್ಲಿನ ಆಡಳಿತ ಮಂಡಳಿಗಳು ಕೂಡ ಹೇಳುತ್ತಿರುವುದರಿಂದ ಅಂತಹ ಪಾಲಕರು ಅನಿವಾರ್ಯ ಎಂಬಂತೆ ಹೆಚ್ಚು ದರ ನೀಡಿ ಮಾಸ್ಕ್‌ಗಳನ್ನು ಖರೀದಿಸುತ್ತಿದ್ದಾರೆ.
ಸಿಗುತ್ತಿಲ್ಲ ಹ್ಯಾಂಡ್‌ಸ್ಯಾನಿಟೈಸರ್:
ಮಾಸ್ಕ್‌ಗಳ ಕತೆ ಒಂದೆಡೆಯಾದರೆ, ಕೊರೋನಾದಿಂದ ದೂರವಿರಲು ನಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಹೀಗಾಗಿ ಈಗ ಎಲ್ಲೆಡೆ ಹ್ಯಾಂಡ್‌ಸ್ಯಾನಿಟೈಸರ್‌ಗೆ ಎಲ್ಲಿಲ್ಲದ ಬೇಡಿಕೆ ಬಂದುಬಿಟ್ಟಿದೆ. ಇಷ್ಟು ಮಾತ್ರವಲ್ಲ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೂ ಹ್ಯಾಂಡ್‌ಸ್ಯಾನಿಟೈಸರ್ ತೆಗೆದುಕೊಂಡು ಬರುವಂತೆ ಅಲ್ಲಿನ ಶಿಕ್ಷಕರು ಸೂಚನೆ ನೀಡಿದ್ದಾರೆ. ಇದು ಕೂಡ ಹ್ಯಾಂಡ್‌ಸ್ಯಾನಿಟೈಸರ್ ಬೇಡಿಕೆಯ ಉಲ್ಬಣಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ವಿಚಿತ್ರವೆಂಬಂತೆ ಬೆಳಗಾವಿ ನಗರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿಲ್ಲ. ಔಷಧ ಅಂಗಡಿಗಳಲ್ಲಿ ಅವುಗಳು ಬೇಗನೆ ಖರ್ಚಾಗುತ್ತಿವೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವುದು ಔಷಧ ಅಂಗಡಿ ವ್ಯಾಪಾರಸ್ಥರಿಗೂ ಕಠಿಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹ್ಯಾಂಡ್‌ಸ್ಯಾನಿಟೈಸರ್ ನಗರದ ಬಹುತೇಕ ಅಂಗಡಿಗಳಲ್ಲಿ ಸಿಗುತ್ತಿಲ್ಲ.
ಜಿಲ್ಲಾಡಳಿತ, ಔಷಧ ಅಂಗಡಿಕಾರರು ಏನು ಮಾಡಬೇಕು?:
ಕೊರೋನಾ ವೈರಸ್ ಕುರಿತು ಈಗಾಗಲೇ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗಳು ಜಾಗೃತಿ ಮೂಡಿಸುತ್ತಿವೆ. ಆದರೆ, ಅದು ನೀಡಿರುವ ಮುನ್ನೆಚ್ಚ ರಿಕಾ ಕ್ರಮದಂತೆ ಮಾಸ್ಕ್‌ಗಳು ಮತ್ತು ಹ್ಯಾಂಡ್‌ಸ್ಯಾನಿಟೈಸರ್ ಸುಲಭವಾಗಿ ಸಾರ್ವಜನಿಕರ ಕೈಗೆ ಸಿಗುವಂತೆ ಮಾಡಬೇಕು. ಜತೆಗೆ ಇಂತಹ ಸಂದರ್ಭದಲ್ಲಿ ಔಷಧ ಅಂಗಡಿಗಳ ವ್ಯಾಪಾರಸ್ಥರು ಕೂಡ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಸುಲಭ ದರದಲ್ಲಿ ಸಾರ್ವಜನಿಕರಿಗೆ ಇವೆರಡೂ ಸಿಗುವಂತೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಲಾಭವನ್ನು ಕೈಬಿಟ್ಟು ಜನರ ಆರೋಗ್ಯದತ್ತ ಚಿತ್ತ ಹರಿಸಬೇಕಾದ ಅನಿವಾರ್ಯತೆ ಎಲ್ಲರಲ್ಲಿಯೂ ಇದೆ. ಇದು ಕೇವಲ ಸರ್ಕಾರದ ಮಾತ್ರ ಜವಾಬ್ದಾರಿಯಲ್ಲ. ಎಲ್ಲ ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು ಕೂಡ ಇಂತಹ ಸಂದರ್ಭದಲ್ಲಿ ಕೈಜೋಡಿಸಬೇಕಿದೆ. ಆದರೆ, ಇದು ಎಷ್ಟರಮಟ್ಟಿಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದರಲ್ಲಿ ಅನುಮಾನ ಇಲ್ಲ.
ರಕ್ತ ತಪಾಸಣೆ ವರದಿ ಕೇಳಿದ ಶಾಲೆ
ಮಹಾಮಾರಿ ಕೊರೋನಾ ವೈರಸ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಪ್ರೌಢಶಾಲೆಯ ಆಡಳಿತ ಮಂಡಳಿಯೊಂದು ತಮ್ಮ ಶಾಲೆಯ ಎಲ್ಲ ಮಕ್ಕಳಿಗೆ ರಕ್ತ ತಪಾಸಣೆ ಮಾಡಿದ ವರದಿ ನೀಡುವಂತೆ ಸೂಚನೆ ನೀಡಿದೆ.
ನಗರದ ಕ್ಲಬ್ ರಸ್ತೆಯ ವನಿತಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಲ್ಲ ಮಕ್ಕಳಿಗೆ ರಕ್ತತಪಾಸಣೆ ಮಾಡಿಸಿ, ಕಡ್ಡಾಯವಾಗಿ ವರದಿ ನೀಡುವಂತೆ ಕಟ್ಟಪ್ಪಣೆ ನೀಡಿದೆ. ಶಾಲೆಯ ಆಡಳಿತ ಮಂಡಳಿ ಈ ಕ್ರಮ ಪಾಲಕರ ಕೆಂಗಣ್ಣಿಗೆ ಗುರಿಯಾಗಿದೆ. ಈಗ ವಾರ್ಷಿಕ ಪರೀಕ್ಷೆ ಸಮಯ. ಕೆಲ ತರಗತಿ ಯ ಪರೀಕ್ಷೆಗಳು ಈಗಾಗಲೇ ನಡೆಯುತ್ತಿವೆ. ಈ ಸಮಯದಲ್ಲಿ ಮಕ್ಕಳು ಪರೀಕ್ಷಾ ಸಿದ್ಧತೆ ಮಾಡಿಕೊಳ್ಳಬೇಕು. ಇಂತಹ ಸಂದರ್ಭದಲ್ಲೇ ಮಕ್ಕಳನ್ನು ರಕ್ತ ತಪಾಸಣೆ ಮಾಡಿಸಿಕೊಳ್ಳಲು ರಕ್ತ ತಪಾಸಣೆ ಕೇಂದ್ರಗಳಿಗೆ ಮಕ್ಕಳ ಸಮೇತ ಪಾಲಕರು ಹೋಗುವುದು ಅನಿವಾರ್ಯ. ರಕ್ತ ತಪಾಸಣೆ ಕೇಂದ್ರಕ್ಕೆ ತೆರಳಿದರೆ ಯಾವ ಮಾದರಿ ತಪಾಸಣೆ ಮಾಡಿಸಬೇಕು ಎನ್ನುವುದು ಕೂಡ ಗೊಂದಲಕ್ಕೆ ಎಡೆ ಮಾಡಿದೆ.
ರಕ್ತ ತಪಾಸಣೆ ಮಾಡಿಸಿಕೊಂಡರೆ ಮುಗಿಯುವುದಿಲ್ಲ. ಅದರ ವರದಿ ತಕ್ಷಣವಂತೂ ಸಿಗುವುದಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಬಿಟ್ಟು ಮರಳಿ ರಕ್ತ ತಪಾಸಣೆ ವರದಿಯನ್ನು ಪಡೆಯಲು ಅಲೆದಾಡುವುದು ತಪ್ಪಿದ್ದಲ್ಲ. ಕೆಲ ರಕ್ತ ತಪಾಸಣೆ ಕೇಂದ್ರದಲ್ಲಿ ವೈದ್ಯರ ಶಿಫಾರಸು ಇದ್ದರೆ ಮಾತ್ರ ರಕ್ತದ ತಪಾಸಣೆ ಮಾಡುತ್ತಾರೆ. ರಕ್ತದ ಗುಂಪಿನ ಗುರುತಿಸುವ ತಪಾಸಣೆಯನ್ನು ಸಾಮಾನ್ಯವಾಗಿ ಎಲ್ಲ ರಕ್ತ ತಪಾಸಣೆ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಆದರೆ, ಈ ಶಾಲೆ ಆಡಳಿತ ಮಂಡಳಿ ರಕ್ತದ ಯಾವ ಸೋಂಕಿನ ಬಗ್ಗೆ ತಪಾಸಣೆ ಮಾಡಿಸಬೇಕು ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ. ರಕ್ತದ ಮಾದರಿ ತಪಾಸಣೆ ಮಾಡಿಸಿಕೊಂಡು ವರದಿ ನೀಡುವಂತೆ ಹೇಳಿದೆ. ಹಾಗಾಗಿ, ಇದು ಪಾಲಕರನ್ನು ಗೊಂದಲಕ್ಕೀಡು ಮಾಡಿದೆ. ಶಾಲೆಯ ಮಕ್ಕಳು ರಕ್ತ ತಪಾಸಣೆಗಾಗಿ ಪರೀಕ್ಷಾ ಸಿದ್ಧತೆ ಬಿಟ್ಟು ಅಲೆಯುವಂತಾಗಿದೆ.
ವನಿತಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಎಲ್ಲ ಮಕ್ಕಳ ರಕ್ತದ ಮಾದರಿ ತಪಾಸಣೆ ಮಾಡಿಸಿ, ವರದಿ ನೀಡುವಂತೆ ಸೂಚನೆ ನೀಡಿರುವುದು ಸರಿಯಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿ. ಆದರೆ, ಈ ರೀತಿ ದಿಢೀರನೇ ಮಕ್ಕಳ ರಕ್ತದ ತಪಾಸಣೆ ವರದಿ ನೀಡುವಂತೆ ಹೇಳಿರುವುದು ಸರಿಯಲ್ಲ. ಒಂದು ವೇಳೆ ಯಾರಾದರು ಅನಾರೋಗ್ಯ ಪೀಡಿತ ಮಕ್ಕಳಿದ್ದರೆ ಅಂತಹವರ ರಕ್ತದ ತಪಾಸಣಾ ವರದಿ ಕೇಳಬೇಕಿತ್ತು ಎಂದು ಹೆಸರು ಹೇಳಲು ಇಚ್ಛಸದ ಪಾಲಕರೊಬ್ಬರು ತಿಳಿಸಿದ್ದಾರೆ.