ದಸರಾ ರಜೇಲಿ ಕುಂಚಗಳ ಮೂಲಕವೇ ಶಾಲೆಯ ಮೆರುಗು ಹೆಚ್ಚಿಸುವ ಶಿಕ್ಷಕ ಪರಶುರಾಮ ನಗನೂರು

Published : Oct 26, 2026, 08:50 AM IST
Teacher

ಸಾರಾಂಶ

ಲಿಂಗಸುಗೂರಿನ ಅಡವಿಬಾವಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಪರಶುರಾಮ ನಗನೂರು ಅವರು ದಸರಾ ರಜೆಯಲ್ಲಿ ಸ್ವಂತ ಖರ್ಚಿನಲ್ಲಿ ಶಾಲೆಯ ಗೋಡೆಗಳಿಗೆ ಆಕರ್ಷಕ ಚಿತ್ರಗಳನ್ನು ಬಿಡಿಸಿದ್ದಾರೆ. ಇವರ ಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಶಾಲೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದೆ.

ಗುರುರಾಜ ಗೌಡೂರು

ರಾಯಚೂರು: ಒಂದು ಕಡೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಗುರುತರ ಹೊಣೆಗಾರಿಕೆ, ಮತ್ತೊಂದೆಡೆ ವಸತಿ ಶಾಲೆಯ ವಾರ್ಡನ್ ಆಗಿ ಮಕ್ಕಳ ಆರೈಕೆ ಮತ್ತು ಶಿಸ್ತಿನ ಜವಾಬ್ದಾರಿ. ಇದರ ನಡುವೆ ಸಾಮಾಜಿಕ ಒಡನಾಟವೂ ಇದೆ. ಇಷ್ಟೆಲ್ಲ ಹೊಣೆಗಾರಿಕೆಗಳ ನಡುವೆಯೂ ಕುಂಚ ಹಿಡಿದಾಗ ಅವರ ಕೈಯಲ್ಲಿ ಬಣ್ಣಗಳ ಲೋಕವೇ ಅರಳುತ್ತದೆ. ಗೋಡೆಗಳು ಚಿತ್ರಪಟಗಳಾಗುತ್ತವೆ; ಕಲ್ಪನೆಗಳು ಬಣ್ಣಗಳ ಮೂಲಕ ಜೀವ ತಳೆಯುತ್ತವೆ. ವೃತ್ತಿ, ಜವಾಬ್ದಾರಿ ಮತ್ತು ಕಲಾಸಕ್ತಿಯನ್ನು ಸಮನ್ವಯಗೊಳಿಸಿಕೊಂಡು ಮುನ್ನಡೆಯುತ್ತಿರುವವರು ಪರಶುರಾಮ ನಗನೂರು.

ದಸರಾ ರಜೆಯಲ್ಲಿ ಸುಂದರ ಕೆಲಸ

ತಾಲೂಕಿನ ಅಡವಿಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರ ಕಾಯಕದೊಂದಿಗೆ ವಾರ್ಡನ್ ಹುದ್ದೆಯ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿದ್ದು, ಶಿಕ್ಷಕನಾಗಿ ಪಾಠದ ಜವಾಬ್ದಾರಿ, ವಾರ್ಡನ್ ಆಗಿ ವಸತಿ ಶಾಲೆಯ ನಿರ್ವಹಣೆ ಸಾಗಿರುವ ಸಮಯದಲ್ಲಿಯೇ ವಸತಿ ಶಾಲೆಗೆ ದಸರಾ ರಜೆ ನೀಡಿದ್ದರು, ತಾವೇ ಸ್ವಂತ ಖರ್ಚಿನಲ್ಲಿ ಶಾಲೆಗೆ ಬಣ್ಣ ಬಳಿಯುವುದರ ಜತೆಗೆ, ಗೋಡೆಗಳಿಗೆ ವಿವಿಧ ಚಿತ್ರಗಳನ್ನು ಬಿಡಿಸಿ ಆಕರ್ಷಣೀಯವಾಗಿಸಿದ್ದಾರೆ. ಬಹುತೇಕ ಶಿಕ್ಷಕರು ದಸರಾ ರಜೆಯಲ್ಲಿ ತೆರಳಿರುವ ಈ ವೇಳೆಯಲ್ಲಿ ಇವರು ಶಾಲೆಯ ಅಂದ ಹೆಚ್ಚಿಸುವ ಕಾಯಕದಲ್ಲಿ ನಿರತರಾಗಿ ಕಲಾವಿದನಾಗಿ ಅವರಿಗೆ ಕುಂಚದ ಮೇಲಿನ ಪ್ರೀತಿಯನ್ನು ಬಿಂಬಿಸುತ್ತದೆ.

ಸಾಧನೆಗೆ ಸಾಮೂಹಿಕ ಪರಿಶ್ರಮದ ಸಾಥ್: ಶಾಲೆಯ ಎಸ್ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯ ಸಾಧನೆ ಶಾಲೆಯ ಶೈಕ್ಷಣಿಕ ವಾತಾವರಣದತ್ತ ಗಮನ ಸೆಳೆಯುತ್ತದೆ. ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಹಾಗೂ ಲಿಂಗಸುಗೂರು ತಾಲೂಕಿನಲ್ಲಿ ಪ್ರಥಮ ಸ್ಥಾನ ಗಳಿಸಿರುವ ಶಾಲೆಯ ಸಾಧನೆಯ ಹಿಂದೆ ವಿದ್ಯಾರ್ಥಿಗಳ ಪರಿಶ್ರಮದ ಜತೆಗೆ ಶಿಕ್ಷಕರು ಮತ್ತು ಸಿಬ್ಬಂದಿಯ ಮಾರ್ಗದರ್ಶನ, ಪ್ರೋತ್ಸಾಹವೂ ಮಹತ್ವದ್ದಾಗಿದೆ.

ಶಾಲೆಯ ಸೌಂದರ್ಯ ಹೆಚ್ಚಿಸುವ ಕಾರ್ಯ

ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಬೇಕೆಂಬ ಉದ್ದೇಶದಿಂದ ಅವರಿಗೆ ನಿರಂತರ ಪ್ರೋತ್ಸಾಹ ನೀಡುವುದು, ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವುದು ಹಾಗೂ ಅವರ ಸಾಮರ್ಥ್ಯವನ್ನು ಗುರುತಿಸಿ ಮಾರ್ಗದರ್ಶನ ನೀಡುವುದು ಶಿಕ್ಷಕರ ಜವಾಬ್ದಾರಿ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಶಾಲೆಯ ಎಲ್ಲ ಸಿಬ್ಬಂದಿಯ ಸಹಕಾರವೂ ಸೇರಿದಾಗ ಉತ್ತಮ ಫಲಿತಾಂಶ ಸಾಧ್ಯವಾಗುತ್ತದೆ ಎಂದು ಪರಶುರಾಮ ನಗನೂರು ಹೇಳುತ್ತಾರೆ.

ನಮ್ಮ ವಸತಿ ಶಾಲೆಯ ಚಿತ್ರ ಕಲಾ ಶಿಕ್ಷಕರಾಗಿರುವ ಪರಶುರಾಮ ನಗನೂರು ಅವರು ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವ ಜೊತೆಗೆ ಬಿಡುವಿನ ಸಮಯದಲ್ಲಿ ಶಾಲೆಯ ಸೌಂದರ್ಯ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದು, ಇದು ಇನ್ನಿತರ ಶಿಕ್ಷಕರಿಗೂ ಮಾದರಿಯಾಗಲಿದೆ.

-ನಾಗಭೂಷಣ, ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಅಡವಿಬಾವಿ ಲಿಂಗಸಗೂರು.

PREV
Read more Articles on
click me!

Recommended Stories

₹1,500 ಇದ್ದ ಜಮ್‌ಜಮ್‌ ನೀರು ಈಗ ₹2,200! ಬೆಂಗಳೂರಿನಲ್ಲಿ ಖರ್ಜೂರ, ಡ್ರೈಫ್ರೂಟ್ಸ್‌ ಬೆಲೆ ಏರಿಕೆ
ಶಿಳ್ಳೆ, ಚಪ್ಪಾಳೆ, ಅಭಿಮಾನಿಗಳ ಅಬ್ಬರ: ಬೆಂಗಳೂರಿನಲ್ಲಿ ಇಂದಿಗೂ ಸದ್ದು ಮಾಡುತ್ತಿವೆ ನರಸಿಂಹರಾಜು ಕಾಲದ ಚಿತ್ರಮಂದಿರಗಳು!