* ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು
* ನಿತ್ಯವೂ ಮದ್ಯ ಸೇವಿಸಿ ಊರಲ್ಲಿ ಗಲಾಟೆ ಮಾಡುತ್ತಿದ್ದ ವ್ಯಕ್ತಿ
* ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ ಪೊಲೀಸರು
ಕೊಪ್ಪಳ(ಜೂ.17): ತಾಲೂಕಿನ ಬಸಾಪುರ ಗ್ರಾಮದಲ್ಲಿ ಕುಡಿದ ಅಮಲಿನಲ್ಲಿ ಕುಡುಕನೋರ್ವ ಗಾಂಧೀಜಿ ಪ್ರತಿಮೆಯನ್ನು ಕೆಡವಿ, ಅನೇಕರ ಆಕ್ರೋಶಕ್ಕೆ ತುತ್ತಾಗಿದ್ದಾನೆ. ಸ್ಥಳಕ್ಕೆ ಡಿಎಸ್‌ಪಿ ಹಾಗೂ ಕೊಪ್ಪಳ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಯನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹೇಶ ಕಲ್ಯಾಣಪ್ಪ ಓಜಿನಹಳ್ಳಿ ಈ ಕೃತ್ಯ ಎಸಗಿದ ವ್ಯಕ್ತಿ. ನಿತ್ಯವೂ ಸೇವಿಸಿ ಊರಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಬುಧವಾರ ಮದ್ಯ ಸೇವಿಸಿ ಗ್ರಾಮದಲ್ಲಿನ ಗಾಂಧಿ ವೃತ್ತದ ಬಳಿ ಆಗಮಿಸಿದ್ದಾನೆ. ಬಾಯಿ ಮಾಡುತ್ತಲೇ ವೃತ್ತದ ಮೇಲ್ಭಾಗಕ್ಕೆ ತೆರಳಿ ಗಾಂಧಿ ಪ್ರತಿಮೆಯನ್ನು ಹಿಡಿದು ಎಳೆದು, ಕೆಡವಿದ್ದಾನೆ.
ಶಿಕ್ಷಕರ ವರ್ಗಾವಣೆಯ ಷರತ್ತು ಸಡಿಲಿಕೆಗೆ ಹೆಚ್ಚಿದ ಒತ್ತಡ
ಮುನಿರಾಬಾದ್ ಠಾಣೆ ಪಿಎಸ್‌ಐ ಪ್ರಶಾಂತ ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೃತ್ಯದ ಕುರಿತು ಸ್ಥಳೀಯ ಮುಖಂಡರಿಂದಲೂ ಮಾಹಿತಿ ಪಡೆದಿದ್ದಾರೆ. ಮದ್ಯ ವ್ಯಸನಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಭಗ್ನಗೊಂಡ ಗಾಂಧೀಜಿ ಮೂರ್ತಿಯನ್ನು ಸ್ಥಳೀಯ ಮುಖಂಡರು ಗ್ರಾಮದಲ್ಲಿನ ಗೋದಾಮಿನಲ್ಲಿ ಇರಿಸಿದ್ದಾರೆ. ಗಾಂಧೀಜಿ ಪ್ರತಿಮೆ ಕೆಡವಿದ ಘಟನೆಯ ಬೆನ್ನಲ್ಲೇ ಕೊಪ್ಪಳ ಡಿಎಸ್‌ಪಿ ಗೀತಾ, ತಹಸೀಲ್ದಾರ್ ಅಮರೇಶ ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.